ಕಥೆ-571
ನೋವನ್ನು ಅನುಭವಿಸಿದವರಿಗೆ ಗೊತ್ತು ನೋವಿನ ಬೆಲೆ
ಒಂದು ದಿನ ಹತ್ತು ವರ್ಷದ ಬಾಲಕ ತನ್ನ ತಂದೆಗೆ ಒಂದೇ ಸಮನೆ ತನಗೊಂದು ನಾಯಿ ಮರಿಯನ್ನು ಕೊಡಿಸುವಂತೆ ಹಟ ಮಾಡುತ್ತಿದ್ದ. ಮಗನ ಆಸೆಯನ್ನು ತಿರಸ್ಕರಿಸಲು ತಂದೆಗೆ ಮನಸ್ಸಾಗಲಿಲ್ಲ. ತಂದೆ ಮಗನನ್ನು ಪೇಟೆಗೆ ಕರೆದುಕೊಂಡು ಹೋದ. ನಾಯಿ ಎಲ್ಲಿ ಸಿಗುತ್ತದೆಂದು ಹುಡುಕಿದ. ಕೊನೆಗೊಂದು ನಾಯಿ ಅಂಗಡಿ (ಪೆಟ್ ಶಾಪ್) ಸಿಕ್ಕಿತು.
ಅಲ್ಲಿ ನೂರಾರು ಬೇರೆ ಬೇರೆ ತಳಿ, ಜಾತಿಯ ನಾಯಿ ಮರಿಗಳಿ ದ್ದವು. ಆದರೆ ಒಂದು ನಾಯಿ ಮರಿಯನ್ನು ಮಾತ್ರ ಪ್ರತ್ಯೇಕವಾಗಿ ಇಡಲಾಗಿತ್ತು. ಆ ಬಾಲಕ ಆ ನಾಯಿಮರಿ ಬಳಿ ಹೋಗಿ ನಿಂತು ಅದನ್ನು ತದೇಕಚಿತ್ತದಿಂದ ನೋಡುತ್ತಿದ್ದ.
ಆ ಅಂಗಡಿಯ ಮಾಲೀಕ ಸನಿಹ ಬಂದು, ‘ಮಗು, ನನ್ನ ಅಂಗಡಿ ಯಲ್ಲಿ ನೂರಾರು ಒಳ್ಳೆಯ ನಾಯಿಮರಿಗಳಿವೆ. ಅವೆಲ್ಲವನ್ನೂ ಬಿಟ್ಟು ಕಾಲು ಸರಿಯಿಲ್ಲದ ಈ ನಾಯಿಮರಿಯನ್ನೇಕೆ ನೋಡುತ್ತಿದ್ದೀಯಾ?’ ಎಂದು ಕೇಳಿದ.
‘ಯಾಕೋ ಈ ಮರಿ ನನಗೆ ಇಷ್ಟವಾಯಿತು’ ಎಂದ ಬಾಲಕ.
ಅದಕ್ಕೆ ಅಂಗಡಿ ಮಾಲೀಕ, ‘ಈ ನಾಯಿಮರಿಯ ಒಂದು ಕಾಲು ಹುಟ್ಟಿದಂದಿನಿಂದಲೇ ಸರಿ ಇಲ್ಲ. ಅದು ಎಂದೂ ಸರಿಯಾಗದು. ಸಾಯಿಸಬಾರದೆಂಬ ಕಾರಣಕ್ಕೆ ಅದನ್ನು ಇಲ್ಲಿ ಇಟ್ಟುಕೊಂಡಿದ್ದೇನೆ ಅಷ್ಟೆ’ ಎಂದ.
ಆ ಮಾತಿನಿಂದ ಆ ಬಾಲಕನಿಗೆ ಬಹಳ ಬೇಸರವಾಯಿತು. ತನ್ನ ತಂದೆಯನ್ನು ಕರೆದು ಈ ನಾಯಿಮರಿಯೇ ತನಗೆ ಬೇಕೆಂದು ಹೇಳಿದ. ತಂದೆಯೂ ಅವನಿಗೆ ಹೇಳುವಷ್ಟು ಹೇಳಿದ. ಆದರೆ ಮಗ ಕೇಳಲಿಲ್ಲ. ಕೊನೆಗೆ ಅದೇ ಮರಿಯನ್ನು ಕೊಡುವಂತೆ ಹೇಳಿದ. ಆಗಲೂ ಅಂಗಡಿ ಮಾಲೀಕ, ‘ಈ ಕುಂಟ ನಾಯಿಮರಿ ಮೇಲೇಕೆ ಅಂಥ ಪ್ರೀತಿ? ಬೇರೆಯದನ್ನು ಖರೀದಿಸಬಾರದಾ?’ ಎಂದ.
ಆಗ ಆ ಬಾಲಕ ತನ್ನ ಪ್ಯಾಂಟನ್ನು ಮೇಲಕ್ಕೆತ್ತಿ ‘ಈ ಪುಟ್ಟ ನಾಯಿಮರಿ ಕಾಲು ಹೇಗೋ, ನನ್ನ ಕಾಲೂ ಹಾಗೇ. ಅದು ಎಂಥ ನೋವು, ಸಂಕಟ ಅನುಭವಿಸುತ್ತಿರಬಹುದೋ, ಅಂಥದೇ ನೋವನ್ನು ನಾನೂ ಅನುಭವಿಸುತ್ತಿದ್ದೇನೆ. ಅದರ ದುಃಖ, ವೇದನೆ ಏನೆಂಬುದು ನನಗೆ ಗೊತ್ತು. ನನಗೆ ಇದಕ್ಕಿಂತ ಉತ್ತಮ ಸಂಗಾತಿ ಬೇರೊಂದಿರಲಾರದು.’ ಎಂದ.
ಆ ಮಾತನ್ನು ಕೇಳಿ ತಂದೆಗೆ ದುಃಖ ತಡೆದುಕೊಳ್ಳಲಾಗಲಿಲ್ಲ. ಅಂಗಡಿ ಮಾಲೀಕನ ಕಣ್ಣುಗಳೂ ತೇವಗೊಂಡವು. ಕೃಪೆ: ವಾಟ್ಸ ಆಪ್ ಗ್ರೂಪ್
No comments:
Post a Comment