ಕಥೆ-756
ಇರುವ ಸಮಯದಲ್ಲಿ ಸಾರ್ಥಕವಾಗಿ ಬದುಕಬೇಕು
ತಾಯಿಗೆ ಒಳ್ಳೆಯ ಮಗನಾಗಲಿಲ್ಲ, ಹೆಂಡತಿಗೆ ಒಳ್ಳೆಯ ಗಂಡನಾಗಲಿಲ್ಲ... ಇನ್ನು ಬದುಕಿದ್ದು ಏನು ಪ್ರಯೋಜನ ಅಂತನಿಸಿತು ಅವನಿಗೆ. ಸರಿ, ಅತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ. ಅದಕ್ಕೂ ಮುನ್ನ ರಮಣ ಮಹರ್ಷಿಗಳ ಕೊನೆಯ ದರ್ಶನ ಪಡೆಯೋಣವೆಂದುಕೊಂಡು ಅವರ ಆಶ್ರಮಕ್ಕೆ ಹೋದ. ಮಹರ್ಷಿಗಳ ಎದುರು ತನ್ನ ಸಮಸ್ಯೆಗಳನ್ನು ಹೇಳಿಕೊಂಡು, ಸಾಯುವುದಕ್ಕೆ ತೀರ್ಮಾನ ಮಾಡಿರುವುದಾಗಿ ಹೇಳಿದ. ಆ ಸಮಯದಲ್ಲಿ ಮಹರ್ಷಿಗಳು ಊಟದ ಎಲೆ ತಯಾರಿಸುತ್ತಿದ್ದರು. ಆತನಿಗೆ ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಹೇಳಿ, ತಮ್ಮ ಕೆಲಸ ಮುಂದುವರಿಸಿದರು. ಎರಡು ತಾಸಿನ ನಂತರ ನೂರಾರು ಎಲೆಗಳನ್ನು ಒಟ್ಟು ಮಾಡಿ ಅದನ್ನು ತಿಪ್ಪೆಗೆ ಎಸೆಯುವುದಕ್ಕೆ ಅವನಿಗೆ ಹೇಳಿದರು. ಆ ಮನುಷ್ಯನಿಗೆ ಆಶ್ಚರ್ಯವೋ ಆಶ್ಚರ್ಯ. ಇಷ್ಟು ಕಷ್ಟಪಟ್ಟು ಮಾಡಿದ ಕೆಲಸವನ್ನು ಯಾಕೆ ಎಸೆಯುತ್ತಿದ್ದೀರಿ ಎಂದು ಕೇಳುತ್ತಾನೆ. 'ಬರೀ ಇಷ್ಟಕ್ಕೇ ನೀನು ಬೇಸರ ಮಾಡಿಕೊಂಡರೆ ಹೇಗೆ? ನಿನ್ನನ್ನು ಆ ದೇವರು( ಪ್ರಕೃತಿ) ಎಷ್ಟು ಕಷ್ಟಪಟ್ಟು, ಎಷ್ಟು ಸಮಯ ತೆಗೆದುಕೊಂಡು ಸೃಷ್ಟಿ ಮಾಡಿರುತ್ತಾನೆ. ನಿನ್ನಿಂದ ಯಾವುದೋ ಕೆಲಸ ಮಾಡಿಸಬೇಕೆಂದು ಯೋಚಿಸಿರುತ್ತಾನೆ. ನೀನು ಆತ್ಮಹತ್ಯೆ ಮಾಡಿಕೊಂಡರೆ ಅವನ ಶ್ರಮ ವ್ಯರ್ಥವಾಗುವುದಿಲ್ಲವೇನು?' ಎಂದು ಹೇಳಿದರು. ಆ ಮನುಷ್ಯನಿಗೆ ತನ್ನ ತಪ್ಪಿನ ಅರಿವಾಗಿ ಆತ್ಮಹತ್ಯೆಯ ಯೋಚನೆಯನ್ನು ಬಿಟ್ಟ. ಒಬ್ಬ ಮನುಷ್ಯ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದಕ್ಕಿಂತ ಹೇಗೆ ಬದುಕಿದ ಎನ್ನುವುದು ಮುಖ್ಯ.
ಗವಿಸಿದ್ದೇಶ್ವರ ಸ್ವಾಮಿ ಗವಿಮಠ, ಕೊಪ್ಪಳ
No comments:
Post a Comment