Sunday, January 26, 2025

 ಕಥೆ-649

ನಮ್ಮ ಜೀವನದ ವಾಹನ ಗಣರಾಜ್ಯದ ದಿನ


ಇಂದು ಭಾರತೀಯ ಪ್ರಜೆಗಳಿಗೆ ತಮ್ಮನ್ನು ತಾವೇ ಆಳಿಕೊಳ್ಳುವ ಅವಕಾಶ ದೊರೆತ ಪವಿತ್ರ ದಿನ. ಬ್ರಿಟಿಷರ ದಾಸ್ಯದಿಂದ ಮುಕ್ತಗೊಂಡ ಹಿಂದೂಸ್ತಾನಕ್ಕೆ, ಸ್ವಾತಂತ್ರ್ಯ ಸಿಕ್ಕು ಎರಡೂವರೆ ವರ್ಷಗಳ ಬಳಿಕ ಮಹಾ ಸಂವಿಧಾನವೊಂದು ಅರ್ಪಿತವಾಯ್ತು. ಅಂದು ಭಾರತದ ಪ್ರಜೆಗಳು ಸ್ವತಃ ತಮಗೇ ಪ್ರಭುಗಳಾದರು. ಪ್ರಜೆಗಳೇ ಪ್ರಭುಗಳಾದ 1950ರ ಜನವರಿ 26ರ ದಿನವನ್ನು ಗಣರಾಜ್ಯದಿನ ಎಂದು ಘೋಷಿಸಲಾಯಿತು.


ಭಾರತದ ಪ್ರಜೆಗಳನ್ನು ಆಳುವ ಶಾಸಕಾಂಗ, ನ್ಯಾಯ ಒದಗಿಸುವ ನ್ಯಾಯಾಂಗ ಹಾಗೂ ಜನರಿಗಾಗಿ ಕೆಲಸಮಾಡುವ ಕಾರ್ಯಾಂಗಗಳು ಹೇಗಿರಬೇಕು, ಯಾವೆಲ್ಲ ನೀತಿ ನಿಯಮ ಕಟ್ಟಳೆಗಳನ್ನು ಅವರು ಪಾಲಿಸಬೇಕು ಎಂಬೆಲ್ಲ ಸೂಚನೆಗಳನ್ನು ಹಾಕಿಕೊಟ್ಟ ಸಮಗ್ರ ಮಾಹಿತಿಗಳ ಗುಚ್ಚವೇ ಭಾರತದ ಸಂವಿಧಾನ. ಡಾ.ಬಿ.ಆರ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಈ ಸಂವಿಧಾನ, ಡಾ.ರಾಜೇಂದ್ರ ಪ್ರಸಾದ್‌ರ ಅಧ್ಯಕ್ಷತೆಯಲ್ಲಿ 1950, ಜನವರಿ 26ರಂದು ಅಂಗೀಕರಿಸಲ್ಪಟ್ಟಿತ್ತು.


ಭಾರತ ದೇಶದಲ್ಲಿ ಸಂವಿಧಾನ ಜಾರಿಯಲ್ಲಿ ಬಂದ ಮೇಲೆ ಪ್ರಜೆಗಳದೇ ಸರ್ಕಾರ ಅಸ್ತಿತ್ವಕ್ಕೆ ಬಂತು. ದೇಶದಲ್ಲಿ ತಮಗೆ ಸ್ವಾತಂತ್ರ್ಯವಿದೆ, ತಮ್ಮನ್ನಾಳುವವರನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಎಂಬ ಸಂತಸ ಇಡೀ ದೇಶದ ಜನರಲ್ಲಿ ಪ್ರತಿಫಲಿಸಿತ್ತು. ಜನರಲ್ಲಿ ನಿಧಾನವಾಗಿ ಸಂವಿಧಾನ, ಸರಕಾರದ ಮೇಲೆ ವಿಶ್ವಾಸ ಬೆಳೆಯಲು ಪ್ರಾರಂಭವಾಯಿತು. ಜನರ ವಿಚಾರ, ಆಚಾರ, ನಡತೆ, ನಂಬಿಕೆಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಬೆಳವಣಿಗೆ ಧನಾತ್ಮಕವಾಗಿಯೂ ಆಗಿದೆ ಋಣಾತ್ಮಕವಾಗಿಯೂ ಆಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಇಂದಿನ ಭಾರತದ ಪ್ರಜೆಗಳಲ್ಲಿ ದೇಶಪ್ರೇಮ ಕುಂದಿದೆ. ಅಂದಿನ ಸ್ವಾತಂತ್ರ್ಯ ಹೋರಾಟಗಾರರಂತೆ, ದೇಶಕ್ಕಾಗಿ ಮಹಾತ್ಮರ ತನು, ಮನ, ಧನ ಹೋರಾಟದ ಫಲವೇ ಸ್ವಾತಂತ್ರ್ಯ, ಎಲ್ಲರಿಗೂ ತಮ್ಮ ಲಾಭವೇ ಮುಖ್ಯವಾಗಬಾರದು, ದೇಶ ಮುಖ್ಯವಾಗಬೇಕು.


ಅನರ್ಹ ಅಭ್ಯರ್ಥಿಗಳು ಗೆದ್ದು ಅಧಿಕಾರಕ್ಕೆ ದೇಶಕ್ಕೆ ಮಾರಕ. ಹಾಗಾಗಿ ಮತದಾನ ಮಾಡುವ ಸರಿ ವ್ಯಕ್ತಿಯನ್ನು ಆಯ್ಕೆ ಮಾಡುವ ಅಧಿಕಾರ ನಮ್ಮ ಕೈಯಲ್ಲಿದೆ.  


ನಮ್ಮ ಸಂವಿಧಾನ, ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತ ದೀರ್ಘವಾದುದ್ದು. ಸಂವಿಧಾನವನ್ನು ಸಿದ್ಧಪಡಿಸುವಾಗ ಸಂವಿಧಾನ ರಚನಾ ಸಮಿತಿಯಲ್ಲಿದ್ದ ಆ ಎಲ್ಲ ನಾಯಕರೂ ಭವ್ಯ ಭಾರತದ ಸುಂದರ ಅಭಿವೃದ್ಧಿಯ ಕನಸು ಕಂಡಿದ್ದರು. ಸಂವಿಧಾನ ಎಂಬ ಪೌಷ್ಠಿಕಾಂಶದಿಂದ ಭಾರತದ ಅಭಿವೃದ್ಧಿ ಎಂಬ ಮಗು ಮುಂದೆ ಏಳಿಗೆಯತ್ತ ಹೆಜ್ಜೆ ಹಾಕುತ್ತೆ ಎಂಬ ಕಲ್ಪನೆಯಲ್ಲಿದ್ದರು. ದೇಶದ ಸಮಗ್ರ ಏಳಿಗೆಯ ಕನಸು ಕಂಡರು. ಪುಟ್ಟ ಮಗುವಿನ ಭವಿಷ್ಯದ ಬಗ್ಗೆ ತಾಯಿ ಕಲ್ಪಿಸಿಕೊಂಡಂತೆ. ಆದರೆ ಅವರ ನಿರೀಕ್ಷೆಯ ಮಟ್ಟದಲ್ಲಿ ಇಂದಿನ ಸಮಾಜ, ದೇಶ ಅಭಿವೃದ್ಧಿಯನ್ನು ಹೊಂದಿದೆಯೇ ಎಂಬ ಪ್ರಶ್ನೆಗೆ ಯಾರ ಬಳಿ ಉತ್ತರವಿದೆ ?


ಗಣರಾಜ್ಯ ದಿನ ಎಂದರೆ ಸರಕಾರಿ ರಜೆ. ಅನ್ನುವಷ್ಟರ ಮಟ್ಟಿಗೆ ಇಂದಿನ ಬಹುತೇಕ ಭಾರತೀಯ ಪ್ರಜೆಗಳು ಈ ಸುಂದರ ದಿನವನ್ನು ಅರ್ಥೈಸಿಕೊಂಡಂತಿದೆ. ರಾಜಧಾನಿಗಳಲ್ಲಿ ನಡೆಯುವ ಗಣರಾಜ್ಯದಿನದ ಆಚರಣೆಗಳನ್ನು ಟೀವಿಯಲ್ಲಿ ನೋಡಿ ಸಂತಸ ಪಟ್ಟು, ಟಿವಿ ಕಾರ್ಯಕ್ರಮ ಮುಗಿದಾಗ ಭವ್ಯ ಭಾರತದ ಪ್ರಜೆಗಳ ಗಣರಾಜ್ಯ ದಿನದ ಆಚರಣೆಯೂ ಮುಗಿದು ಹೋಗುತ್ತದೆ.


ಎಲ್ಲ ಧಾರ್ಮಿಕ ಹಬ್ಬಗಳಂತೆ, ರಾಷ್ಟ್ರೀಯ ಹಬ್ಬಗಳೂ ರಾಷ್ಟ್ರದ ಮನೆ ಮನೆಗಳಲ್ಲಿ ಮನ ಮನಗಳಲ್ಲಿ ಆಚರಿಸುವಂತಾಗಬೇಕು, ದೇಶದ ಅಭಿವೃದ್ಧಿ, ರಾಜಕೀಯ ನೀತಿ, ದೇಶ ರಕ್ಷಣೆ, ನ್ಯಾಯಾಂಗ, ಕಾರ್ಯಾಂಗಗಳ ಬಗ್ಗೆ ಜನರಲ್ಲಿ ಗೌರವ ಮೂಡುವಂತಹ ವಾತಾವರಣ ನಿರ್ಮಾಣವಾಗಬೇಕು. ಪ್ರತಿಯೊಬ್ಬ ಪ್ರಜೆಯಲ್ಲಿಯೂ ತಾನು ಭಾರತೀಯ ಎಂಬ ಪ್ರಜ್ಞೆ ಜಾಗೃತವಾಗಿರಬೇಕು, ಶಾಂತಿ ಮಾರ್ಗದಿಂದ ಸ್ವಾತಂತ್ರ್ಯ ಪಡೆದುಕೊಂಡ ದೇಶ ನಮ್ಮದು. ನಮ್ಮ ಧ್ಯೇಯ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿಯೂ ಅನುರಣಿಸುತ್ತಿರಬೇಕು.


ಸುಸಂಸ್ಕೃತ ಸಮಾಜದ, ಸರ್ವತೋಮುಖ ಅಭಿವೃದ್ಧಿ ಹಾಗೂ ಸಂಪೂರ್ಣ ಸ್ವಾತಂತ್ರ್ಯದ ಯಶಸ್ವಿ ದೇಶದ ಕನಸು ಕಂಡು, ಆ ದೇಶಕ್ಕಾಗಿ ಬೃಹತ್‌ ಸಂವಿಧಾನ ರಚಿಸಿ, ದಾರಿ ಹಾಕಿಕೊಟ್ಟ ಆ ನಾಯಕರ, ಮಹಾತ್ಮರ ಉದ್ದೇಶ ನಿಜವಾಗಿಯೂ ಸಾಕಾರಗೊಳ್ಳಬೇಕು. ಆ ನಾಯಕರ ಉದ್ದೇಶವನ್ನು ನೆನಪಿಸಿಕೊಂಡು, ದಾರಿ ತಪ್ಪದೇ ಸರಿ ದಾರಿಯಲ್ಲಿ ಸಾಗುವಂತಾಗಬೇಕೆಂಬ ಉದ್ದೇಶ ಇಂಥ ರಾಷ್ಟ್ರೀಯ ದಿನಗಳ ಆಚರಣೆಯ ಹಿಂದಿದೆ.


ಅಖಂಡ ಭಾರತದ ಕೋಟಿ ಕೋಟಿ ಪ್ರಜೆಗಳಿಗೂ ದೇಶದ ಜವಾಬ್ದಾರಿಯನ್ನು ಅಧಿಕೃತವಾಗಿ ನೀಡಿದ ಶುಭ ದಿನ ಇವತ್ತು. ಪ್ರತಿಯೊಬ್ಬ ಭಾರತೀಯನೂ ದೇಶದ ಅಭಿವೃದ್ಧಿಗೆ ಜವಾಬ್ದಾರನಾಗಿರುತ್ತಾನೆ. ಗಣರಾಜ್ಯದಿನದಂತೆ ಶುಭ ದಿನದಲ್ಲಿ ನಮ್ಮ ಎಲ್ಲ ಜವಾಬ್ಧಾರಿಗಳಿಗೂ ಬದ್ಧರಾಗಿರುತ್ತೇನೆ ಎಂಬ ಪ್ರತಿಜ್ಞೆ ಮಾಡುವುದರ ಮೂಲಕ, ಗಣರಾಜ್ಯದಿನದ ಆಚರಣೆಯನ್ನು ಅರ್ಥಪೂರ್ಣಗೊಳಿಸಬೇಕು. ಆಗಲೇ ಈ ಗಣರಾಜ್ಯದಿನಕ್ಕೆ ನಿಜವಾದ ಅರ್ಥ ಬರುತ್ತದೆ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು