Saturday, July 27, 2024

 ಕಥೆ-469

ಪ್ರತ್ಯುಪಕಾರದ ಅಪೇಕ್ಷೆ ?


ನಾರಾಯಣಪುರದ ಗೋವಿಂದಶೆಟ್ಟಿ ಭಾರಿ ಶ್ರೀಮಂತ, ಅಷ್ಟೇ ನ್ಯಾಯ­ವಂತ. ತನ್ನ ಸಹೋದ್ಯೋಗಿಗಳನ್ನು ಮನೆಯ­ವ­ರಂತೆಯೇ ನೋಡಿಕೊ­ಳ್ಳುತ್ತಿದ್ದ. ಶ್ರೀಧರ­ಪುರದ ಸಿದ್ದಪ್ಪಶೆಟ್ಟಿಯೂ ಆಗರ್ಭ ಶ್ರೀಮಂತನೇ. ಅವನಿಗೆ ಗೋವಿಂದ­­ಶೆಟ್ಟಿಯೊಡನೆ ವ್ಯವಹಾರದೊಂದಿಗೆ ಸ್ನೇಹವೂ ಇತ್ತು. ಇಬ್ಬರೂ ತಮ್ಮ ತಮ್ಮ ವ್ಯವಹಾರಗಳನ್ನು ಮಾಡಿಕೊಂಡು ಸುಖ­ವಾಗಿದ್ದರು.


ಒಂದು ಬಾರಿ ಶ್ರೀಧರ­­ಪುರದ ಸಿದ್ದಪ್ಪಶೆಟ್ಟಿಗೆ ಅನೇಕ ಕಾರಣ­ಗಳಿಂದ ವ್ಯಾಪಾರದಲ್ಲಿ ಭಾರಿ ಹಾನಿ­ಯಾಯಿತು. ಬದುಕುವುದೇ ದುಸ್ತರ­ವಾಯಿತು. ಆಗ ಸಿದ್ದಪ್ಪಶೆಟ್ಟಿ ನಾರಾಯ­ಣಪುರಕ್ಕೆ ಬಂದು ಗೋವಿಂದ ಶೆಟ್ಟಿ­ಯನ್ನು ಕಂಡ. ಸ್ನೇಹಿತನನ್ನು ಕಂಡೊಡನೆ ಗೋವಿಂದಶೆಟ್ಟಿ ಎದ್ದು ಆಲಂಗಿಸಿ­ಕೊಂಡು, ಮನೆಗೆ ಕರೆದೊಯ್ದು ಸ್ವಾಗತ ಮಾಡಿದ. ಬಂದ ಕಾರಣವನ್ನು ತಿಳಿದ ಮೇಲೆ ಹೇಳಿದ, ‘ಗೆಳೆಯಾ, ನಿನ್ನ ಕಷ್ಟ ಸಮಯ­ದಲ್ಲಿ ಸಮಾನಭಾಗಿ ನಾನು. ನನ್ನದೆಲ್ಲದರ ಅರ್ಧ ನಿನಗೆ ಕೊಡುತ್ತೇನೆ, ಚಿಂತೆ ಬೇಡ’ . ನಂತರ ತನ್ನಲ್ಲಿದ್ದ ಹಣದಲ್ಲಿ ಅರ್ಧ ಹಣವನ್ನು ಕೊಡುವುದಲ್ಲದೇ ತನ್ನ ಆಸ್ತಿಯಯನ್ನು ಭಾಗ ಮಾಡಿಸಿ ಒಂದು ಭಾಗವನ್ನು ಸಿದ್ದಪ್ಪ­ಶೆಟ್ಟಿಗೆ ಕೊಟ್ಟುಬಿಟ್ಟ.


