Tuesday, June 4, 2024

 ಕಥೆ-417

ದುಡಿಮೆಯ ಮಹತ್ವ

ಒಂದು ಊರಿನಲ್ಲಿ ಗೋವಿಂದನೆಂಬ ರೈತನಿದ್ದ. ಆತನ ಹೆಂಡತಿ ಸುಬ್ಬಿ. ಇವರಿಬ್ಬರಿಗೂ ಮೂವರು ಮಕ್ಕಳಿದ್ದರು. ಆದರೆ ಇಬ್ಬರು ಮಕ್ಕಳು ಕಾಯಿಲೆ ಬಂದು ತೀರಿಕೊಂಡಿದ್ದರು. ಮೂರನೆಯವ ವೀರೇಶ. ತಮ್ಮ ಕರುಳ ಕುಡಿಯಾಗಿ ಉಳಿದುಕೊಂಡ ಒಬ್ಬನೇ ಮಗನನ್ನು ಗೋವಿಂದ ಮತ್ತು ಸುಬ್ಬಿ ತುಂಬಾ ಮುದ್ದಿನಿಂದ ಸಾಕಿದ್ದರು.

ವೀರೇಶನೋ ತುಂಬಾ ಉಡಾಳ ಬುದ್ದಿಯವನಾಗಿದ್ದ. ಸಿಕ್ಕಿದ್ದೆಲ್ಲ ಬೇಕು. ಹಠದ ಸ್ವಭಾವ. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎನ್ನುವ ಆಲೋಚನೆಯನ್ನೂ ಮಾಡದೆ ದುಡುಕಿ ಏನಾದರೊಂದು ಅವಗದ ಮಾಡಿಬಿಡುತ್ತಿದ್ದ. ಗೋವಿಂದ ವೀರೇಶನನ್ನು ಶಾಲೆಗೆ ಸೇರಿಸಿದ್ದರೂ ಅಲ್ಲಿಂದಲೂ ಏನಾದರೂ ದೂರು ಬಂದೆ ಬರುತ್ತಿತ್ತು. ಬೈದು ಬುದ್ಧಿ ಹೇಳಿದರೆ ಮಗ ಕೋಪ ಮಾಡಿಕೊಳ್ಳುತ್ತಾನೆ, ಬೇಸರ ವ್ಯಕ್ತಪಡಿಸುತ್ತಾನೆ. ಇದ್ದೊಬ್ಬ ಮಗ ನಾಳೆ ಏನಾದರೂ ಜೀವಕ್ಕೆ ಅಪಾಯ ತಂದುಕೊಂಡರೆ ಎಂಬ ಭಯ. ಗೋವಿಂದ ಮತ್ತು ಸುಬ್ಬಿಗೆ ಏನು ಮಾಡಬೇಕೆಂಬುದೇ ತೋಚುತ್ತಿರಲಿಲ್ಲ.

ಒಮ್ಮೆ ಏನಾಯಿತೆಂದರೆ ಗೋವಿಂದ ತನ್ನ ತೋಟದಲ್ಲಿ ಒಂದಿಷ್ಟು ಬಾಳೆ ಸಸಿಗಳನ್ನು ನೆಟ್ಟು ಬಂದಿದ್ದ. ಅವುಗಳನೆಲ್ಲಾ ಚೆನ್ನಾಗಿ ನೀರು ಗೊಬ್ಬರ ಹಾಕಿ ಆರೈಕೆ ಮಾಡಿದ್ದ ಕೂಡ. ಕಷ್ಟ ಪಟ್ಟು ಬೆವರು ಸುರಿಸಿ ನೆಟ್ಟಿದ್ದು ಫಲ ಬಂದ ಮೇಲೆ ಅದನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಮನೆ ಖರ್ಚನ್ನು ನಿಭಾಯಿಸುವುದಕ್ಕೆ ಅನುಕೂಲವಾಗುತ್ತದೆ ಎಂಬುದು ಅವನ ಆಲೋಚನೆ. ಕೆಲವೇ ದಿವಸಗಳಲ್ಲಿ ಸಸಿಗಳೆಲ್ಲ ಸೊಂಪಾಗಿ ಬೆಳೆದು ಸುಂದರ ಗೊಂಬೆಗಳಂತೆ ಕಾಣುತ್ತಿದ್ದವು. ಗೋವಿಂದನಿಗೆ ಖುಷಿಯಾಗಿತ್ತು.

