ಕಥೆ-570
ಕಷ್ಟಕ್ಕಾದವನೆ ಗೆಳೆಯಾ
ದೊಡ್ಡ ಕಾಡಿನಲ್ಲಿ ಮೊಲವೊಂದಿತ್ತು. ಬಹಳ ಸಾಧು ಸ್ವಭಾವದ ಆ ಮೊಲಕ್ಕೆ ಅನೇಕ ಗೆಳೆಯರಿದ್ದರು. ಒಂದು ದಿನ ಚಿಗುರು ಹುಲ್ಲು ತಿನ್ನುತ್ತಿರುವ ವೇಳೆಯಲ್ಲಿ ದೂರದಿಂದ ಬೇಟೆಯ ನಾಯಿಗಳು ತನ್ನ ಕಡೆಗೆ ಧಾವಿಸಿ ಬರುತ್ತಿರುವುದನ್ನು ಕಂಡಿತು.
ಕೂಡಲೇ ಮೊಲವು ಅಲ್ಲಿಯೇ ಮೇಯುತ್ತಾ ನಿಂತಿದ್ದ ಕುದುರೆಯ ಬಳಿಗೆ ಹೋಗಿ "ಕುದುರೆ ಅಣ್ಣ, ಅಲ್ಲಿ ನೋಡು ಬೇಟೆ ನಾಯಿಗಳು ನನ್ನನ್ನು ಕೊಲ್ಲಲು ಓಡಿ ಬರುತ್ತಿವೆ. ನೀನು ತಕ್ಷಣ ನನ್ನನ್ನು ನಿನ್ನ ಬೆನ್ನ ಮೇಲೆ ಕೂಡಿಸಿಕೊಂಡು ದೂರ ಒಯ್ದು ಬಿಡು" ಎಂದು ವಿನಂತಿಸಿತು. ಆಗ ಕುದುರೆಯು "ಮೊಲರಾಯ, ನಿನಗೆ ಸಹಾಯ ಮಾಡಬಹುದಿತ್ತು, ಆದರೆ ನನ್ನ ಒಡೆಯನು ನನಗೆ ಹೊಸ ಕೆಲಸವೊಂದನ್ನು ವಹಿಸಿದ್ದಾನೆ. ಅದನ್ನು ನಾನು ತಕ್ಷಣ ಮಾಡಿ ಮುಗಿಸಬೇಕಿದೆ ನಿನ್ನಂತಹ ಒಳ್ಳೆಯ ಗೆಳೆಯನಿಗೆ ಹೀಗೆ ಹೇಳಲು ಬೇಸರವೆನಿಸುತ್ತದೆ. ಆದರೇನು ಮಾಡಲಿ?
ಅನಿವಾರ್ಯವಾಗಿ ಹೇಳಲೇಬೇಕಾಗಿದೆ. ನಿನಗೇನು ಬಹಳ ಸ್ನೇಹಿತರಿದ್ದಾರೆ ಯಾರಾದರೂ ಸಹಾಯ ಮಾಡುತ್ತಾರೆ" ಎಂದಿತು.
ಕುದುರೆಯ ಮಾತುಗಳನ್ನು ಕೇಳಿ ಮೊಲ ಮುಂದಕ್ಕೆ ಹೊರಟಿತು. ಅಲ್ಲಿ ಒಂದು ಎತ್ತು ಮೇಯುತ್ತಿತ್ತು. ಎತ್ತಿಗೂ ಮೊಲಕ್ಕೂ ಬಹಳ ಸ್ನೇಹ ಈ ಆಪತ್ಸಮಯದಲ್ಲಿ ಎತ್ತು ತನಗೆ ಸಹಾಯ ಮಾಡಬಹುದು ಅನಿಸಿತು, ಅಂತೆಯೇ ಅದು, "ಎತ್ತಣ್ಣಾ, ಬೇಟೆ ನಾಯಿಗಳಿಂದ ನನ್ನನ್ನು ರಕ್ಷಿಸು ಅಂದಿತು." ಆಗ ಆ ಎತ್ತು "ತಮ್ಮಾ, ನಿನ್ನಂತಹ ಗೆಳೆಯನಿಗೆ ಕಷ್ಟ ಬಂದಾಗ ಸಹಾಯ ಮಾಡುವುದು ನನಗೂ ಹೆಮ್ಮೆಯ ವಿಷಯವೇ, ಆದರೆ ಈಗ ಮಾಡಲು ಸಾಧ್ಯವಿಲ್ಲ ಎಂದು ಹೇಳಲು ವ್ಯಥೆಯಾಯಿತು, ಏಕೆಂದರೆ ನಾನು ಈಗ ತಕ್ಷಣ ಒಬ್ಬ ದೂರದ ನೆಂಟರನ್ನು ನೋಡಲು ಹೋಗಬೇಕಾಗಿದೆ. ಅಲ್ಲಿಗೆ ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಅದಕ್ಕಾಗಿ ನನ್ನನ್ನು ಕ್ಷಮಿಸು, ಆಗೋ ಅಲ್ಲಿರುವ ಕತ್ತೆಯ ಸಹಾಯ ಕೇಳು" ಎಂದು ಸಲಹೆ ನೀಡಿತು.
ಆಗ ಮೊಲವು ಕತ್ತೆಯ ಬಳಿಗೆ ಹೋಯಿತು. ಆ ಕತ್ತೆಯೂ ಏನೋ ಸಬೂಬು ಹೇಳಿ ಸಹಾಯ ಮಾಡದೆ ತಪ್ಪಿಸಿಕೊಂಡಿತು. ಅಷ್ಟೊತ್ತಿಗೆ ನಾಯಿಗಳು ಸಮೀಪಕ್ಕೆ ಬಂದಿದ್ದವು. ಆಗ ಮೊಲ ಕಷ್ಟಕ್ಕಾಗದ ಗೆಳೆಯರನ್ನು ನಂಬುವ ಹುಚ್ಚು ಬಿಟ್ಟು ಕಾಲುಗಳ ಶಕ್ತಿಯ ಮೇಲೆ ನಂಬಿಕೆಯಿರಿಸಿ ಓಡಲು ಶುರುಮಾಡಿ ಕ್ಷಣಗಳಲ್ಲಿ ನಾಯಿಗಳ ಕಣ್ಣಿಗೆ ಬೀಳದಷ್ಟು ದೂರ ಓಡಿ ಹೋಗಿ ತನ್ನ ಪ್ರಾಣ ಕಾಪಾಡಿಕೊಂಡಿತು.
ಕಷ್ಟದ ಸಮಯದಲ್ಲಿ ಗೆಳೆತನದ ಗುಟ್ಟು ತಿಳಿಯುವುದು, ಆ ಸಮಯದಲ್ಲಿ ಸಹಾಯ ಮಾಡುವವನೇ ನಿಜವಾದ ಗೆಳೆಯ.
ಕೃಪೆ: ಕಿಶೋರ್.
No comments:
Post a Comment