ಕಥೆ-761
ಅತ್ತಾರು ಅತ್ತು ಬಿಡಿ, ಒಮ್ಮೆ
ಮೈ ಅತ್ತು ಹಗುರಾಗಿಬಿಡಿ.
ಯಾವುದೇ ಮುಜುಗರವೇಕೆ? ಈ ಜಗತ್ತಿನಲ್ಲಿ ಕಣ್ಣೀರೇ ಇಲ್ಲದ ಮನುಷ್ಯ ಯಾರೂ ಇಲ್ಲ. ಅದಿರುವುದೇ ಹೊರಹಾಕಲು ಕಣ್ಣೀರು ದೃಷ್ಟಿಯನ್ನು ಮಾತ್ರವೇ ಅಲ್ಲ. ಭಾವನೆಗಳನ್ನೂ ಸ್ವಚ್ಛಗೊಳಿಸುತ್ತದೆ. ಅದೊಂದು ಸಹಭಾಗಿತ್ವದ ಪ್ರತೀಕ. ದೇಹದ ಯಾವುದೇ ಭಾಗಕ್ಕೆ ನೋವಾದರೂ ತಕ್ಷಣಕ್ಕೆ ಸ್ಪಂದಿಸುವುದು ಕಣ್ಣೆ. ಅದು ಭೌತಿಕ ನೋವಾಗಿರಬಹುದು, ಮಾನಸಿಕ ನೋವೇ ಇರಬಹುದು. ಒಮ್ಮೆ ಕಣ್ಣೀರು ಅದಕ್ಕೆ ಸಹಭಾಗಿತ್ವವನ್ನು ಕೊಡದೇ ಹೋದಲ್ಲಿ ಯಾವುದೇ ನೋವು ಕರಗಲು ಸಾಧ್ಯವೇ ಇಲ್ಲ. ಅದು ನಮ್ಮ ಬದುಕಿಗೆ ನಿಸರ್ಗ ಕೊಟ್ಟ ಬಹುದೊಡ್ಡ ಕೊಡುಗೆ. ಅದನ್ನು ಉಪಯೋಗಿಸದೇ ಉಳಿಸಿಕೊಳ್ಳುವುದರಲ್ಲಿ ಯಾವ ಪುರುಷಾರ್ಥವಿದೆ ಹೇಳಿ? ಹೀಗಾಗಿ ದುಃಖದ ಈ ಸುಲಭ ಅಭಿವ್ಯಕ್ತಿಗೆ ಹಿಂಜರಿಕೆ ಬೇಡವೇ ಬೇಡ. ಅದು ಅವಮಾನವೂ ಅಲ್ಲ, ಪ್ರತಿಷ್ಠೆಯೂ ಅದಕ್ಕೆ ಅಡ್ಡ ಬರಬೇಕಿಲ್ಲ. ಹೇಳಿಕೊಳ್ಳಲಿಬಿಡಿ- ಅವನು ಹೆಣ್ಣಿಗ, ಅವನು ಹೇಡಿ, ಅವಳು ಅಳುಮುಂಜಿ, ಮಾತೆತ್ತಿದರೆ ಅಳುತ್ತಾಳೆ, ಅವರಿಗೆ ಸ್ವಲ್ಪವೂ ಪರಿಸರ ಪ್ರಜ್ಞೆ ಇಲ್ಲ; ಎಲ್ಲೆಂದರಲ್ಲಿ ಕಣ್ಣೀರು ಹಾಕುತ್ತಾರೆ. ಇಂಥ ವ್ಯಾಖ್ಯಾನಗಳಿಗೆಲ್ಲ ನೀವು ತಲೆಕೆಡಿಸಿ ಕೊಳ್ಳಲೇಬೇಕಿಲ್ಲ. ಕಣ್ಣಿರು ನಿಮ್ಮ ಪ್ರಾಮಾಣಿಕ ಮನದ ಪ್ರತಿಬಿಂಬ. ಬಲವಂತಕ್ಕೆ ಅದು ಬಗ್ಗುವ ಸಂಗತಿಯಲ್ಲ. ನಿಮ್ಮ ಭಾವನೆಗಳು ಪ್ರಚೋದನೆಗೊಳಗಾದಾಗ ಮಾತ್ರವೇ ನಿಮ್ಮ ಕಣ್ಣಲ್ಲಿ ನೀರು ಬರಲು ಸಾಧ್ಯ. ಏನು ಮಾಡಿದರೂ ಅಳುವೇ ಬರದು, ಬಂದಿದ್ದರೆ ಒಮ್ಮೆ ಅತ್ತು ಹಗುರಾಗಿ ಬಿಡುತ್ತಿದ್ದೆ ಎಂದು ಹಲುಬಿಕೊಳ್ಳುವವರನ್ನು ಕೇಳಿಯೇ ಇರುತ್ತೀರಿ. ಅದು ಸಹಜ. ಹೀಗಿರುವಾಗ ಅದನ್ನು ಅದುಮಿಟ್ಟುಕೊಳ್ಳುವುದರಲ್ಲಿ ಅರ್ಥವೇನಿದೆ ಹೇಳಿ? ಅಳಲಾಗದ ವ್ಯಕ್ತಿ ಸಂತಸವಾಗಿಯೂ ಇರಲಾರ. ಅಂದರೆ ಭಾವನೆಗಳನ್ನು ಆತನಿಗೆ ಅನುಭವಿಸಲು ಸಾಧ್ಯಲ್ಲವೆಂದಂತಾಯಿತು. ಭಾವನೆಗಳಿಲ್ಲದ ಬರಡು ಬದುಕಿನಲ್ಲಿ ಏನು ಸೊಗಸಿದೆ? ಇನ್ನೂ ಬೇಕಿದ್ದರೆ ಎಲ್ಲರೆದುರು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲಾಗದು ಎಂದಿದ್ದರೆ ಎಲ್ಲಾದರೂ ಗೌಪ್ಯ ಸ್ಥಳಕ್ಕೆ, ಯಾರೂ ಕಾಣದ ಜಾಗಕ್ಕೆ ಹೋಗಿ ಮನಕ್ಕೆ ತೃಪ್ತಿಯಾಗುವವರೆಗೆ ಅತ್ತುಬಿಡಿ. ರಾತ್ರಿ ಎಲ್ಲರೂ ಮಲಗಿದ ಮೇಲೆ ಕಣ್ಣೀರು ಹೊರಬರಲು ಬಿಟ್ಟುಬಿಡಿ. ಅಲ್ಲಿಗೆ ಹೃದಯದ ನೀರು ಬಸಿದು ಗಟ್ಟಿಯಾಗುತ್ತದೆ. ಅದಿಲ್ಲದಿದ್ದರೆ ನಿಮ್ಮ ಹೃದಯಕ್ಕೆ ತೀರಾ ಹತ್ತಿರವಾದವರ ಬಳಿ ಎಲ್ಲವನ್ನೂ ತೋಡಿಕೊಂಡು ಕಣ್ಣಿರು ಹರಿಸಿಬಿಡಿ. ಮತ್ತೆ ಹೃದಯ ಚೊಕ್ಕ ಚೊಕ್ಕ. ಇದು ಅಳುಗೆ ಮಾತ್ರವೇ ಅಲ್ಲ, ನಗು, ಆಕ್ರೋಶ, ಸಿಟ್ಟು ಮುಂತಾದ ಒಟ್ಟಾರೆ ನಿಮ್ಮ ಮನದೊಳಗೆ ಹುದುಗಿದ ಭಾವನೆಗಳೆಲ್ಲದಕ್ಕೂ ಅನ್ವಯ. ನಗಬೇಕಿನಿಸಿದರೆ ಮನಬಿಚ್ಚಿ ನಗಿ. ಹಾಗೆಯೇ ಉಳಿದೆಲ್ಲ ಭಾವನೆಗಳಿಗೂ ಅದಕ್ಕಿರುವ ಎಲ್ಲ ಅಭಿವ್ಯಕ್ತಿ ಮಾಧ್ಯಮಗಳನ್ನು ಬಳಸದವನೇ ಪಾಪಿ. ಒಂದು ಪ್ರಮುಖ ಸಂಗತಿಯೆಂದರೆ ಎಲ್ಲ ಭಾವನೆಗಳ ನಿಯಂತ್ರಣ ನಿಮ್ಮ ಕೈಯಲ್ಲಿರಲಿ. ನಿಮ್ಮ ಮನಸ್ಸು ಹೃದಯ ತಣ್ಣಗಿರಲಿ.
ಕೃಪೆ:ನೆಟ್
No comments:
Post a Comment