ಕಥೆ-553
ಸುಪ್ರಿಯ ಮತ್ತು ಮಹಾತ್ಮ ಬುದ್ದ
ಒಮ್ಮೆ ಗೌತಮ ಬುದ್ಧರು ವೈಶಾಲಿಯಲ್ಲಿದ್ದ ಸಮಯದಲ್ಲಿ ಭಾರೀ ಕ್ಷಾಮ ಉಂಟಾಯಿತು. ಮಳೆ ಇಲ್ಲದೆ, ನೀರಿಲ್ಲದೆ, ಬೆಳೆ ಇಲ್ಲದೆ ಜನರು ಸಂಕಷ್ಟಕ್ಕೊಳಗಾದರೂ. ಆಹಾರವಿಲ್ಲದೆ ಬಡವರು ಕೃಶರಾಗಿ ಸಾಯತೊಡಗಿದರು. ಕರುಣಾಮಯಿ ಬುದ್ಧನಿಗೆ ಈ ದಾರುಣ ದೃಶ್ಯ ನೋಡಿ ಬಹಳ ದುಃಖವಾಗತೊಡಗಿತು. ಭೀಕರ ಕ್ಷಾಮ ನಿವಾರಣೆಗೆ ಏನು ಉಪಾಯ ಮಾಡುವುದೇ? ಅವರ ಕಷ್ಟ ಹೇಗೆ ನಿವಾರಣೆ ಮಾಡುವುದು ಎಂದು ಆಲೋಚಿಸತೊಡಗಿದ.
ಬುದ್ಧ ಇರುವ ಆಶ್ರಮದ ಪಕ್ಕದಲ್ಲಿ ತುಂಬಾ ಧನಿಕರು, ವ್ಯಾಪಾರಿಗಳು ವಾಸಿಸುತ್ತಿದ್ದರು. ಅವರು ಆಗಾಗ ಬುದ್ಧನ ದರ್ಶನಕ್ಕೆ ಬರುತ್ತಿದ್ದರು. ಅವರಿಗಾರಿಗೂ ಅನ್ನ ನೀರಿಲ್ಲದೆ ಬಳಲುವ ಬಡವರ ಮೇಲೆ ಕರುಣೆ ಇರಲಿಲ್ಲ. ಆಗ ಬುದ್ಧ ಹೇಳಿದ. "ಸಹೋದರರೇ, ಇಂತಹ ಕ್ಷಾಮದ ಕಷ್ಟದಿಂದ ಹೊಟ್ಟೆಗಿಲ್ಲದೆ ಸಾಯುವ ಜನರಿಗೆ ಆಹಾರ ಧಾನ್ಯ, ಹಣವನ್ನು ದಾನ ಮಾಡಿ ಜನರ ಉದ್ಧಾರ ಮಾಡಿದರೆ ಲೋಕೋದ್ಧಾರ ಮಾಡಿದಂತೆ. ಜನರ ಸೇವೆ ಜನಾರ್ದನ ಸೇವೆ. ನಿಮ್ಮಲ್ಲಿ ಯಾರಿಗಾದರೂ ದಾನ-ಧರ್ಮ ಮಾಡಬೇಕಾದಲ್ಲಿ ಮುಂದಕ್ಕೆ ಬನ್ನಿ. ಯಾರಾ ಮುಂದೆ ಬರುತ್ತೀರಿ?.
ಬುದ್ಧ ಮನವಿಗೆ ಯಾರೊಬ್ಬ ಧನಿಕನೂ ಮುಂದಕ್ಕೆ ಬರಲಿಲ್ಲ. "ಈಗ ಆಲೋಚನೆ ಮಾಡಿ ಕುಳಿತುಕೊಳ್ಳುವ ಸಮಯವಲ್ಲ. ಜನರ ಪ್ರಾಣ ಉಳಿಸುವುದು ಮುಖ್ಯ. ಮುಂದಕ್ಕೆ ಬನ್ನಿರಿ. ಆದಷ್ಟು ಸಹಾಯ ಮಾಡಿ" ಎಂದು ಬುದ್ಧ ಮತ್ತೆ ಹೇಳಿದರು. ಆಗಲೂ ಯಾರೊಬ್ಬರೂ ಮುಂದಕ್ಕೆ ಬರಲಿಲ್ಲ. ಆಗ ಅಲ್ಲೇ ಇದ್ದ ಸಾಧಾರಣ ಹದಿನಾರು ವರುಷ ಪ್ರಾಯದ ಸುಪ್ರಿಯಾ ಎಂಬ ಬಾಲಕಿ ಮುಂದಕ್ಕೆ ಬಂದು ಬುದ್ಧನಿಗೆ ನಮಸ್ಕರಿಸಿ ನಿಂತಳು. ಬುದ್ಧನಿಗೆ ಆಶ್ಚರ್ಯವಾಯಿತು. "ಅಮ್ಮಾ, ನೀನು ಯಾವ ಸಹಾಯ ಮಾಡಬಹುದು? ನಿನ್ನ ಬಳಿ ಹಣ ಇದೆಯಾ? ಇಷ್ಟು ಧನಿಕರು ಸುಮ್ಮನೆ ಇದ್ದಾರೆ. ನೀನು ಯಾವ ಧೈರ್ಯದಿಂದ ಬಂದಿದ್ದಿ?" ಎಂದು ಕೇಳಿದರು. ಆಗ ಸುಪ್ರಿಯಾ ಹೇಳಿದಳು. "ಬುದ್ಧ ದೇವಾ, ನನ್ನಲ್ಲಿ ಧೈರ್ಯ ಮಾತ್ರ ಇದೆ. ನನಗೆ ಆಶೀರ್ವದಿಸಿ. ನಾನು ನನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸಿ ಹಣ, ಆಹಾರ ಧಾನ್ಯ ಒಟ್ಟು ಮಾಡಿ ಹಸಿದವರಿಗೆ ನೀಡುತ್ತೇನೆ".
ಬುದ್ಧನ ಆಶೀರ್ವಾದ ಪಡೆದು ಸುಪ್ರಿಯಾ ಮನೆ ಮನೆಗೆ ತೆರಳಿ ತನ್ನ ಕೋಮಲ ಸ್ವರದಿಂದ ಭಜನೆ ಮಾಡಿದಳು. ಅವಳ ಭಕ್ತಿ, ರಾಗಕ್ಕೆ ಖುಷಿ ಹೊಂದಿದ ಜನರು, ಹಣ, ಆಹಾರಧಾನ್ಯ ಕೊಡತೊಡಗಿದರು. ಅವಳು ಆ ಹಣ, ಆಹಾರ ಧಾನ್ಯವನ್ನೆಲ್ಲಾ ಬುದ್ಧದೇವರಿಗೆ ಅರ್ಪಿಸಿದಳು. ಅದನ್ನು ಕಂಡ ಧನೀಕರಿಗೆ, ವ್ಯಾಪಾರಿಗಳಿಗೆ ನಾಚಿಕೆಯಾಗಿ ಅವರೂ ತಮ್ಮಿಂದಾದ ದಾನ-ಧರ್ಮ ಮಾಡತೊಡಗಿದರು. ಬುದ್ಧ ಸುಪ್ರಿಯಾಳ ಈ ಶ್ರೇಷ್ಠ ಕೆಲಸಕ್ಕೆ ಅವಳನ್ನು ಮನಃಪೂರ್ವಕವಾಗಿ ಆಶೀರ್ವದಿಸಿದರು.
ಧೈರ್ಯ ಸರ್ವತ್ರ ಸಾಧನಂ..
ನಮ್ಮ ಪ್ರಯತ್ನ ಒಳ್ಳೆದಾಗಿದ್ದರೆ, ಅದರ ಪ್ರತಿಫಲವು ಒಳ್ಳೆಯದೇ ಆಗಿರುತ್ತದೆ..
ಕೃಪೆ:ನೆಟ್
No comments:
Post a Comment