ಒಂದು ದಿನ ತೋಟದಿಂದ ಬಂದ ಗೋವಿಂದ ಕೈಯಲ್ಲಿದ್ದ ಕತ್ತಿಯನ್ನು ಮನೆಯ ಜಗುಲಿಯ ಒಂದು ಮೂಲೆಯಲ್ಲಿ ಇಟ್ಟಿದ್ದ. ಇದನ್ನು ನೋಡಿದ ವೀರೇಶ ಆ ಕತ್ತಿಯನ್ನು ತೆಗೆದುಕೊಂಡು ಸಿಕ್ಕಿದ್ದೆಲ್ಲ ಕಡಿಯುತ್ತ ತೋಟದ ಕಡೆ ಬಂದ. ಅವನಿಗೆ ಕಡಿದಾಗ ಬರುವ ಕಚಕ್ ಕಚಕ್ ಸದ್ದು ಒಂದು ರೀತಿಯ ಮಜಾ ಕೊಟ್ಟಿತು. ಉತ್ಸಾಹದಿಂದ ಅಲ್ಲಿದ್ದ ಗಿಡಗಳನ್ನೆಲ್ಲ ಕಡಿಯುತ್ತಾ ಹೋದ. ಹಸಿರಿನಿಂದ ಕಂಗೊಳಿಸುತ್ತಿದ್ದ ತೋಟ ಬಯಲಾಗಿಬಿಟ್ಟಿತು. ವೀರೇಶನೋ ತಾನೇನೋ ದೊಡ್ಡ ಸಾಧನೆ ಮಾಡಿ ಬಂದವನಂತೆ ತಂದೆಯ ಬಳಿ ಬಂದು ತಾನು ಗಿಡಗಳನ್ನು ಕಡಿದ ವಿಚಾರವನ್ನು ಖುಷಿಯಿಂದ ಹೇಳಿಕೊಂಡ.

ಗೋವಿಂದನಿಗೆ ಅನುಮಾನ ಬಂತು. ಆತ ತೋಟಕ್ಕೆ ಹೋಗಿ ನೋಡಿದರೆ ಬಂಗಾರದಂತಹ ಬಾಳೆ ಸಸಿಗಳೆಲ್ಲ ನೆಲಸಮವಾಗಿದ್ದವು. ತಾನು ಅಷ್ಟೆಲ್ಲಾ ಕಷ್ಟಪಟ್ಟು ನೆಟ್ಟಿದ್ದನ್ನೆಲ್ಲ ಒಂದೇ ನಿಮಿಷದಲ್ಲಿ ಹಾಳು ಮಾಡಿದ ಮಗನ ಮೇಲೆ ತುಂಬಾ ಸಿಟ್ಟು ಬಂತು. ಆದರೆ ಗೋವಿಂದ ದುಡುಕಲಿಲ್ಲ. ತಾಳ್ಮೆ ವಹಿಸಿದ. ಹೇಗಾದರೂ ಮಾಡಿ ಮಗನಿಗೆ ಬುದ್ಧಿ ಕಲಿಸಬೇಕು ಇಲ್ಲದಿದ್ದಲ್ಲಿ ಅವನ ಭವಿಷ್ಯಕ್ಕೆ ತೊಂದರೆ ಎನಿಸಿತು. ಆತ ಮಗನನ್ನು ಕರೆದುಕೊಂಡು ಹೋಗಿ ಒಂದಿಷ್ಟು ಬಾಳೆ ಸಸಿಗಳನ್ನು ತಂದು ತೋಟಕ್ಕೆ ಹೋಗಿ ಮಗನ ಹತ್ತಿರವೇ ಗುಣಿ ಹೊಡಿಸಿ ಸಸಿಗಳನ್ನು ನೆಡಿಸಿದ. ದುಡಿಮೆಯ ಮಹತ್ವವನ್ನು ಅನುಭವದಿಂದ ಬರುವಂತೆ ಮಾಡಿದ. ವೀರೇಶನಿಗೆ ಈಗ ಅರ್ಥವಾಯಿತು. ಅವನಿಗೂ ಕೆಲಸ ಮಾಡಿ ಮಾಡಿ ಮೈಯಿಂದ ಬೆವರು ಸೋರುತ್ತಿತ್ತು. ಆತ ಸೋತು ಸುಸ್ತುಬಡಿದ.

ಅಯ್ಯೋ ನಾನೆಂಥ ಕೆಲಸ ಮಾಡಿದೆ ಎಂದು ಮರುಗಿದ. ಬಾಳೆ ಸಸಿಗಳನ್ನು ನೆಡಲು ಅಪ್ಪ ಎಷ್ಟು ಕಷ್ಟಪಟ್ಟಿದ್ದಾರೆ ಅದನ್ನು ನಾನು ಒಂದು ನಿಮಿಷದಲ್ಲಿ ಹಾಳುಗೆಡವಿಬಿಟ್ಟೆ ಎಂದು ಪಶ್ಚಾತ್ತಾಪಟ್ಟ. ಕೂಡಲೇ ಅಪ್ಪನ ಬಳಿ ಹೋಗಿ ಕ್ಷಮೆ ಕೇಳಿದ. ಆಗ ಗೋವಿಂದ ಹೇಳಿದ "ಮಗನೆ ನೀನು ಸಸಿಗಳನ್ನು ಕಡಿದ ಕೂಡಲೇ ನಿನಗೆ ಬೈದಿದ್ದರೆ, ಬಡಿದಿದ್ದರೆ ಬೇಸರ ಮಾಡಿಕೊಂಡು ಸುಮ್ಮನಿದ್ದು ಬಿಡುತ್ತಿದ್ದೆ ಮತ್ತೆ ಇನ್ನೊಂದು ದಿನ ಇಂತಹ ಇನ್ನೊಂದು ತಪ್ಪು ಮಾಡುತ್ತಿದ್ದೆ. ನಿನಗೆ ದುಡಿಮೆಯ ಮಹತ್ವ ತಿಳಿಯುತ್ತಿರಲಿಲ್ಲ ನಿನ್ನ ತಪ್ಪು ನಿನಗೆ ಗೊತ್ತಾಗುತ್ತಿರಲಿಲ್ಲ. ಅಲ್ಲದೆ ನೀನು ಯಾವಾಗಲೂ ದುಡಿಕಿ ನೀರ್ಧಾರ ತೆಗೆದುಕೊಳ್ಳಬಾರದು. ನಿನ್ನಲ್ಲಿ ತಾಳ್ಮೆ ಬರಬೇಕು. ಇವೆಲ್ಲದರ ಅರಿವು ನಿನಗಾಗಲೆಂದು ನೀನು ಹಾಳು ಮಾಡಿದ್ದನ್ನು ನಿನ್ನ ಬಳಿಯೇ ಮಾಡಿಸಿದೆ" ಎಂದನು. ಅಪ್ಪನ ಮಾತಿನಿಂದ ವೀರೇಶನಿಗೆ ಸಂತೋಷವಾಯಿತು. ಅಂದಿನಿಂದ ಅವನು ತನ್ನ ಸ್ವಭಾವವನ್ನು ಬದಲಾಯಿಸಿಕೊಂಡು ಒಳ್ಳೆಯ ವ್ಯಕ್ತಿಯಾಗಿ ಬೆಳೆದನು.

ಕೃಪೆ:ಕಿಶೋರ್.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು