ಕಥೆ-783
ತಾಯಿಗೆ ಪ್ರಣಾಮಗಳು 💐🌹🙏
(ಭಾಗ-1)
https://youtube.com/live/x_hI-5Q8K5c?feature=share
ಅದೊಂದು ಆಹ್ಲಾದಕರ ಸಂಜೆ. ದೆಹಲಿಯ ವೈಭವೋಪೇತ ಕನ್ವೆನ್ಷನ್ ಸೆಂಟರ್. ಕ್ಯಾಮರಾಗಳ ಜಗಮಗಿಸುವ ಬೆಳಕು ಎಲ್ಲೆಡೆ ಬೀಳುತ್ತಿತ್ತು. ಭದ್ರತಾ ಅಧಿಕಾರಿಗಳು ತಮ್ಮ ವಾಕಿ-ಟಾಕಿಯಲ್ಲಿ ಮಾತನಾಡುತ್ತಿದ್ದರು. ಸೂಟು ಧರಿಸಿದ ಜನರ ಸಂಭ್ರಮವೋ ಸಂಭ್ರಮ. ಮಂತ್ರಿಗಳು, ಉದ್ಯಮಪತಿಗಳು, ಗಣ್ಯರು ಹಾಗೂ ವಿದೇಶಿ ಅತಿಥಿಗಳಿಂದ ಆ ಸಭಾಂಗಣ ತುಂಬಿಹೋಗಿತ್ತು. ಮೊದಲನೇ ಸಾಲಿನಲ್ಲಿ ದೇಶದ ಪ್ರತಿಷ್ಠಿತ ವ್ಯಕ್ತಿಗಳು ಕುಳಿತಿದ್ದರು. ಮೂರನೇ ಸಾಲಿನ ಒಂದು ಮೂಲೆಯಲ್ಲಿ ಸಾಧಾರಣ ನೂಲಿನ ಸೀರೆಯುಟ್ಟ ಸ್ವಲ್ಪ ವಯಸ್ಸಾದ ಮಹಿಳೆಯೊಬ್ಬರು ಕುಳಿತಿದ್ದರು. ಅವರು ಕ್ಯಾಮರಾಗಳ ಗಮನ ಸೆಳೆಯುವಷ್ಟು ಆಕರ್ಷಕವಾಗಿರಲಿಲ್ಲ. ಅವರೇ ಲಕ್ಷ್ಮಿ ಪಿಚಾಯಿ.
ಅವರು ಯಾರು ಎಂಬುದು ಗೊತ್ತಿದ್ದವರು ಕೆಲವರು ಮಾತ್ರ. ಸ್ಪಾಟ್ ಲೈಟ್ ಬೀಳುತ್ತಿದ್ದುದ್ದು ಆಕೆಯ ಮಗ, ವಿಶ್ವದ ದೈತ್ಯ ಸಾಫ್ಟ್ವೇರ್ ಸಂಸ್ಥೆ ಗೂಗಲ್‌ನ ಸಿಇಓ ಆದ, ಭಾರತದ ಹೆಮ್ಮೆಯ - ಸುಂದರ ಪಿಚಾಯಿ ಮೇಲೆ.
ಸುಂದರ ಪಿಚಾಯಿ, ಇವರೇ ಅನೇಕ ಕಠಿಣಾತಿಕಠಿಣ ಪರೀಕ್ಷೆಗಳನ್ನ ಎದುರಿಸಿ, ಗೆದ್ದು ಈ ಅತ್ಯುಚ್ಚ ಸ್ಥಾನವನ್ನು ಗಳಿಸಿದಾತ. ಅಂದು ಭಾರತ ಸರ್ಕಾರವು ಈ ಮಾತೃಭೂಮಿಯ ಮಗನನ್ನು ಸತ್ಕರಿಸುವ ಸಮಾರಂಭವನ್ನು ಏರ್ಪಡಿಸಿತ್ತು.
ಸುಂದರ ಪಿಚಾಯಿ, ತನ್ನ ತಾಯಿಯ ಕಡೆ ಗಮನ ಹರಿಸುತ್ತಿದ್ದರು. ಆದರೆ ಆಕೆಗೆ ಅದು ಇಷ್ಟ ಆಗುವಂತೆ ಕಾಣುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ವೇದಿಕೆ ಏರಿದಾಗ ಅಬ್ಬರದ ಜಯಘೋಷ ಕೇಳಿ ಬಂತು. ಅವರ ಮಾತುಗಳು ಅತ್ಯಂತ ಪ್ರಭಾವಶಾಲಿ ಆಗಿದ್ದವು. ಅವರು ತಮ್ಮ ಮಾತಿನಲ್ಲಿ, ಸಭೆಯಲ್ಲಿ ಉಪಸ್ಥಿತರಿದ್ದ ವಿಜ್ಞಾನಿಗಳು, ಕಲಾವಿದರು, ಉದ್ಯಮಪತಿಗಳು ಮುಂತಾದವರ ಹೆಸರನ್ನು ಉಲ್ಲೇಖಿಸಿದರು.
ಕಡೆಗೆ ಅವರ ಧ್ವನಿ ಸ್ವಲ್ಪ ಮೆತ್ತಗಾಯಿತು. ಅವರು ಹೇಳಿದರು: "ನಾವು ಈ ದಿನ ಕೇವಲ ಸುಂದರ ಪಿಚಾಯಿ ಅವರನ್ನು ಗೌರವಿಸುತ್ತಿಲ್ಲ. ತನ್ನ ಮಗನ ಅಧ್ಯಯನಕ್ಕಾಗಿ ತನ್ನ ಊಟವನ್ನು ತ್ಯಾಗ ಮಾಡಿದ ಮಹಾತಾಯಿ ಒಬ್ಬಳ ಜೀವನ ಪ್ರಯಾಣವನ್ನೂ ಗೌರವಿಸುತ್ತಿದ್ದೇವೆ ಸುಂದರ ಪಿಚಾಯಿಯ ಹೃದಯದ ಬಡಿತ ಈ ಮಾತನ್ನು ಕೇಳಿ ಹೆಚ್ಚಾಯಿತು. ಅವರು ಎಂದೂ ಈ ವಿಷಯವನ್ನ ಸಾರ್ವಜನಿಕವಾಗಿ ಹೇಳಿರಲಿಲ್ಲ. ತಕ್ಷಣ ನೆರದಿದ್ದ ಸಭಿಕರಲ್ಲಿ ಗುಸುಗುಸು ಮಾತು ಆರಂಭವಾಯಿತು. ಕ್ಯಾಮೆರಾಗಳು ಈ ಕ್ಷಣವನ್ನು ಸೆರೆಹಿಡಿಯಲು ತಿರುಗಿದವು. ಸಭಿಕರು ಮೌನವಾಗಿ ನೋಡತೊಡಗಿದರು.
ಸ್ವತಹ ಪ್ರಧಾನಿಯವರು ವೇದಿಕೆಯ ಮೆಟ್ಟಿಲನ್ನು ಇಳಿಯತೊಡಗಿದರು. ಅವರು ನೇರವಾಗಿ ಸುಂದರ ಪಿಚಾಯಿ ಕಡೆ ಹೋಗಲಿಲ್ಲ! ಅದಕ್ಕೆ ಬದಲಾಗಿ ಮೂರನೇ ಸಾಲಿನಲ್ಲಿ ತಣ್ಣಗೆ ಕುಳಿತಿದ್ದ ಅವರ ತಾಯಿಯ ಕಡೆ ಹೆಜ್ಜೆ ಹಾಕಿದರು. ಲಕ್ಷ್ಮಿ ಅವರಿಗೆ ಒಂದು ಕ್ಷಣ ದಿಗ್ಭ್ರಮೆ ಉಂಟಾಯಿತು. ನಮಸ್ಕರಿಸಲೆಂದು ಎತ್ತಿದ ಕೈಗಳು ನಡುಗುತ್ತಿದ್ದವು!
ಪ್ರಧಾನಿಯವರು ಮೆಲ್ಲನೆ ಹೇಳಿದರು "ಕೇವಲ ನಿಮ್ಮ ತ್ಯಾಗದಿಂದ ಅಷ್ಟೇ ಇದು ಸಾಧ್ಯವಾಯಿತು!"
ಇಷ್ಟು ಹೇಳಿದ ಪ್ರಧಾನಿಯವರು ತಲೆ ತಗ್ಗಿಸಿ ಲಕ್ಷ್ಮಿ ಅವರ ಪಾದಗಳಿಗೆ ನಮಸ್ಕರಿಸಿದರು! ಇಡೀ ಸಭಾಂಗಣದಲ್ಲಿ ನೆರೆದಿದ್ದ ಜನ ನಿಶ್ಶಬ್ಧವಾಗಿ ಮೇಲೆದ್ದು ಈ ಗೌರವಾರ್ಪಣೆಯಲ್ಲಿ ಭಾಗಿಯಾದರು. ಈ ದೃಶ್ಯವನ್ನು ಸೆರೆಹಿಡಿಯಲು ಅಲ್ಲಿದ್ದ ಕ್ಯಾಮರಾಗಳೆಲ್ಲವೂ ಚುರುಕಾದವು. ಸುಂದರ ಪಿಚಾಯಿ ಅವರ ಕಣ್ಣಾಲಿಗಳಲ್ಲಿ ನೀರು ತುಂಬಿತು. ಹೀಗಾಗಬಹುದು ಎಂದು ಅವರು ಕನಸಿನಲ್ಲೂ ಊಹಿಸಿರಲಿಲ್ಲ!
ಅವರು ಹಲವಾರು ವರ್ಷ ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ಕಳೆದಿದ್ದರು. ಬೇಕಾದಷ್ಟು ರಾಷ್ಟ್ರಗಳ ಅಧ್ಯಕ್ಷರು, ಪ್ರಧಾನಮಂತ್ರಿಗಳು, ರಾಜರುಗಳನ್ನ ಭೇಟಿ ಮಾಡಿದ್ದರು. ಆದರೆ ಅವರಾರೂ ಪ್ರಧಾನಿಯವರು ಗೌರವಿಸಿದಷ್ಟು ಗೌರವಿಸಿರಲಿಲ್ಲ! ಆ ತಾಯಿ ಏಳಲು ಪ್ರಯತ್ನಿಸಿದರು. ಪ್ರಧಾನಿಯವರೇ ಆಕೆಗೆ ಕೈ ನೀಡಿ, ಆಸರೆ ಕೊಟ್ಟು, ಕೈ ಹಿಡಿದು, ವೇದಿಕೆಗೆ ಕರೆದೊಯ್ದರು. ಆಕೆ ಒಲ್ಲೆ ಎಂದರು. ಆದರೂ ಕೈ ಬಿಡದೆ, ಆಕೆಯನ್ನು ಧೈರ್ಯವಾಗಿ ಪ್ರೇಕ್ಷಕರ ಎದುರು ನಿಲ್ಲಲು ಸಹಕರಿಸಿದರು. ಆಗ ಕೇಳಿ ಬಂದಿದ್ದು ಪ್ರೇಕ್ಷಕರ ಗಡಚಿಕ್ಕುವ ಚಪ್ಪಾಳೆ !
ಸುಂದರ ಪಿಚಾಯಿ ತನ್ನ ತಾಯಿಯ ಪಕ್ಕದಲ್ಲಿ ನಿಂತರು. ಅವರ ಕಣ್ಣುಗಳಲ್ಲಿ ಆನಂದಭಾಷ್ಪ ಸುರಿಯುತ್ತಿತ್ತು.. ಹಿಂದೆ ನಡೆದ ಘಟನೆಗಳೆಲ್ಲ ಪ್ರವಾಹದಂತೆ ಅವರ ಮನಸ್ಸಿನ ಪರದೆಯ ಮೇಲೆ ಒಮ್ಮೆ ಹಾದುಹೋದವು.
(ಮುಂದುವರೆಯುವುದು.....)
No comments:
Post a Comment