ಸಿದ್ದಪ್ಪಶೆಟ್ಟಿ ಸಂತೋಷದಿಂದ ಶ್ರೀಧರಪುರಕ್ಕೆ ಮರಳಿ ಮತ್ತೆ ತನ್ನ ವ್ಯಾಪಾರ ಪ್ರಾರಂಭಿಸಿ ಹಣ ಗಳಿಸಿದ. ಹತ್ತು ವರ್ಷಗಳು ಕಳೆದವು. ಈಗ ನಾರಾಯಣಪುರದ ಗೋವಿಂದ­ಶೆಟ್ಟಿಗೆ ಅದೇ ಸ್ಥಿತಿ ಬಂತು. ತೀರ ನಿರ್ಗತಿಕನಾದಾಗ ಗೋವಿಂದಶೆಟ್ಟಿ ತನ್ನ ಸ್ನೇಹಿತ ಸಿದ್ದಪ್ಪಶೆಟ್ಟಿಯನ್ನು ನೆನಪಿಸಿ­ಕೊಂಡ. ತನ್ನ ಆತ್ಮೀಯ ಗೆಳೆಯ ತನ್ನ ಕೈ ಬಿಡುವುದಿಲ್ಲವೆಂಬ ಅಪಾರ ನಂಬಿಕೆ ಅವನಿಗೆ. ತನ್ನ ಹೆಂಡತಿಯನ್ನು ಕರೆದು­ಕೊಂಡು ಶ್ರೀಧರಪುರಕ್ಕೆ ಬಂದ. ಹೆಂಡತಿ­­ಯನ್ನು ಧರ್ಮಶಾಲೆಯಲ್ಲಿ ಇಳಿಸಿ ‘ನೀನು ರಸ್ತೆಯಲ್ಲಿ ನಡೆದು­ಕೊಂಡು ಬರುವುದು ಸರಿಯಲ್ಲ. ನಾನು ಹೋಗಿ ಗೆಳೆಯನ ಜೊತೆಗೆ ಮಾತನಾ­ಡಿದಾಗ ಅವನು ಒಂದು ಸಾರೋಟು ಕಳುಹಿಸುತ್ತಾನೆ. ನೀನು ಅದರಲ್ಲಿ ಬಾ’ ಎಂದು ಹೇಳಿ ಶೆಟ್ಟಿಯ ಮನೆಗೆ ಹೋದ. ಆಳುಗಳಿಗೆ ತಾನು ಬಂದ ವಿಷಯವನ್ನು ಸಿದ್ದಪ್ಪ ಶೆಟ್ಟಿಗೆ ಹೇಳಲು ಕೇಳಿಕೊಂಡ.


ಅವರು ಶೆಟ್ಟಿಗೆ ಹೇಳಿದಾಗ, ‘ಇದೆಲ್ಲಿಂದ ಪೀಡೆ ಬಂತಪ್ಪಾ?’ ಎಂದುಕೊಂಡು ಹೊರಗೆ ಬರದೇ ಮೂರು ತಾಸು ಗೋವಿಂದ­ಶೆಟ್ಟಿಯನ್ನು ಮನೆಯ ಹೊರಗೇ ಕಾಯಿಸಿದ. ನಂತರ ತಾನೇ ಹೊರಗೆ ಬಂದು ಮುಖ ಗಂಟಿಕ್ಕಿ­ಕೊಂಡು, ‘ಏನು ಬಂದೆ?’ ಎಂದು ಕೇಳಿದ. ಗೋವಿಂದಶೆಟ್ಟಿ ತನ್ನ ಕಷ್ಟ­ಗಳನ್ನು ಹೇಳಿಕೊಂಡ ಮೇಲೆ ‘ನಿನ್ನ ಕರ್ಮಕ್ಕೆ ನಾನೇನು ಮಾಡಲಿ?’ ಎಂದ. ಆಮೇಲೆ, ‘ನನ್ನಿಂದೇನಾಗುತ್ತದೋ ಅದನ್ನು ಮಾಡುತ್ತೇನೆ. ನಿನ್ನೆಯೇ ಎರಡು ಸಾವಿರ ಚೀಲ ಅಕ್ಕಿಯ ರಾಶಿ ಮಾಡಿದ್ದೇನೆ. ಅದರ ಹೊಟ್ಟು ಬೇಕಾ­ದಷ್ಟಿದೆ. ನನ್ನ ಒಂದು ಸೇರು ಹೊಟ್ಟು ಐದು ಕೋಟಿ ಹಣಕ್ಕೆ ಸಮ’ ಎಂದು ಸೇವಕರನ್ನು ಕರೆಸಿ ಗೋವಿಂದಶೆಟ್ಟಿಯ ಉಡಿಯಲ್ಲಿ ಐದು ಸೇರು ಹೊಟ್ಟು ಹಾಕಿ ಕಳಿಸಿದ.


ಧರ್ಮಶಾಲೆಗೆ ಹೊಟ್ಟಿ­ನೊಂದಿಗೆ ಬಂದ ಗಂಡನನ್ನು ಕಂಡು ಶೆಟ್ಟಿಯ ಹೆಂಡತಿ ಬಹಳ ದುಃಖದಿಂದ ಅಳತೊಡಗಿದಳು. ಆಗ ಅಲ್ಲಿಗೆ ಮತ್ತೊಬ್ಬ ವ್ಯಾಪಾರಿ ಬಂದ. ಅವನು ಹಿಂದೆ ಗೋವಿಂದಶೆಟ್ಟಿಯಿಂದ ಸಹಾಯ ಪಡೆದವನು. ಓಡಿ ಬಂದು ಗೋವಿಂದ­ಶೆಟ್ಟಿಯ ಕಾಲಿಗೆರಗಿ ವಿಷಯ ತಿಳಿದ. ಅವನ ಮಾವನೇ ಆ ರಾಜ್ಯದ ರಾಜನ ಮಂತ್ರಿ. ಗೋವಿಂದಶೆಟ್ಟಿಯನ್ನು ಮಂತ್ರಿ ರಾಜನ ಬಳಿಗೆ ಕರೆ­ದೊಯ್ದ.


