Tuesday, May 7, 2024

 ಕಥೆ-389

ನಾನೊಂದು ಚುಕ್ಕೆ! ನೀನೊಂದು ಚುಕ್ಕೆ......

ನಮ್ಮನ್ನು ಚುಕ್ಕೆ ಎಂದು ಕರೆಯುವ ಧೈರ್ಯ ಯಾರಿಗಿದೆ? ಆದರೆ ನೀವೊಂದು ಚುಕ್ಕೆಯೊಳಗಿನ ಚುಕ್ಕೆ ಎಂದು ಧೈರ್ಯವಾಗಿ ಹೇಳಿದ ನಿಜಜೀವನದ ಘಟನೆಯೊಂದು ಇಲ್ಲಿದೆ. ಒಂದು ಮಧ್ಯಾಹ್ನ ಸಾಕ್ರೆಟಿಸರು ತಮ್ಮ ಶಿಷ್ಯರೊಂದಿಗೆ ಮಾತನಾಡುತ್ತಾ ಕುಳಿತಿದ್ದರು. ಆಗ ಶ್ರೀಮಂತರೊಬ್ಬರು ಅಲ್ಲಿಗೆ ಬಂದರು. ಸಾಕ್ರೆಟಿಸರು ಅವರನ್ನು ಗಮನಿಸಲಿಲ್ಲ. ಶ್ರೀಮಂತರು ಸಾಕ್ರೆಟಿಸರನ್ನು ‘ನಾನು ಯಾರೆಂದು ನಿಮಗೆ ಗೊತ್ತಿಲ್ಲವೇ? ನಾನು ಅಥೇನ್ಸ ನಗರದಲ್ಲಿ ಅತ್ಯಂತ ಶ್ರೀಮಂತ.

ಅರಮನೆಯಂಥ ಮನೆ, ನೂರಾರು ಎಕರೆ ಜಮೀನು, ಆಸ್ತಿಪಾಸ್ತಿ ಹೊಂದಿದ್ದೇನೆ. ನೀವು ನನ್ನನ್ನು ಗುರುತಿಸಲಿಲ್ಲವೇ?’ ಎಂದು ಅಬ್ಬರಿಸಿದರು. ಸಾಕ್ರೆಟಿಸರು ನಸುನಗುತ್ತಲೇ ‘ಕ್ಷಮಿಸಿ. ನಾನು ತಮ್ಮ ಅರಮನೆಯಂಥ ಮನೆಯನ್ನೂ, ನೂರಾರು ಎಕರೆ ಜಮೀನನ್ನೂ ನೋಡಿಲ್ಲ. ತಾವು ಅವುಗಳನ್ನು ತೋರಿಸುವ ಕೃಪೆ ಮಾಡಿದರೆ ನಾನು ಕೃತಾರ್ಥನಾಗತ್ತೇನೆ’ ಎಂದರು. ಶ್ರೀಮಂತರು ‘ನೀವು ನನ್ನೊಂದಿಗೆ ಬರುವಿರಾದರೆ ಅದನ್ನೆಲ್ಲ ತೋರಿಸುತ್ತೇನೆ’ ಎಂದರು. ಸಾಕ್ರೆಟಿಸರು ‘ನಿಮ್ಮೊಂದಿಗೆ ಬರಲು ನನಗೆ ಸಾಧ್ಯವಿಲ್ಲ.

ನನ್ನ ಬಳಿ ಭೂಪಟವಿದೆ. ಅದರಲ್ಲಿ ನಿಮ್ಮ ಮನೆಯನ್ನೂ, ಜಮೀನನ್ನೂ ತೋರಿಸಿದರೆ ನನಗೆ ಉಪಯೋಗವಾಗಬಹುದು’ ಎಂದು ಹೇಳಿ ಭೂಪಟವನ್ನು ತೆಗೆದು ಹರಡಿ ‘ಶ್ರೀಮಂತರೇ ಇದು ನಮ್ಮ ದೇಶದ ಭೂಪಟ. ಇದರಲ್ಲಿ ಅಥೇನ್ಸ ನಗರವನ್ನು ತೋರಿಸಿ’ ಎಂದು ಕೇಳಿದರು. ಶ್ರೀಮಂತರು ಭೂಪಟ ನೋಡಿದರು, ಕೊಂಚ ಹುಡುಕಿದರು. ಆನಂತರ ‘ಇಗೋ ನೋಡಿ. ಈ ಚುಕ್ಕೆಯೇ ಅಥೇನ್ಸ ನಗರ’ ಎಂದರು. ಸಾಕ್ರೆಟಿಸರು ‘ಅಥೇನ್ಸ ನಗರ ತೋರಿಸಿದಿರಿ. ಒಳ್ಳೆಯದಾಯಿತು. ಈಗ ನಿಮ್ಮ ಅರಮನೆಯನ್ನೂ, ನೂರಾರು ಎಕರೆ ಜಮೀನನ್ನೂ ತೋರಿಸಿ’ ಎಂದು ಕೇಳಿದರು. ಶ್ರೀಮಂತರು ಗಟ್ಟಿಯಾಗಿ ನಕ್ಕು ‘ಭೂಪಟದಲ್ಲಿ ಅಥೇನ್ಸ ನಗರವೇ ಒಂದು ಚುಕ್ಕೆಯಾಗಿ ತೋರಿಸಲ್ಪಟ್ಟಿದೆ. ಆ ಚಿಕ್ಕ ಚುಕ್ಕೆಯಲ್ಲಿ ನನ್ನ ಅರಮನೆಯನ್ನೂ, ಜಮೀನನ್ನೂ ಹೇಗೆ ತೋರಿಸಲು ಸಾಧ್ಯ?’ ಎಂದು ಕೇಳಿದರು.

