Thursday, May 9, 2024

 ಕಥೆ-391

 ಅತಿ ಸಾಮಾನ್ಯ ಜನರೇ ನಮಗೆ ಕಷ್ಟ ಕಾಲದಲ್ಲಿ ಆಸರೆಯಾಗುವವರು

ರವಿ ಆವತ್ತು‌ ಕೆಲಸಕ್ಕೆ ಹೊರಡುವ ವೇಳೆಯಲ್ಲಿ ಜೇಬಿನಿಂದ ರೂಪಾಯಿಯ ಬಿಲ್ಲೆಯೊಂದು ನೆಲಕ್ಕೆ ಬಿದ್ದು ಠಣ್ಣನೆ ಸದ್ದು ಮಾಡಿ ಚಪ್ಪಲಿ ಸ್ಟಾಂಡಿನ ಅಡಿಗೆ ಸೇರಿಕೊಂಡಿತು . ಜೇಬಿನಲ್ಲಿ ನೋಟುಗಳ ಕಂತೆ ಇದ್ದುದರಿಂದ ಅದಕ್ಕಾಗಿ ಹುಡುಕಾಡುವುದು ತುರ್ತಿನ ಕೆಲಸವಲ್ಲ ಎಂದು ಭಾವಿಸಿ ಬೈಕು ಹತ್ತಿದ.

ಕೆಲವೊಮ್ಮೆ ಬಿಲ್ಲೆಗಳು ಜೇಬಿಗೆ ಭಾರವೆನಿಸಿದಾಗ ಅವುಗಳನ್ನು ಮೇಜಿನ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದ ಪುಸ್ತಕಗಳು , ನ್ಯೂಸ್ ಪೇಪರುಗಳ ನಡುವೆ ಸುರಿದು ಎಂದಿನಂತೆ ಕೆಲಸಕ್ಕೆ ಹೊರಟುಬಿಡುತ್ತಿದ್ದ‌ .

ಕೆಲವು ಬಿಲ್ಲೆಗಳು ಟೀವಿ ಸ್ಟಾಂಡಿನ ಅಡಿಯಲ್ಲಿ , ಮಂಚದ ಕೆಳಗೆ , ಸೋಫಾದ ಸಂದಿಯಲ್ಲಿ ಬೆಳಕಿನ ಭಾಗ್ಯ ಕಾಣದೇ ತಿಂಗಳುಗಟ್ಟಲೆ ಜೀವ ಹಿಡಿದುಕೊಂಡಿರುತ್ತಿದ್ದವು .


ಹೀಗೆ ಕೊಠಡಿಯ ಹಲವೆಡೆಗಳಲ್ಲಿ ಎಷ್ಟೋ ನಾಣ್ಯಗಳು ರವಿಯ ಸ್ಪರ್ಶಕ್ಕಾಗಿ ಪರಿತಪಿಸುತ್ತಾ ಧೂಳು ತಿನ್ನುತ್ತಾ ಬಿದ್ದಿರುತ್ತಿದ್ದವು . ಆದರೆ ರವಿ ಅವುಗಳನ್ನು ಮರೆತು ಶತಮಾನಗಳಾಯಿತೇನೋ ಎಂಬಂತೆ ವರ್ತಿಸುತ್ತಿದ್ದ . ಗಾಳಿಗೆ ಹಾರಿ ಹೋಗುವ ವಸ್ತುಗಳಂತೂ ಅಲ್ಲ , ಕೈಕಾಲುಗಳಂತೂ ಇಲ್ಲ . ಅವು ಯಾವತ್ತಿದ್ದರೂ ತನ್ನವೇ ಎಂಬ ಭಾವನೆ ರವಿಗೆ . ಕೈಯಲ್ಲಿ ದುಡ್ಡು ಯಾವತ್ತೂ ಓಡಾಡುತ್ತಿದ್ದರಿಂದ ಆ ಬಿಲ್ಲೆಗಳ ಅವಶ್ಯಕತೆಯೂ ಅವನಿಗೆ ಬಂದಿರಲಿಲ್ಲ .

ಆದರೆ ಎಲ್ಲಾ ವಾರವೂ ಶುಕ್ರವಾರ ಅಲ್ವಲ್ಲ . ಆವತ್ತು ರವಿಗೆ ಆಘಾತ ಕಾದಿತ್ತು . ಹಿಂದಿನ ರಾತ್ರಿ ಸಿನೆಮಾ ಹಾಲಿನ ನೂಕುನುಗ್ಗಲಿನಲ್ಲಿ ಯಾರೋ ಪರ್ಸ್ ಎಗರಿಸಿಬಿಟ್ಟಿದ್ದರು . ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ ಎನ್ನುವ ಹಾಗೆ ಏಟಿಎಮ್ ಕಾರ್ಡ್ , ಕ್ರೆಡಿಟ್ ಕಾರ್ಡುಗಳೆಲ್ಲ ಪರ್ಸಿನ ಜೊತೆ ಹೋಗಿಬಿಟ್ಟಿದ್ದವು . ಅಂಗಿಯ ಜೇಬಿನಲ್ಲಿ ನಯಾ ಪೈಸೆಯಿರಲಿಲ್ಲ. ತಿಂಗಳ ಸಂಬಳವೂ ಅಕೌಂಟಿಗೆ ಬಿದ್ದಿರಲಿಲ್ಲ.

