ಕಥೆ-628
ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆ..
ತನಗೆ ಸಂಬಂಧ ಪಡದ ವಿಚಾರದಲ್ಲಿ ತಲೆಕೆಡಿಸಿಕೊಳ್ಳದ ಪ್ತವೃತ್ತಿಯೇ ಹೆಚ್ಚಾಗಿ ಅನೇಕರಲ್ಲಿ ಕಂಡು ಬರಬಹುದಾದ ಸಾಮಾನ್ಯ ಅಂಶವಾದರೆ ಕೆಲವೊಮ್ಮೆ ಬೆರಳೆಣಿಕೆಯ ಅಸಾಮಾನ್ಯ ವ್ಯಕ್ತಿತ್ವದ ಜನ ಸಾಮಾನ್ಯದ ಸಮಾಜದಲ್ಲಿ ಮೊಳಕೆಯೊಡೆದಿರುವುದೇ ಹಲವಾರು ಸಾಮಾಜಿಕ ನೈರ್ಮಲ್ಯದ ಕ್ರಾಂತಿಗೆ ಕಾರಣವಾಗುತ್ತದೆ.
ಸಾವಿತ್ರಿಬಾಯಿಯ ಕಾಲದಲ್ಲಿ ಮಹಿಳೆಯರು ಶಿಕ್ಷಣ ಪಡೆಯುವುದು ಪಾಪ ಎಂದು ತಿಳಿಯಲಾಗುತ್ತಿತ್ತು. ಆಗ ಶಿಕ್ಷಣವಿಲ್ಲದೆ ಬದುಕು ಮಹಿಳೆಯರಿಗೆ ಸತಿ ಪದ್ದತಿ, ಬಾಲ್ಯವಿವಾಹ ಮತ್ತು ವಿಧವೆಯರ ದುರವ್ಯವಸ್ಥೆ ಹೀಗೆ ಹತ್ತು ಹಲವು ವ್ಯವಸ್ಥೆಗಳು ಮಹಿಳೆಯರನ್ನು ಶೋಷಿಸುತ್ತಿದ್ದವು.
ಈ ದಿಶೆಯಲ್ಲಿ ಗತ ಶತಮಾನ ಜನವರಿ 3 ರ 1831ರಲ್ಲಿ ಮಹಾರಾಷ್ಟ್ರದ ನಾಯ್ ಗಾಂವ್ ಎಂಬಲ್ಲಿ ಜನ್ಮತಾಳಿದ ಸಾವಿತ್ರಿ ಬಾಯಿ ಪುಲೆಯವರ ದಿಟ್ಟ ಹೆಜ್ಜೆಗಳು ಸ್ವಸ್ಥ ಮಹಿಳಾ ಸಮಾಜ ನಿರ್ಮಿತಿಯಲ್ಲಿ ಪ್ರಮುಖ ಪಾತ್ರ ವಹಿಸಿದುದು ಅತಿಶಯೋಕ್ತಿಯಲ್ಲ.
ಕೇವಲ ಶೈಕ್ಷಣಿಕ ಸಂಸ್ಥಾನ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲೂ ಅಲ್ಲಿನ ಮಹಿಳಾ ಸಾಧಕ ಬಾಧಕಗಳತ್ತ ಗಮನ ಹರಿಸಿ ಅತ್ಯುತ್ತಮ ಅಭಿವೃದ್ಧಿಗೆ ಹೋರಾಡಿದ ಈಕೆ ನಿಜಾರ್ಥದ ಶಿಕ್ಷಕಿ.
ಲಕ್ಷ್ಮಿ ಹಾಗೂ ಖಾಂಡೋಜೀ ನೇವಸೆ ಪಾಟೀಲ್ ದಂಪತಿಗಳ ಹಿರಿಯ ಪುತ್ರಿಯಾಗಿ ಜನ್ಮತಾಳಿದ ಸಾವಿತ್ರಿ ಬಾಯಿ ಹೇಳುವಂತಹ ಸಿರಿವಂತ ಕುಟುಂಬದವರೇನಲ್ಲ.
ತನ್ನ ಎಂಟನೇ ಹರೆಯದಲ್ಲಿ ವಿವಾಹ ಬಂಧನಕ್ಕೊಳಗಾಗಿ ಅಂದಿನ ಕಾಲದ ಬಾಲ್ಯ ವಿವಾಹ ಪದ್ಧತಿಗೆ ಅನುಬಂಧಿಯಾಗಿ 13ರ ಹರೆಯದ ಜ್ಯೋತಿರಾವ್ ಪುಲೆಯವರ ಧರ್ಮಪತ್ನಿಯಾಗಿ ಅದಿನ್ನೂ ಜಗವರಿಯುವ ಮೊದಲೇ ಗೃಹಿಣಿಯಾದವಳು. ಪ್ರಾಯಶಃ ಇಂತಹ ಕಟ್ಟುಪಾಡುಗಳ ಅಸಹನೀಯತೆಯೂ ಕೂಡಾ ಬಾಲ್ಯ ವಿವಾಹ ರದ್ದತಿಗಾಗಿ ಆಕೆಗೆ ಹೋರಾಡುವ ಪ್ರೇರಣೆ ಕೊಟ್ಟಿರಬಹುದು ಅನಿಸುತ್ತದೆ.
ವಿವಾಹ ನಂತರ 1847 ರಲ್ಲಿ ನ್ನ 17ನೇ ಹರೆಯದಲ್ಲಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿ ತರಬೇತು ಪಡೆದ ಸಾವಿತ್ರಿಯವರು ತನ್ನ ಪತಿ ಸಹಿತವಾಗಿ ಸಾಮಾಜಿಕ ಪುನರ್ ನವೀಕರಣ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಮನಮಾಡಿದ ಫಲಿತಾಂಶವೇ ಹದಿನೆಂಟು ಮಹಿಳಾ ಶಿಕ್ಷಣಾಲಯ ಅಥವಾ ಶಾಲೆ ನಿರ್ಮಾಣಕ್ಕೆ ಕಾರಣವಾದುವು.
ಸುಧಾರಣೆಗೆ ಹೆಜ್ಜೆಯನ್ನಿಡುತ್ತಿದ್ದ ಸಾವಿತ್ರಿಬಾಯಿಯ ಕಾರ್ಯಗಳಿಂದ ಸಮಾಜದ ಹಠವಾದಿಗಳನ್ನು ವಿರೋಧಿಸತೊಡಗಿದರು. ಅದನ್ನು ಲೆಕ್ಕಿಸದೆ ತನ್ನ ದಿಟ್ಟ ನಿರ್ಧಾರವನ್ನು ಮುಂದುವರಿಸಿ ಸ್ತ್ರೀ ಶಿಕ್ಷಣಕ್ಕಾಗಿ ಮತ್ತು ಸಮಾಜ ಸುಧಾರಣೆಗಾಗಿ ನಿರಂತರ ಪ್ರಯತ್ನ ಮಾಡಿದರು.
ಅಖಂಡ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ಹಾಗೂ ಮುಖ್ಯೋಪಾಧ್ಯಾಯಿನಿಯಾದ ಹೆಗ್ಗಳಿಕೆಯೂ ಅವರಿಗೇ ಸಲ್ಲುತ್ತದೆ. ಅವರ ಸಾಧನೆಯ ಪ್ರತೀಕವಾದ ಪುಣೆಯ ಈ ವಿದ್ಯಾಲಯಗಳು ಸಾವಿತ್ರಿ ಬಾಯಿ ಪುಲೆ ವಿಶ್ವವಿದ್ಯಾಲಯವಾಗಿ 2014 ರಲ್ಲಿ ಮರು ನಾಮಕರಣ ಹೊಂದಿದುದೂ ಭವ್ಯ ಇತಿಹಾಸ.
ಆಕೆಯ ಸತ್ ಸಾಧನೆಗಳನ್ನು ಅಂದಿನ ಬ್ರಿಟಿಶ್ ಸರ್ಕಾರವೂ ಗೌರವಿಸಿ ಪುರಸ್ಕರಿಸಿದುದಕ್ಕೆ ಆಕೆಗೆ ಭಾರತದ ಪ್ರಥಮ ಮಹಿಳಾ ಶಿಕ್ಷಕಿಯೆಂಬ ಪಾರಿತೋಷಕ ನೀಡಿದುದೇ ಸಾಕ್ಷಿ.
ಪ್ರಪ್ರಥಮವಾಗಿ ಶಿಕ್ಷಕಿಯಾದ ಆಕೆ ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿಯಾಗಿ, ಸಾರ್ವಜನಿಕ ನಿಂದನೆ ಹಾಗೂ ಅಗೌರವಗಳನ್ನು ಎದುರಿಸುತ್ತಾ ಹಲವರು ತನಗೆ ಸೆಗಣಿಯನ್ನು ಎರಚಿದ್ದರೂ ಸಹಿಸಿ, ಎರಡೆರಡು ಸೀರೆಗಳನ್ನು ಇರಿಸಿ ಕೊಂಡು ಶಾಲೆಯಲ್ಲಿ ಅದನ್ನು ಬದಲಾಯಿಸುವ ಪರಿಸ್ಥಿತಿ ಸಹ ಬಂದಿತ್ತೆಂದರೆ ಆಕೆಯ ಮನೋ ದಾರ್ಡ್ಯತೆ ಅವರ್ಣನೀಯ. ಮೇಲಾಗಿ ಸದಾ ಖಾದಿ ಉಡುಗೆಗಳನ್ನೇ ಧರಿಸುತ್ತಿದ್ದ ಆಕೆಯ ದೇಶಪ್ರೇಮವೂ ಸಹ ಒಂದು ಭವ್ಯ ಮಾದರಿ.
ಜಾತಿ ಪದ್ಧತಿ, ಮೇಲು ಕೀಳು ಎಂಬ ಭಾವ, ಮಹಿಳಾ ಸ್ವಾತಂತ್ರ್ಯ ನ್ಯೂನತೆ ಇತ್ಯಾದಿಗಳೂ ಸಹ ಸಾವಿತ್ರಿ ಬಾಯಿಯವರಿಗೆ ಕಿರಿಕಿರಿ ಉಂಟು ಮಾಡಿದ ಅಂಶಗಳು.
ಜ್ಯೋತಿಬಾ ಪುಲೆಯವರ ಹೆಗಲಿಗೆ ಹೆಗಲು ಕೊಡುತ್ತಾ ಆದರ್ಶ ಪತ್ನಿಯಾದ ಸಾವಿತ್ರಿಯವರು ಮಕ್ಕಳಿಲ್ಲದಿದ್ದರೂ ಆನಂದದಿಂದಿದ್ದರು. ವಿಧವೆಯೊಬ್ಬಳ ಮಗನಾದ ಯಶವಂತುವೆಂಬವನೇ ಅವರ ಪುತ್ರನಾಗಿದ್ದ. ಅನಾಥ ಮಕ್ಕಳ ಶಿಶುಕೇಂದ್ರ ಸ್ಥಾಪನೆಗೂ ಇದುವೇ ಪ್ರೇರಣೆ ನೀಡಿರಲೂಬಹುದು.
ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಪದ್ಧತಿಯನ್ನು ತಂದು ಕಲಿಕೆಗೆ ಪ್ರೇರಕರಾಗಿ ಬಡವರನ್ನು ಅಕ್ಷರಸ್ಥರನ್ನಾಗಿ ಮಾಡಿದ ಇವರ ದೂರದೃಷ್ಟಿ ಅತ್ಯಮೋಘ.
ವಿವಾಹ ಬಾಹಿರ ಗರ್ಭಧಾರಣೆ, ಹಾಗೂ ಹಾಗೆ ಜನಿಸಿದ ಮಕ್ಕಳಿಗೂ ವಸತಿ ಕೇಂದ್ರ ಸ್ಥಾಪಿಸಿದ ಉದಾತ್ತೆ ಸಾವಿತ್ರಿ ಬಾಯಿ. ಪೂಜಾರಿಗಳಿಲ್ಲದೆ ಕಾನೂನಿನ ಚೌಕಟ್ಟಿನಲ್ಲಿ ವಿವಾಹ ಸಮಾರಂಭ ನಡೆಸಿದವರಿವರು.
ಕೂಲಿ ಕಾರ್ಮಿಕರಿಗಾಗಿ ರಾತ್ರಿ ಶಾಲೆ ಹಾಗೆಯೇ ದಲಿತರಿಗಾಗಿ ತನ್ನ ಮನೆಯ ಕುಡಿಯುವ ನೀರಿನ ಟ್ಯಾಂಕಿನ ತ್ಯಾಗ, ಬ್ರಾಹ್ಮಣ ವಿಧವೆಯ ಮಗನನ್ನು ದತ್ತು ತೆಗೆದು ಕೊಂಡುದು ಇವೆಲ್ಲ ಬದಲಾವಣೆಯತ್ತ ಹೆಜ್ಜೆ ಇಟ್ಟ ಕ್ರಾಂತಿಯ ಉದಾಹರಣೆಗಳು ಪ್ರಾಯಶಃ ಸಮಾನತೆಯ ಮೇಲೆ ಬೆಳಕು ಬೀರಿದ ಅಮೋಘ ಸಾಧನೆಗಳು
No comments:
Post a Comment