ರಾಜ ಸಿದ್ದಪ್ಪಶೆಟ್ಟಿಯನ್ನು ಕರೆಯಿಸಿ ಹಿಂದೆ ಗೋವಿಂದಶೆಟ್ಟಿ ಕೊಟ್ಟಿದ್ದ­ನ್ನೆಲ್ಲ ಮರಳಿಸು­ವಂತೆ ಆಜ್ಞೆ ಮಾಡಿದ. ಆದರೆ ಗೋವಿಂದ ಶೆಟ್ಟಿ ಹೇಳಿದ, ‘ಪ್ರಭೂ, ನನಗೆ ನಾನು ಕೊಟ್ಟ ಹಣ ಬೇಡ. ನನ್ನ ವ್ಯಾಪಾರ ಪ್ರಾರಂಭಿಸುವುದಕ್ಕೆ ಸ್ವಲ್ಪ ಹಣ ಕೊಡಿಸಿದರೆ ಸಾಕು. ನಾನು ಅದನ್ನೇ ಶಕ್ತಿಯಿಂದ ಬೆಳೆಸುತ್ತೇನೆ. ಕೊಟ್ಟಿ­ದ್ದನ್ನೆಲ್ಲ ಮರಳಿ ಪಡೆದರೆ ಅದು ಸ್ನೇಹ ಹೇಗಾದೀತು? ಅದೂ ವ್ಯಾಪಾರವೇ ಅಗು­ತ್ತದೆ’. ಅಂತೆಯೇ ಸ್ವಲ್ಪ ಹಣವನ್ನು ತೆಗೆದುಕೊಂಡು ನಾರಾಯಣಪುರಕ್ಕೆ ನಡೆದ.


ನಾವು ಮಾಡಿದ ಉಪಕಾರಕ್ಕೆ ಪ್ರತಿ­ಯಾಗಿ ಯಾರಾದರೂ ಉಪಕಾರ ಮಾಡಿದರೆ ಧನ್ಯವಾದ ಹೇಳುವುದರಿಂದ ಸಮಾಧಾನ ಸಿಗುತ್ತದೆ. ಹಾಗೆ ಪ್ರತಿ ಉಪಕಾರ ಮಾಡಲಿ ಎಂದು ಅಪೇಕ್ಷೆ ಇಟ್ಟುಕೊಂಡರೆ ಅದು ಉಪಕಾರವಾಗದೇ ವ್ಯಾಪಾರ­ವಾಗು­ತ್ತದೆ. ನಮ್ಮಿಂದ ಸಾಧ್ಯ­­ವಿ­ದ್ದರೆ, ಜನರಿಗೆ ಸಹಾಯ ಮಾಡಿ, ಅವರಿಂದ ಅಪೇಕ್ಷೆ ಎಷ್ಟು ಹೆಚ್ಚು ಮಾಡಿಕೊಳ್ಳು­ತ್ತೇವೋ ಅಷ್ಟು ಹೆಚ್ಚು ಕೊರಗುತ್ತೇವೆ. ನಾವು ಮಾಡಿದ್ದು, ರಾಷ್ಟ್ರಕ್ಕೆ, ಸಮಾಜಕ್ಕೆ, ಪರಿವಾರಕ್ಕೆ, ಹೆಂಡತಿಗೆ, ಮಕ್ಕಳಿಗೆ ಹೀಗೆ ಯಾರಿಗಾದರೂ ಆಗಬಹುದು. ಮಾಡಿ ಮರೆತು ಬಿಡುವುದು ಒಳ್ಳೆಯದು. ಪಡೆದವರು ನೆನಪಿಟ್ಟು­ಕೊಂಡರೆ ಕೃತಜ್ಞತೆ ಹೇಳೋಣ. ಆಗ ನಮ್ಮ ಮನಸ್ಸಿಗೆ ನೋವಾಗು­ವುದಿಲ್ಲ. ಅಪೇಕ್ಷೆ ಇಲ್ಲದ ಮನಸ್ಸು ಸದಾ ಗರಿಬಿಚ್ಚಿದ ಹಕ್ಕಿಯಂತೆ ಹಗುರ. 

ಪ್ರತ್ಯುಪಕಾರದ ಅಪೇಕ್ಷೆ ಮನಸ್ಸಿಗೆ ಹೆಚ್ಚು ನೋವು ನೀಡುತ್ತದೆ.             

ಕೃಪೆ :ನೆಟ್.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು