Tuesday, June 24, 2025

 ಕಥೆ-766


ಒಂದು ಕ್ಷಣದ ದುರಾಸೆ!




ಬಹಳ ಹಿಂದೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಬಹಳ ಪ್ರಾಮಾಣಿಕನಾಗಿರುತ್ತಾನೆ. ವ್ಯಾಪಾರದಲ್ಲಿನ ಮಾಲೀಕನ ಮೋಸವನ್ನು ವಿರೋಧಿಸುತ್ತಾನೆ. ಪರಿಣಾಮ ಕೆಲಸ ಕಳೆದುಕೊಳ್ಳುತ್ತಾನೆ. ಬೇಸರದಿಂದ ಅರಳಿಕಟ್ಟೆಯ ಮೇಲೆ ಕುಳಿತ. ಅಲ್ಲಿಯೇ ಕುಳಿತಿದ್ದ ವೃದ್ಧನೊಬ್ಬನ ಹತ್ತಿರ ಮೂರು ಭಾರವಾದ ಚೀಲಗಳಿರುತ್ತವೆ. ಪಕ್ಕದೂರಿಗೆ ಹೋಗುವುದಿದೆ.




ಭಾರವಾದ ಒಂದು ಚೀಲವನ್ನು ಹೊತ್ತು ತಂದುಕೊಟ್ಟರೆ ಹುಡುಗನಿಗೆ ಮೂರು ಚಿನ್ನದ ನಾಣ್ಯ ಕೊಡುತ್ತೇನೆ ಎನ್ನುತ್ತಾನೆ ವೃದ್ಧ. ವಾಹನಗಳಿಲ್ಲದ ಕಾಲ. ಉದ್ಯೋಗ ಯಾವುದಾದರೇನು ಎಂದು ಹುಡುಗ ಒಪ್ಪುತ್ತಾನೆ.




ಹೋಗುವಾಗ ಒಂದು ಹಳ್ಳ ಅಡ್ಡ ಬಂತು. 'ಇವೆರಡು ಚೀಲ ಹಿಡಿದುಕೊಂಡು ನಾನು ದಾಟಲಾರೆ, ಇನ್ನೊಂದು ಚೀಲ ಹಿಡಿದುಕೊ, ಮತ್ತೆ ಮೂರು ಚಿನ್ನದ ನಾಣ್ಯ ಕೊಡುತ್ತೇನೆ' ಎಂದ ವೃದ್ಧ. ಯುವಕ ಇದರಲ್ಲೇನಿದೆ ಎಂದು ಕೇಳಿದ. 'ಮೊದಲ ಚೀಲದಲ್ಲಿ ತಾಮ್ರದ ನಾಣ್ಯಗಳು, ಇದರಲ್ಲಿ ಬೆಳ್ಳಿಯ ನಾಣ್ಯಗಳು' ಎಂದ ವೃದ್ಧ. ನಡುನಡುವೆ ವೃದ್ಧ ಈತನನ್ನು ಗಮನಿಸುತ್ತಿದ್ದ.


ಆಗೆಲ್ಲ ಯುವಕನಿಗೆ ಕಸಿವಿಸಿಯಾಗುತ್ತಿತ್ತು, 'ಅಜ್ಜಾ, ನಿನ್ನ ಮೂಟೆಯೊಂದಿಗೆ ನಾನು ಎಲ್ಲಿಯೂ ಹೋಗುವುದಿಲ್ಲ. ನನ್ನ ಪ್ರಾಮಾಣಿಕತೆಯಿಂದಲೇ ನಾನು ಕೆಲಸ ಕಳೆದುಕೊಂಡಿದ್ದು' ಎಂದ ಸಿಟ್ಟಿನಿಂದ.




ಮತ್ತೂ ಸ್ವಲ್ಪ ದೂರ ಹೋದ ಮೇಲೆ ವೃದ್ಧ 'ಮಗೂ ನೀನು ಈ ಚೀಲವನ್ನೂ ಹಿಡಿದುಕೋ. ನನಗೆ ಸುಸ್ತಾಯಿತು. ಇನ್ನೂ ಮೂರು ಚಿನ್ನದ ನಾಣ್ಯ ಕೊಡುತ್ತೇನೆ' ಎಂದ.




ಮೂರು ಚೀಲಗಳನ್ನು ಹಿಡಿದುಕೊಂಡ ಯುವಕನ ಮನಸ್ಸಿನಲ್ಲಿ ಇದ್ದಕ್ಕಿದ್ದಂತೆ, ತಾನೀಗ ಈ ಚೀಲಗಳನ್ನು ತೆಗೆದುಕೊಂಡು ಓಡಿಬಿಟ್ಟರೆ ಏನಾಗುತ್ತದೆ? ಈತ ತನ್ನನ್ನು ಹಿಡಿಯಲು ಸಾಧ್ಯವಿಲ್ಲವಲ್ಲ ಎಂಬ ಯೋಚನೆ ಬಂತು. ಹಾಗಂದುಕೊಂಡವನೇ ಬೇರೇನೂ ಯೋಚಿಸದೇ ಓಡತೊಡಗಿದ. ಬಹಳ ದೂರ ಓಡಿದ ಮೇಲೆ ತಾಮ್ರದ ನಾಣ್ಯಗಳ ಚೀಲವನ್ನು ತೆರೆದು ನೋಡಿದರೆ ಅದರಲ್ಲಿ ಕಲ್ಲುಗಳಿದ್ದವು, ಬೆಳ್ಳಿಯ ನಾಣ್ಯಗಳ ಚೀಲದಲ್ಲೂ ಕಲ್ಲುಗಳೇ! ಇನ್ನೊಂದರಲ್ಲಿ ಚಿನ್ನದ ನಾಣ್ಯಗಳೇ ಇರಬಹುದೆಂದುಕೊಂಡಿದ್ದ. ಅದರಲ್ಲೂ ಕಲ್ಲುಗಳೇ! ಮೂರನೇ ಚೀಲದಲ್ಲಿ ಚೀಟಿಯೊಂದು ಸಿಕ್ಕಿತು.


'ನಾನು ಈ ದೇಶದ ರಾಜ. ಪ್ರಾಮಾಣಿಕ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪರೀಕ್ಷೆಯಾಗಿತ್ತಿತ್ತು. ನೀನು ಈ ಚೀಲಗಳನ್ನು ತೆಗೆದುಕೊಂಡು ಓಡದಿದ್ದರೆ ಬಹುಶಃ ಮುಂದಿನ ರಾಜನಾಗುತ್ತಿದ್ದಿ'. ಯುವಕ ಬಿಕ್ಕಿಬಿಕ್ಕಿ ಅಳತೊಡಗಿದ.




ನಮ್ಮ ಬದುಕಿನಲ್ಲೂ ಅಷ್ಟೇ; ನಾವು ಸದಾ ಪ್ರಾಮಾಣಿಕರಾಗಿರುತ್ತೇವೆ. ಒಳ್ಳೆಯ ಕೆಲಸಗಳನ್ನೇ ಮಾಡುತ್ತಿರುತ್ತೇವೆ. ಆದರೆ ಒಂದು ದುರ್ಬಲ ಕ್ಷಣದಲ್ಲಿ ಮೋಹಕ್ಕೆ, ದುರಾಸೆಗೆ ಶರಣಾಗಿಬಿಡುತ್ತೇವೆ. ಒಂದು ಹೆಜ್ಜೆ ನಮ್ಮ ವ್ಯಕ್ತಿತ್ವವನ್ನು, ಕೆಲವೊಮ್ಮೆ ಬದುಕನ್ನೇ ನಾಶಮಾಡಿಬಿಡಬಲ್ಲದು. ಹಾಗಾಗಿ ಅಂತಹ ಸಂದರ್ಭ ಬಂದಾಗ ಜೀವನವಿಡೀ ನಡೆದುಬಂದ ದಾರಿಯನ್ನು ಮತ್ತೊಮ್ಮೆ ತಿರುಗಿ ನೋಡಿದರೆ ದುಡುಕಲಾರೆವು.


-ದೀಪಾ ಹಿರೇಗುತ್ತಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು