ಕಥೆ-749
ನಿಜ ಜೀವನದಲ್ಲಿ ಸುಖಿಗಳು ಪರಿಸರ ಪ್ರೇಮಿಗಳು...
ಹೊಸ ಶೈಕ್ಷಣಿಕ ವರ್ಷದ ಹೊಸ್ತಿಲಲ್ಲಿ, ಹೊಸ ಹುರುಪಿನೊಂದಿಗೆ, ಹೊಸ ನಿರೀಕ್ಷೆಯೊಂದಿಗೆ, ಬಂದಿರುವ ಮಕ್ಕಳೇ, ತರಗತಿಯ ವಿನ್ಯಾಸದಲ್ಲಿ, ಶಾಲಾವರಣದಲ್ಲಿ, ಹೊಸದೇನು ಇಲ್ಲದಿದ್ದರೆ ನಾವೇಕೆ ಅದನ್ನು ಹೊಸ ಶೈಕ್ಷಣಿಕ ವರ್ಷ ಎನ್ನಬೇಕು?
ಬದಲಾವಣೆ ಜಗದ ನಿಯಮ
(Change is the law of nature)
ಹೊಸ ಶೈಕ್ಷಣಿಕ ವರ್ಷದ ಮೊದಲ ಕಾರ್ಯಕ್ರಮ ಅದೇ ವಿಶ್ವ ಪರಿಸರ ದಿನಾಚರಣೆ...
ಇದು ಕೇವಲ ಫೋಟೋ ತೆಗೆಯುವ ಕಾರ್ಯಕ್ರಮ ಆಗಬಾರದು. ಪರಿಸರ ಉಳಿಸಿಕೊಳ್ಳಲು ನಮಗೆ ಭೂಮಿ ಎಚ್ಚರಿಕೆ ಗಂಟೆಯನ್ನು ನೀಡುತ್ತಾ ಬಂದಿದೆ, ಆದರೆ ನಾವು ಎಚ್ಚೆತ್ತುಕೊಳ್ಳುತ್ತಿಲ್ಲ. ಗಿಡ ಮರಗಳನ್ನು ಬೆಳೆಸುವ ಕೆಲಸ ಯುದ್ಧೋಪಾದಿಯಲ್ಲಿ ನಡೆಯಬೇಕಿದೆ. ಇಲ್ಲದಿದ್ದರೆ ಇದಕ್ಕೆ ಮುಂದೆ ದೊಡ್ಡ ಪಶ್ಚಾತಾಪ ಪಡಬೇಕಾಗುತ್ತದೆ.. ಪ್ರತಿಯೊಬ್ಬರ ಮನಸ್ಥಿತಿ ಬದಲಾಗದ ಹೊರತು, ಪ್ರಯತ್ನ ಮಾಡಲ್ಲ, ಪ್ರಯತ್ನ ಮಾಡದ ಹೊರತು, ಮರಗಳು ಬೆಳೆಯಲ್ಲ, ಮರಗಳು ಬೆಳೆಯದ ಹೊರತು ನಾವು ಉಳಿಯಲ್ಲ.
ರೋಡಿಗೆ ಇಳಿಯುವ ವಾಹನಗಳನ್ನು ತಡೆಯುವ ಸಾಮರ್ಥ್ಯ ನಮ್ಮಲ್ಲಿಲ್ಲ, ಆದರೆ ಗಿಡ ಮರಗಳನ್ನು ಬೆಳೆಸುವ ಸಾಮರ್ಥ್ಯ ನಮಗಿದೆ. ಪ್ರಯತ್ನದಲ್ಲಿ ಫಲವಿದೆ..
ಈ ವರ್ಷ ವಿಶ್ವ ಪರಿಸರ ದಿನದ 2025ರ ಧೇಯ ವಾಕ್ಯವು "ಸೋಲಿಸಿ ಪ್ಲಾಸ್ಟಿಕ್ ಮಾಲಿನ್ಯ"(Beat plastic pollution) ಭೂಮಿಯ ಉತ್ತಮ ಪರಿಸರವನ್ನು ಮರುಸ್ಥಾಪನೆ ಮಾಡುವುದಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಯು ಕೈಗಾರಿಕೀಕರಣ ಮತ್ತು ನಗರೀಕರಣ ಉಂಟು ಮಾಡಿ, ಮರಗಳನ್ನು ಬಲಿ ಪಡೆಯುತ್ತಿದೆ ಮತ್ತು ಇದು ಪ್ರಪಂಚದಾದ್ಯಂತ ಗಂಭೀರ ಸಮಸ್ಯೆಯಾಗಿದೆ.
ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ವಿಪರೀತ ವಾಹನಗಳು ಮಾಲಿನ್ಯದ ಪ್ರಮಾಣ ಹೆಚ್ಚಿಸುತ್ತಿವೆ.. ಅದೇ ರೀತಿ ಗಿಡಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಇದರ ಪರಿಣಾಮವೇ ಜಾಗತಿಕ ತಾಪಮಾನದ ಏರಿಕೆ, ಹವಾಮಾನ ವೈಪರಿತ್ಯ, ಪ್ರತಿಯೊಬ್ಬರೂ ಪ್ರಮಾಣ ಮಾಡೋಣ. ಮಕ್ಕಳಿಗೂ ಸಹ ಪರಿಸರದೊಂದಿಗೆ ಶಿಕ್ಷಣ ಪಡೆಯುವ ಸಂಸ್ಕಾರ ಕೊಡಬೇಕಿದೆ. ನಿಜ ಜೀವನದಲ್ಲಿ ಸುಖಿಗಳು ಪರಿಸರ ಪ್ರೇಮಿಗಳು...
Shankargouda Basapur
GHS Hiremyageri
No comments:
Post a Comment