ಕಥೆ-762
ನೋವನ್ನೇ ಅಣಕಿಸಿ ಎದ್ದು ಹೊರಡಿ
ಎಷ್ಟು ಹೊತ್ತು ಅದೇ ಗುಂಗಿನಲ್ಲಿ ಇರುತ್ತೀರಿ? ಕಿತ್ತು ಬಿಸಾಡಿ. ಈ ಜಗತ್ತಿನಲ್ಲಿ ಯಾವುದೂ ತಲೆಯ ಮೇಲೆ ಬಿದ್ದೇ ಇರುತ್ತದೆ ಎಂಬುದೇ ಇಲ್ಲ. ಯಾವುದೂ ಇಳಿಸಲಾರದ ಭಾರವಲ್ಲ. ವೃಥಾ ನಿಮ್ಮಷ್ಟಕ್ಕೆ ನೀವೇ ಕೆಲವೊಂದು ವಿಷಯಗಳಿಗೆ ಅತಿಯಾದ ಪ್ರಾಮುಖ್ಯ ಕೊಟ್ಟು ಇನ್ನಿಲ್ಲದಂತೆ ದೊಡ್ಡದು ಮಾಡಿರುತ್ತೀರಿ. ಏನು ಮಹಾ? ಜಗತ್ತು ಒಂದೇ ವಿಷಯಕ್ಕೆ ಸೀಮಿತವಾಗಿದೆಯೇ? ಅದು ಎಂಥದ್ದೇ ನೋವಿರಬಹುದು, ಸಮಸ್ಯೆ ಇರಬಹುದು, ಸಂಕಟವಿರಬಹುದು ಅದಕ್ಕೊಂದು ಮಿತಿಯಿದೆ. ಅದನ್ನು ದಾಟಿಯೂ ಬದುಕಿದೆ. ಹುಟ್ಟುವಾಗಲೇ ನೀವೇನೂ ಇದಕ್ಕೇ ಸೀಮಿತವೆಂದೇನೂ ಹುಟ್ಟಿಲ್ಲ. ಅದು ಸಂಬಂಧದ ವಿಷಯವಿರಬಹುದು, ಸಾವು- ನೋವು, ಆಕಸ್ಮಿಕ- ಅಗಲಿಕೆ- ಆಘಾತ, ನಷ್ಟ... ಒಟ್ಟಾರೆ ನಮ್ಮ ಹೃದಯವನ್ನು ಹಿಂಡುವ ಯಾವುದೇ ಸಂಗತಿಗಳಿದ್ದರೂ ಆ ಕ್ಷಣದ ಸಂವೇದನೆಗೆ ಮಾತ್ರ ಅದು ಅರ್ಹ. ಮತ್ತು ಅದನ್ನು ಅಷ್ಟಕ್ಕೇ ಸೀಮಿತಗೊಳಿಸಿಬಿಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಯಾರಿಗೂ ಬರಲಾರದ ಸಮಸ್ಯೆ, ಸಂಕಷ್ಟವೇನೂ ನಿಮಗೆ ಬಂದಿರಲಿಕ್ಕೆ ಸಾಧ್ಯವೇ ಇಲ್ಲ. ನಿಮ್ಮ ಪಾಳಿ ಈಗ ಬಂದಿದೆ ಎಂದರೆ ಅದು ದಾಟಿಕೊಂಡು ಮುಂದಕ್ಕೆ ಹೋಗುತ್ತದೆ ಎಂದೇ ಅರ್ಥವಲ್ಲವೇ? ನೀವಾಗಿ ಅದನ್ನು ಆಹ್ವಾನಿಸಿದ್ದೇನೂ ಅಲ್ಲ. ಹಾಗಿರುವಾಗ ನೀವೇಕೆ ಅದಕ್ಕೆ ಅಂಟಿಕೊಂಡಿರಬೇಕು? ಕಿತ್ತು ಬಿಸಾಡಿ. ಇನ್ನೂ ಎಷ್ಟು ಹೊತ್ತು ಮನಸ್ಸಿನಲ್ಲೇ ನೋವನ್ನು ಅನುಭವಿಸುತ್ತಾ, ಬಾಡಿದ ಮುಖವನ್ನು ಪ್ರದರ್ಶಿಸುತ್ತ ಕುಳಿತಿರುತ್ತೀರಿ. ಇದಕ್ಕೆ ಕಾರಣ ನಿಮಗಾದ ನೋವಿಗಿಂತ ನೀವು ಬೇರೇನನ್ನೋ ನಿರೀಕ್ಷಿಸುತ್ತಿದ್ದೀರಿ ಎಂದರ್ಥ. ಅದರಲ್ಲೂ ಬೇರೆಯವರು ನಿಮ್ಮನ್ನು ನೋಡಿ ಅನುಕಂಪ ವ್ಯಕ್ತಪಡಿಸಲಿ, ನೀವು ಬಹಳ ನೋವು, ದುಃಖದಲ್ಲಿದ್ದೀರಿ ಎಂದು ಅರಿಯಲಿ ಎಂಬಂಥ ಬೇಡದ ಹಂಬಲಕ್ಕೆ ನೀವು ಒಳಗಾಗಿರುತ್ತೀರಿ. ಒಂದನ್ನು ನೆನಪಿಡಿ, ದುಃಖ-ನೋವುಗಳು ಹಂಚುವಂಥ ವಿಷಯವಲ್ಲ. ಅದು ತೀರಾ ವೈಯಕ್ತಿಕ. ಅದಕ್ಕೆ ನಾವೇ ಹೊಣೆಗಾರರು. ಯಾರೂ ಅದನ್ನು ಹಂಚಿಕೊಳ್ಳೊ ಇಷ್ಟವನ್ನೂ ಪಡರು. ಹೆಚ್ಚೆಂದರೆ ಒಂದು ಸಾಂತ್ವನ, ಒಂದು ಅನುಕಂಪ, ಒಂದಷ್ಟು ಸಹಾನುಭೂತಿಯನ್ನು ವ್ಯಕ್ತಪಡಿಸಿ ಹೋಗಿಬಿಟ್ಟಾರು. ಅದರಿಂದೇನೂ ನಿಮ್ಮ ದುಃಖ- ನೋವು ಕಡಿಮೆಯಾಗುವುದಿಲ್ಲ. ನಿಮ್ಮನ್ನು ಸಂತೈಸಲು ನಿಮಗಿಂತ ಸಮರ್ಥ ವ್ಯಕ್ತಿ ಇನ್ನೊಬ್ಬರಿಲ್ಲ. ನಿಮ್ಮ ನೀವು ಸಂತೈಸಿಕೊಳ್ಳಿ. ಜಗತ್ತಿನಲ್ಲಿ ಅಸಂಖ್ಯ ವಿಷಯಗಳಿವೆ. ನೀವು ಕಂಡಿರದ, ಕೇಳಿರದ ಬಹಳಷ್ಟು ವಿಷಯಗಳಿವೆ. ನೀವೇ ಮಾಡಬೇಕಿರುವರುವ ಇನ್ನೂ ಅದೆಷ್ಟೋ ಕೆಲಸಗಳು ಬಾಕಿ ಇವೆ. ಅದನ್ನು ಮಾಡುವವರು ಯಾರು. ಅತ್ತ ಹೊರಟುಬಿಡಿ. ವಿಸ್ತಾರ ಜಗತ್ತನ್ನು ನೋಡಿದಾಗ ನಮ್ಮ ಬದುಕು ತೀರಾ ಚಿಕ್ಕದು. ಅದಕ್ಕೆ ಸಮಯ ಎಲ್ಲಿಂದ ತರುವಿರಿ? ನಮಗೆ ಬೇಡವಾದ ಸಂಗತಿಗಳಲ್ಲೇ ಸಮಯ ಕಳೆದರೆ ಅದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಒಂದೇ ಒಂದು ದೀರ್ಘ ನಿಟ್ಟುಸಿರು ತೆಗೆದು ಹೊರಬಿಟ್ಟು ಎದ್ದು ಹೊರಡುವುದರಿಂದ ಸಾಧನೆ ಬಹಳಷ್ಟಾಗಲಿದೆ. ನಿಮಗಾದ ನೋವಿಗೆ ಆ ಮೂಲಕ ಸೇಡು ತೀರಿಸಿಕೊಳ್ಳಿ. ಅದನ್ನೇ ಅಣಕಿಸುತ್ತಾ ಬದುಕಿಬಿಡಿ. ಜಗತ್ತು ನಿಮ್ಮದಾಗುತ್ತದೆ.
ಪೃಥೆಮುನ್ನಿ
No comments:
Post a Comment