ಹೊಟ್ಟೆ ತಾಳ ಹಾಕಲು ಶುರು ಮಾಡಿತ್ತು . ಹಸಿವಿಗಿಂತ ದೊಡ್ಡ ಗುರು ಇನ್ನೊಂದಿಲ್ಲ. ನಿಜದ ಗುರು ಬೆತ್ತದಲ್ಲಿ ಬಡಿದು ಅರಿವು ಮೂಡಿಸಿದರೆ ಹಸಿವು ಆತ್ಮವನ್ನೇ ಬಡಿದು ಮಂಡಿಯೂರಿಸುತ್ತದೆ. ಅಹಮ್ಮನ್ನು ಮಟ್ಟು ಮಾಡುತ್ತದೆ. ರವಿಗೂ ಹಾಗೆಯೇ ಆಯಿತು.

ಬಿಸಾಡಿ ಮರೆತಿದ್ದ ನಾಣ್ಯಗಳೆಲ್ಲ ಒಮ್ಮೆಗೇ ನೆನಪಾದವು.

ಯಾವ್ಯಾವುದೋ ಸಂದಿಗೆ ಸೇರಿಕೊಂಡಿದ್ದ ನಾಣ್ಯಗಳನ್ನು ಧಾವಂತದಿಂದ ಹೆಕ್ಕತೊಡಗಿದ . ಪ್ರತಿ ನಾಣ್ಯ ಸಿಕ್ಕಾಗಲೂ ಅವನ ಕಣ್ಣುಗಳು ವಜ್ರದ ನಿಧಿಯೇ ಸಿಕ್ಕಂತೆ ಪ್ರಜ್ವಲಿಸುತ್ತಿದ್ದವು ‌. ಕೊನೆಗೆ ಚಪ್ಪಲಿಗಳ ಸಂದಿಗೆ ಸೇರಿಕೊಂಡಿದ್ದ ನಾಣ್ಯವನ್ನೂ ಬಿಡದೇ ಹೆಕ್ಕಿ ಕಣ್ಣಿಗೊತ್ತಿ ಅಂಗೈ ಮುಷ್ಟಿಗೆ ಸೇರಿಸಿಕೊಂಡ.

ನೋಡನೋಡುತ್ತಿದ್ದಂತೆಯೇ ಒಂದು ತೆಂಗಿನ ಹೋಳಿಗೆ ತುಂಬುವಷ್ಟು ನಾಣ್ಯಗಳನ್ನು ಗಣಿಗಾರಿಕೆ ಮಾಡಿದ.

ಅವನ ಹೊಟ್ಟೆಗೆ ಮಾತ್ರವಲ್ಲ , ಬೈಕಿನ ಹೊಟ್ಟೆಗೂ ಸಾಕಾಗುವಷ್ಟು ಬಿಲ್ಲೆಗಳು ಸಿಕ್ಕಿದವು. ಅರಿವಿಲ್ಲದಂತೆ ಆನಂದಭಾಷ್ಪ ಜಿನುಗಿತು.

ನಾಣ್ಯಗಳನ್ನು ರವಿ ನಿರ್ಲಕ್ಷಿಸಿರೂ ಅವು ಅವನಿಂದ ದೂರಾಗಲಿಲ್ಲ, ಹತ್ತಿರವಿದ್ದುಕೊಂಡೇ ವಿಷಮ ಸ್ಥಿತಿಯಲ್ಲಿ ಅವನ ಕೈ ಹಿಡಿದವು. ವಾಸ್ತವದಲ್ಲೂ ಅಷ್ಟೇ.. ನಾವು ಅಂತಸ್ತಿನ ಅಹಮ್ಮಿನಿಂದ ಸ್ಥಾನಮಾನದ ಬಿಗುಮಾನದಿಂದ ದೂರವಿಡುವ ಅತಿ ಸಾಮಾನ್ಯ ಜನರೇ ನಮಗೆ ಕಷ್ಟ ಕಾಲದಲ್ಲಿ ಆಸರೆಯಾಗುವವರು ಅನ್ನಿಸಿತು. ಒಂದು ದೊಡ್ಡ ಪಾಠವನ್ನೇ ಕಲಿತಂತಾಯಿತು.

ಕೃಪೆ: ಗವಿ ಸ್ವಾಮಿ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು