ಕಥೆ-667
ಪರಿಶ್ರಮ ಪ್ರತಿಭೆಯನ್ನು ಸೋಲಿಸುತ್ತದೆ!
ಸುನಿಲ್ ಛೇತ್ರಿ ಭಾರತದ ಪ್ರತಿಭಾವಂತ ಫುಟ್‌ಬಾಲ್ ಆಟಗಾರ. FIFA 2022ರಲ್ಲಿ ಇವರನ್ನು ಕ್ಯಾಪ್ಟನ್ ಫ್ಯಾಂಟಾಸ್ಟಿಕ್ ಎಂದು ಕರೆದು ವಿಶ್ವ ಫುಟ್‌ಬಾಲ್‌ಗೆ ಅವರ ಕೊಡುಗೆ ಕುರಿತು ಸಾಕ್ಷ್ಯ ಚಿತ್ರವನ್ನೂ ನಿರ್ಮಿಸಿತ್ತು. ನಲವತ್ತರ ಹರಯದ ಸುನಿಲ್ ಯುವಕರನ್ನೂ ನಾಚಿಸುವ ದೈಹಿಕ ಕ್ಷಮತೆ ಹೊಂದಿರುವುದು ಫುಟ್‌ಬಾಲ್‌ನೆಡೆಗಿನ ಅವರ ಪ್ಯಾಶನ್ ಹೇಗಿದೆ ಎಂಬುದಕ್ಕೆ ಸಾಕ್ಷಿ.
ನಿಮ್ಮನ್ನು ನೀವೇ ಅನುಮಾನಿಸಲು ಶುರು ಮಾಡಿದ ದಿನ ಯುದ್ಧ ಮುಗಿಯಿತು ಎನ್ನುವ ಅವರ ಮಾತು ಸ್ವ ನಂಬಿಕೆಯ ಮಹತ್ವವನ್ನು ಹೇಳುತ್ತದೆ. ಇಂತಹ ಸುನಿಲ್ ಛೇತ್ರಿ ಅವರನ್ನು ಪ್ರತಿಭೆ ಮುಖ್ಯವೋ ಹಾರ್ಡ್ ವರ್ಕೋ ಎಂದು ಸಂದರ್ಶನವೊಂದರಲ್ಲಿ ಕೇಳಲಾಗುತ್ತದೆ. ಆಗ ಸುನಿಲ್ ಹೇಳುತ್ತಾರೆ, “ನಿಮ್ಮ ಕೈಲಿರುವುದು ಯಾವುದು? ಯಾವುದನ್ನು ನೀವು ನಿಭಾಯಿಸಬಲ್ಲಿರಿ? ಪ್ರತಿಭೆ ಇದೆಯೋ ಇಲ್ಲವೋ ಗೊತ್ತಿಲ್ಲ. ಪರಿಶ್ರಮ ಪಡುವುದು ನಮ್ಮ ಕೈಲೇ ಇದೆ. ಫುಟ್‌ಬಾಲ್ ಆಟದಲ್ಲಿ ಬಹಳ ಪ್ರತಿಭಾವಂತನಾಗಿರುವ ಒಬ್ಬ ಹುಡುಗನಿಗೆ ಕಷ್ಟ ಪಡುವ ಮನಸ್ಸೇ ಇಲ್ಲ. ಅದೇ ಮತ್ತೊಬ್ಬ ಹುಡುಗನಿಗೆ ಪ್ರತಿಭೆ ಇಲ್ಲ. ಆದರೆ ಆತನಿಗೆ ಕಷ್ಟಪಡುವ ಮನಸ್ಸಿದೆ. ಈ ಇಬ್ಬರಲ್ಲಿ ತಾವು ಕಷ್ಟಪಡುವವನನ್ನೇ ಆಯ್ದುಕೊಳ್ಳುವುದಾಗಿ ಹೇಳುತ್ತಾರೆ ಸುನಿಲ್. ಏಕೆಂದರೆ ಆಡುವಾಗ ಆ ಹುಡುಗ ತೊಂಬತ್ತು ನಿಮಿಷ ಮೈದಾನದಲ್ಲಿ ಬೆವರು ಸುರಿಸುತ್ತಾನೆ. ಅದೇ ಕಷ್ಟಪಡಲು ಮನಸ್ಸಿಲ್ಲದಿರುವ ಹುಡುಗ ನಾನು ಪ್ರತಿಭಾವಂತ, ನಾನೇಕೆ ಕಷ್ಟಪಡಬೇಕು ಅನ್ನಬಹುದು!
ನಿಜವೇ, ಪರಿಶ್ರಮವಿಲ್ಲದ ಪ್ರತಿಭೆಗೆ ಯಾವ ಬೆಲೆಯೂ ಇಲ್ಲ. ಪ್ರತಿಭೆ ಪರಿಶ್ರಮ ಪಡದಿದ್ದಾಗ ಪರಿಶ್ರಮ ಪ್ರತಿಭೆಯನ್ನು ಸೋಲಿಸುತ್ತದೆ!
-ದೀಪಾಹಿರೇಗುತ್ತಿ
No comments:
Post a Comment