ಕಥೆ-574
ಸತ್ಯಂ ಶಿವಂ ಸುಂದರಂ
https://basapurs.blogspot.com
ಒಬ್ಬ ರಾಜನು ಆಯುಷ್ಯದ ತುಂಬ ಕುಡಿಯುತ್ತಲೇ ಇದ್ದ. ಅವನ ಅರಮನೆಯ ಕೆಳಗೆಲ್ಲ ಬರೀ ಸಾರಾಯಿ ಪಾತ್ರೆಗಳೇ ಇದ್ದವು. ಈ ಲೋಕವನ್ನು ಬಿಡುವಾಗ ಆ ರಾಜನೇ ಹೇಳಿದ, ಕುಡಿದು ಕುಡಿದು ನನ್ನ ಜೀವನ ಹಾಳು ಮಾಡಿಕೊಂಡೆ, ನನ್ನ ನಂಬಿಕೊಂಡ ಜನರಿಗೆ ನಾನು ಮೋಸ ಮಾಡಿದನೆಲ್ಲ ಎಂದು ವ್ಯಥೆ ಪಡುತ್ತಿದ್ದ,ಆದರೆ ಕಾಲ ಮಿಂಚಿಹೋಗಿತ್ತು... ಕೆಲವೊಂದು ಚಿಕ್ಕ ಕಾಮಾದಿ ವಿಷಯಗಳು ಮೊದಲು ಸಣ್ಣದಾಗೇ ನಮ್ಮ ಹತ್ತಿರ ಸುಳಿಯುತ್ತವೆ. ನಂತರ ಬೃಹದಾಕಾರವಾಗಿ ಬೆಳೆದು ನಮ್ಮನ್ನು ಆವರಿಸುತ್ತದೆ ಕೊನೆಗೆ ಅವುಗಳಿಂದ ಹೊರಬರಲು ಸಾಧ್ಯವಾಗದೆ ಅವುಗಳ ಸುಳಿಯಲ್ಲಿ ಸಿಲುಕಿದಾಗ ಹೊರಬರಲು ಪ್ರಯತ್ನಿಸಿದರೂ ಸಾಧ್ಯವಾಗದೆ ಆ ಸುಳಿಯಲ್ಲಿ ಬಲಿಯಾಗುತ್ತೇವೆ.
'ಶಾಂತಂ ಸಮೃದ್ಧಂ ಅಮೃತಂ ಉಪಾಸ್ಯ' ಶಾಂತವು, ಸಮೃದ್ದವು, ಅಮೃತಸ್ವರೂಪವೂ ಆಗಿರುವ ಪರಮ ಸತ್ಯವನ್ನು ನಾವು ನಿರಂತರ ಆರಾಧಿಸಬೇಕು. ಆಗ ನಮ್ಮ ಜೀವನವು ಶಾಂತಿ ಸಮೃದ್ಧಿಯಿಂದ ಕೂಡಿ ಅಮೃತಾನಂದ ನೀಡುತ್ತದೆ. ಆ ದಿವ್ಯ ಜೀವನದ ಪ್ರಾಪ್ತಿಗಾಗಿ ನಾವು ದುಸ್ಸಂಗದಿಂದ ದೂರಿರಬೇಕು. ಇಲ್ಲದಿದ್ದರೆ ವಿಷಯ ವ್ಯಾಮೋಹದಲ್ಲಿ ಮುಳುಗಿ ಮನುಷ್ಯನು ಹಾಳಾಗುತ್ತಾನೆ. ಕಾಮಾದಿ ವಿಷಯಗಳು ಮೊದಲು ಸಣ್ಣದಾಗೇ ನಮ್ಮ ಹತ್ತಿರ ಸುಳಿಯುತ್ತವೆ. ನಂತರ ನಮ್ಮನ್ನು ಮುಗಿಸುತ್ತವೆ.
ನಮ್ಮ ಜೀವನದಲ್ಲಿ ಯಾವುದನ್ನು ನಾವು ಸಾಧಿಸಬೇಕಾಗಿದೆಯೋ ಅದನ್ನು ನಾವು ಮನಸಾರೆ ಪ್ರೀತಿಸಬೇಕು. ನಿರಂತರ ಅದನ್ನೇ ನೆನೆಯಬೇಕು, ಅದರದೇ ಚಿಂತನ-ಮಂಥನ ನಡೆಯಬೇಕು. ನಮ್ಮ ಗುರಿಯ ಸಾಧನೆಗೆ ವಿರೋಧಿಯಾಗಿರುವ ವಿಷಯಗಳಿಂದ ದೂರಿರಬೇಕು. ಆಗ ಮಾತ್ರ ನಮ್ಮ ಸಾಧನೆಯು ಸಿದ್ಧಿಸುತ್ತದೆ. ಗುರಿಯನ್ನು ತಲುಪುತ್ತೇವೆ. ಸೌಂದರ್ಯವನ್ನು ಪ್ರೀತಿಸುವವನು ಸುಂದರವಾದ ವಸ್ತುಗಳನ್ನೇ ತಲೆಯೊಳಗೆ ಹಾಕಿಕೊಳ್ಳಬೇಕು. ಹೂವು, ಹಣ್ಣು, ಕಾಯಿ, ಎಲೆ, ಬಳ್ಳಿ, ಹಕ್ಕಿ, ಪಕ್ಷಿ, ರವಿ, ತಾರೆ, ಶಶಿ, ತುಂಬಿ ಹರಿಯುವ ಹಳ್ಳಕೊಳ್ಳಗಳಿಂದಾದ ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನು ದಿನವಿಡೀ ಧ್ಯಾನಿಸಬೇಕು. ಆಗ ನಮಗರಿಯದಂತೆ ನಮ್ಮ ಬದುಕೂ ಸತ್ಯಂ ಶಿವಂ ಸುಂದರಂ ಆಗಿರುತ್ತದೆ.
ಕೃಪೆ: ಶ್ರೀ ಸಿದ್ದೇಶ್ವರ ಸ್ವಾಮಿಗಳು
No comments:
Post a Comment