ಸಾಕ್ರೆಟಿಸರೂ ಮತ್ತೂ ಗಟ್ಟಿಯಾಗಿ ನಕ್ಕು ‘ಶ್ರೀಮಂತರೇ, ನಿಮ್ಮ ಕೈಯಲ್ಲಿರುವುದು ಈ ದೇಶದ ಭೂಪಟ. ಪ್ರಪಂಚದ ಭೂಪಟ ತೆಗೆದುಕೊಂಡರೆ ಅಲ್ಲಿ ನಮ್ಮ ದೇಶವೂ ಒಂದು ಚುಕ್ಕೆಯಂತೆ ಕಾಣಬಹುದು. ಇಡೀ ಜಗತ್ತಿನ ಭೂಪಟವನ್ನು ತೆಗೆದುಕೊಂಡರೆ ಅಲ್ಲಿ ನಮ್ಮ ಪ್ರಪಂಚವೂ ಒಂದು ಚುಕ್ಕೆಯಂತೆ ಕಾಣಬಹುದು. ಅದರಲ್ಲಿ ಎಷ್ಟು ಸೂರ್ಯಲೋಕಗಳೋ, ಎಷ್ಟು ಚಂದ್ರಲೋಕಗಳೋ, ಎಷ್ಟು ಭೂಲೋಕಗಳೋ ಯಾರಿಗೆ ಗೊತ್ತು? ಅವನ್ನೆಲ್ಲ ನೋಡುವ ನನಗೆ ನಿಮ್ಮ ಅರಮನೆ-ಜಮೀನು, ನೀವೂ ಕಾಣಿಸಲಿಲ್ಲ. ನಿಮಗೆ ಅವಮಾನ ಮಾಡಬೇಕೆಂಬುದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ತಪ್ಪನ್ನು ಕ್ಷಮಿಸುತ್ತೀರಾ?’ ಎಂದಾಗ, ಶ್ರೀಮಂತರಿಗೆ ಸಾಕ್ರೆಟಿಸ್ ಎಷ್ಟು ದೊಡ್ಡವರು, ತಾವೆಷ್ಟು ಸಣ್ಣವರು ಎಂಬುದರ ಅರಿವಾಯಿತು.


ಅವರು ಮೆಲುದನಿಯಲ್ಲಿ ‘ಸಾಕ್ರೆಟಿಸರೇ, ನನ್ನ ಸಿರಿವಂತಿಕೆಯ ಬಗ್ಗೆ ನಾನೇ ಬೆಳೆಸಿಕೊಂಡಿದ್ದ ದುರಭಿಮಾನದಿಂದ ಹೀಗೆಲ್ಲ ಮಾತನಾಡಿದೆ. ನನ್ನನ್ನು ಕ್ಷಮಿಸಿಬಿಡಿ. ನನಗೂ ಏನಾದರೂ ಉಪದೇಶ ಕೊಡಿ’ ಎಂದರು. ಸಾಕ್ರೆಟಿಸರು ‘ನಿಮಗೆ ನಾನು ಉಪದೇಶ ಕೊಡುವುದಿಲ್ಲ. ಅದರ ಬದಲು ಈ ಭೂಪಟವನ್ನೇ ನಿಮಗೆ ಉಡುಗೊರೆಯಾಗಿ ಕೊಡುತ್ತೇನೆ. ಮುಂದೆಂದಾದರೂ ನಿಮಗೆ ನಿಮ್ಮ ಸಿರಿವಂತಿಕೆಯ ಬಗ್ಗೆ ನಿಮ್ಮ ಅರಮನೆಯಂಥ ಮನೆ ಬಗ್ಗೆ, ನೂರಾರು ಎಕರೆ ಜಮೀನಿನ ಬಗ್ಗೆ ಅಹಂಕಾರ ಎನಿಸಿದರೆ, ಆಗ ನೀವು ಈ ಭೂಪಟವನ್ನು ಕೈಗೆತ್ತಿಕೊಂಡು ನಿಮ್ಮ ಸಿರಿವಂತಿಕೆಯನ್ನು ಇದರಲ್ಲಿ ಹುಡುಕಿ. ಆಗ ನೀವ್ಯಾರು? ಎಷ್ಟು ದೊಡ್ಡವರೆಂಬುದು ಅರ್ಥವಾಗುತ್ತದೆ. ನೀವು ಸಣ್ಣದೊಂದು ಚುಕ್ಕೆಯೊಳಗಿನ ಅತೀ ಸಣ್ಣ ಚುಕ್ಕೆಯೆಂಬುದು ಅರಿವಾಗುತ್ತದೆ’ ಎಂದು ಹೇಳಿದರಂತೆ.

ಶ್ರೀಮಂತರು ಸಾಕ್ರೆಟಿಸರಿಗೆ ಧನ್ಯವಾದಗಳನ್ನು ಅರ್ಪಿಸಿ ಹೊರಟು ಹೋದರಂತೆ. ನಮಗೂ ಯಾವಾಗಲಾದರೂ ನಾವು ಬಹಳ ದೊಡ್ಡವರೆಂಬ ಭಾವನೆ ಬಂದಾಗ ನಾವೂ ಒಂದು ಗ್ಲೋಬ್ ತೆಗೆದುಕೊಂಡು ನಮ್ಮ ದೊಡ್ಡಸ್ತಿಕೆಯನ್ನು ಅದರಲ್ಲಿ ಹುಡುಕಬಹುದು. ನಾವೂ ಸಣ್ಣ ಚುಕ್ಕೆಯೊಳಗಿನ ಅತೀ ಸಣ್ಣ ಚುಕ್ಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.                 

ಕೃಪೆ: ಭೀಮು ಕಂಬಾರ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು