ಕಥೆ-557
ಬೇರೆಯವರ ಸಂತೋಷದಲ್ಲಿದೆ ಸಂತಸ.
ಒಂದೂರಿನಲ್ಲಿ ಗಜವಿಕ್ರಮ ಎಂಬ ರಾಜನಿದ್ದ. ಆ ರಾಜನು ತುಂಬಾ ಧೈರ್ಯವಂತ, ಶೌರ್ಯವಂತ ಮತ್ತು ದಾನವಂತನಾಗಿದ್ದನು. ಆತ ಸದಾ ತನ್ನ ರಾಜ್ಯದ ಪ್ರಜೆಗಳ ಕಷ್ಟ ಸುಖಗಳನ್ನು ವಿಚಾರಿಸುತ್ತಿರುತ್ತಿದ್ದ. ಆ ರಾಜನು ಪ್ರತಿವರ್ಷ ತನ್ನ ಜನ್ಮದಿನದಂದು ಎಲ್ಲ ಪ್ರಜೆಗಳ ದುಃಖ ಮತ್ತು ಕಷ್ಟಗಳನ್ನ ಕೇಳಿ ಪರಿಹಾರ ನೀಡುತ್ತಿದ್ದ.
ಒಂದು ಬಾರಿ ತನ್ನ ಹುಟ್ಟಿದ ಹಬ್ಬದಂದು ಮಂತ್ರಿಗಳನ್ನು ಕರೆದು ಪ್ರಜೆಗಳ ಯೋಗಕ್ಷೇಮ ವಿಚಾರಿಸಲು ಕರೆತರಲು ಹೇಳುತ್ತಾನೆ. ನಂತರ ಬಂದ ಪ್ರಜೆಗಳೆಲ್ಲ ಅವರ ಕಷ್ಟಗಳನ್ನ ಹೇಳಿಕೊಂಡು ಪರಿಹಾರ ತೆಗೆದುಕೊಂಡು ಹೋಗುತ್ತಾರೆ. ಆದರೆ ಒಬ್ಬ ಪ್ರಜೆ ತನ್ನ ದುಃಖ ಹೇಳಿಕೊಳ್ಳದೆ ಕೆಲವು ಪ್ರಶ್ನೆಗಳನ್ನ ಕೇಳಲು ಅವಕಾಶ ಕೋರಿದ. ಅದಕ್ಕೆ ರಾಜನು ಒಪ್ಪಿದ.
ಅವನ ಮೊದಲನೇ ಪ್ರಶ್ನೆ, 'ಮಹಾರಾಜನೇ, ನೀವು ಹುಟ್ಟಿದ ದಿನದಂದು ಏಕೆ ಪ್ರಜೆಗಳ ಕಷ್ಟಗಳನ್ನ ನಿವಾರಿಸುತ್ತಿರುವೆ?' ಎರಡನೇ ಪ್ರಶ್ನೆ 'ನೀವೇಕೆ ದಾನ ನೀಡುವಿರಿ?' ಹಾಗೂ ಕೊನೆಯ ಪ್ರಶ್ನೆ, 'ನೀವೇಕೆ ಇತರ ರಾಜ್ಯದ ರಾಜರಂತೆ ಯುದ್ಧ ಮಾಡಿ ರಾಜ್ಯವನ್ನ ಪಡೆಯಲು ಬಯಸುವುದಿಲ್ಲ? ನೀವೇಕೆ ಮಾಡಿದ ಯುದ್ದದಲ್ಲಿ ಎಂದೂ ಸೋತಿಲ್ಲ?' ಎಂದು ಕೇಳಿದ. ಅದಕ್ಕೆ ರಾಜನು ಹೀಗೆ ಉತ್ತರಿಸಿದ,
'ಅನಾಮಿಕನೇ, ಸರಿಯಾದ ಪ್ರಶ್ನೆಯನ್ನೇ ಕೇಳಿರುವೆ. ನಾನೇಕೆ ಹುಟ್ಟಿದ ದಿನದಂದು ದಾನ ಮಾಡುತ್ತೇನೆಂದರೆ ನಮ್ಮ ಹುಟ್ಟಿದ ದಿನದಿಂದು ನಾವು ಮಾತ್ರ ಸಂತಸದಿಂದ ಇದ್ದರೆ ಸಾಲದು, ಬೇರೆಯವರ ಸಂತೋಷದಲ್ಲಿ ನಮ್ಮ ಸಂತಸ ಕಾಣಬೇಕು. ಎರಡನೆಯ ಪ್ರಶ್ನೆಗೆ ಉತ್ತರ, ನಾನೇಕೆ ದಾನ ಮಾಡುವೆನೆಂದರೆ ಈ ಅಷ್ಟೈಶ್ವರ್ಯಗಳು ಯಾವುದೂ ನನ್ನದಲ್ಲ. ಯಾರದ್ದೋ ಇಂದು ನನ್ನದಾಗಿದೆ. ನಾಳೆ ಬೇರೆಯವರದ್ದು. ನಾಡಿದ್ದು ಮತ್ತೊಬ್ಬರದ್ದು. ಪರಿವರ್ತನೆ ಜಗದ ನಿಯಮ. ನಿನ್ನ ಕೊನೆಯ ಪ್ರಶ್ನೆಗೆ ಉತ್ತರ, ನಾನೇಕೆ ಯುದ್ದ ಮಾಡಲು ಬಯಸುವುದಿಲ್ಲವೆಂದರೆ ಅತಿ ಆಸೆ ಗತಿ ಕೇಡು. ಮನುಷ್ಯನು ಎಷ್ಟೇ ಬಲವಂತನಾಗಿದ್ದರೂ, ಎಷ್ಟೇ ರಾಜ್ಯಗಳನ್ನ ಗೆದ್ದರೂ ಒಂದಲ್ಲ ಒಂದು ದಿನ ತನ್ನ ಎಲ್ಲ ಅಹಂ ಅನ್ನು ಕಟ್ಟಿಟ್ಟು ಸಾವಿನ ಮುಂದೆ ಸೋಲಲೇಬೇಕು' ರಾಜನ ಉತ್ತರವನ್ನು ಕೇಳಿ ಆ ಪ್ರಜೆ ಸಂತುಷ್ಟನಾಗಿ ಹೊರಟನು.
No comments:
Post a Comment