ಕಥೆ-764
ಅಂತಾರಾಷ್ಟ್ರೀಯ ಯೋಗ ದಿನ
(ಯೋಗಿಯಾದವನು ನಿರೋಗಿ)
ಪ್ರಪಂಚಕ್ಕೆ ನಮ್ಮ ಭಾರತೀಯರ ನೀಡಿದ ಕೊಡುಗೆಗಳಲ್ಲಿ ಯೋಗವು ಒಂದು. ಯೋಗವು ಭಾರತದಲ್ಲಿ 5 ಸಾವಿರ ವರ್ಷಗಳ ಹಿಂದೆ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಯೋಗ ಎನ್ನುವ ಪದ ಸಂಸ್ಕೃತದ ಧಾತುವಾದ ಯುಜ್‌ನಿಂದ ರೂಪುಗೊಂಡಿದೆ. ಯುಜ್ ಎಂದರೆ ಕೂಡಿಸು ಅಥವಾ ಕೇಂದ್ರೀಕರಿಸು ಎಂದರ್ಥ. ಹಾಗಾಗಿ ಯೋಗ ಎನ್ನುವುದು ಮನಸ್ಸನ್ನು ಏಕಾಗ್ರತೆಯತ್ತ ಕೇಂದ್ರೀಕರಿಸುವ ಕ್ರಿಯೆಯಾಗಿದೆ. ಯೋಗಭ್ಯಾಸವು ಮೊದಲೇ ಹುಟ್ಟಿದ್ದರೂ, ಜಗತ್ತಿಗೆ ವ್ಯವಸ್ಥಿತವಾಗಿ ಪರಿಚಯಿಸಿದವರು ಪತಂಜಲಿ ಮಹರ್ಷಿ. ಆದ್ದರಿಂದ ಅವರನ್ನು ಯೋಗ ಪಿತಾಮಹ ಎನ್ನುವರು.
ಯೋಗಾಭ್ಯಾಸವು ಸಂಕುಚಿತವಾದ ಅಹಂಕಾರ ತುಂಬಿದ ವ್ಯಕ್ತಿತ್ವವನ್ನು ವಿಶಾಲಗೊಳಿಸಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ದೈಹಿಕವಾಗಿ ನಮ್ಮನ್ನು ಸಕ್ರಿಯವಾಗಿರಿಸುವು ದರ ಜೊತೆಗೆ ಮಾನಸಿಕ ಸಮಸ್ಯೆಯಾದ ಖಿನ್ನತೆಗೂ ಪರಿಹಾರ ಒದಗಿಸುತ್ತದೆ. ಹೀಗಾಗಿ ಯೋಗವನ್ನು ಚಿತ್ತವೃತ್ತಿ ನಿರೋಧಃ ಎಂದು ಕರೆಯುತ್ತಾರೆ. ಅಂದರೆ ಮನಸ್ಸನ್ನು ನಿಯಂತ್ರಿಸುವ ಕಲೆ ಇದು. ಯೋಗದ ವ್ಯಾಪ್ತಿ ವಿಶಾಲವಾದದ್ದು. ಕೇವಲ ಆಸನಗಳು ಅಥವಾ ಪ್ರಾಣಾಯಾಮ ಗಳಷ್ಟೇ ಯೋಗವಲ್ಲ. ಯೋಗ ಎಂಬುದು ಅಷ್ಟಾಂಗಗಳನ್ನು ಒಳ ಗೊಂಡಿದೆ. ಇದು ಭಾರತದ ಪ್ರಾಚೀನ ಭಾರತದ ಋಷಿಗಳು ಪ್ರಪಂಚಕ್ಕೆ ನೀಡಿದ ಜ್ಞಾನ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇವುಗಳು ಅಷ್ಟಾಂಗ ಯೋಗಗಳು.
ಒತ್ತಡದ ಜೀವನದ ಬಳಲುವಿಕೆಯನ್ನು ಯೋಗ ನಿವಾರಿಸುತ್ತದೆ. ನಿರಂತರ ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದ ಜೊತೆಗೆ ಯೋಗವು ಏಕಾಗ್ರತೆಯನ್ನು ಹೆಚ್ಚಿಸುವ ಮೂಲಕ ಮಾನಸಿಕ ಆರೋಗ್ಯವನ್ನು ಹೆಚ್ಚು ಮಾಡುತ್ತದೆ
ಅಂತರಾಷ್ಟ್ರೀಯ ಯೋಗ ದಿನವು ಪ್ರತೀ ವರ್ಷ ಜೂನ್ 21ರಂದು ಆಚರಿಸಲ್ಪಡುತ್ತದೆ. ಯೋಗವು ವ್ಯಾಯಾಮ ಮತ್ತು ಆರೋಗ್ಯಕರ ಚಟುವಟಿಕೆಯ ಪ್ರಮುಖ ಮೂಲವಾಗಿದ್ದು, ಸುಸ್ಥಿರ ಆರೋಗ್ಯ ಕಾಪಾಡಿಕೊಳ್ಳಲು ಖರ್ಚಿಲ್ಲದ ಒಂದು ಉತ್ತಮ ಮಾರ್ಗ. ಈ ದಿನಚರಿಯು ದೇಹ, ಮನಸ್ಸು ಮತ್ತು ಆತ್ಮವನ್ನು ಶತಮಾನಗಳಿಂದಲೂ ಕಾಪಾಡುತ್ತಾ ಬಂದಿದೆ.
ಅದರಲ್ಲೂ ವಿದ್ಯಾರ್ಥಿಗಳಿಗೆ ಏಕಾಗ್ರತೆ ಬೆಳೆಸಿಕೊಳ್ಳಲು ಇದು ಅತ್ಯುತ್ತಮ ಮಾರ್ಗ... ಯೋಗ ದೇಹದ ಸಾಮಾನ್ಯ ಯೋಗಕ್ಷೇಮಕ್ಕೆ ಸಹಾಯ ಮಾಡುತ್ತದೆ. ದೈಹಿಕ ಗಾಯಗಳು ಮತ್ತು ದೀರ್ಘಕಾಲದ ನೋವನ್ನು ನಿವಾರಿಸುತ್ತದೆ.
ಯೋಗಿಯಾದವನು ನಿರೋಗಿ...

No comments:
Post a Comment