ಕಥೆ-782
ಭಯಕ್ಕೆ ಬೈ ಬೈ ಹೇಳಿ...!
ರಾಜನ ಆಸ್ಥಾನಕ್ಕೆ ಒಬ್ಬ ವಿದೇಶಿ ಬಂದು, ರಾಜನಿಗೆ ವಂದಿಸಿ ಮಹಾರಾಜರೆ, ನಿಮ್ಮ ಆಸ್ಥಾನಕ್ಕೆ ಒಂದು ಸವಾಲ್, ನೋಡಿ ನನ್ನೊಂದಿಗೆ ಬಂದಿರುವ ಈ ಯುವಕನಿಗೆ ಒಂದು ತಿಂಗಳು ಚೆನ್ನಾಗಿ ಅವನ ಇಷ್ಟದ ಊಟ. ತಿಂಡಿ, ಹಣ್ಣು ಹಂಪಲು ಎಲ್ಲಾ ಕೊಡಬೇಕು. ಆದರೆ ಅವನು ಯಾವುದೇ ಕೆಲಸ, ವ್ಯಾಯಾಮ ಮಾಡಬಾರದು. ತಿಂಗಳ ಕೊನೆಯಲ್ಲಿ ಅವನ ತೂಕವು ಈಗಿರುವ ತೂಕಕ್ಕಿಂತ ಹೆಚ್ಚಾಗಬಾರದು ಈ ಸವಾಲಿಗೆ ಒಪ್ಪಿಕೊಳ್ಳುತ್ತೀರಾ? ಅಥವಾ ಸೋಲು ಒಪ್ಪಿಕೊಳ್ಳುತ್ತೀರಾ ಎಂದು ಕೇಳಿದಾಗ, ರಾಜನು ಚಿಂತಿತನಾದನು. ಅಲ್ಲಾ ಚೆನ್ನಾಗಿ ತಿಂದು ಯಾವುದೇ ಕೆಲಸ ಮಾಡದಿದ್ದರೆ ಖಂಡಿತವಾಗಿ ದೇಹದ ತೂಕ ಹೆಚ್ಚಾಗೇ ಆಗುತ್ತದೆ. ಏನು ಮಾಡುವುದು ಎಂದು ಸಭೆಯಲ್ಲಿ ಕಣ್ಣು ಹಾಯಿಸಿದಾಗ,
ಮಂತ್ರಿಯು, ನಾವು ಈ ಸವಾಲಿಗೆ ಒಪ್ಪಿಕೊಳ್ಳೋಣ. ನೀವೇನೂ ಯೋಚಿಸಬೇಡಿ ಎಂದನು. ಒಂದು ತಿಂಗಳ ನಂತರ ಆ ವಿದೇಶಿಯು ಸಭೆಗೆ ಬಂದನು ಒಪ್ಪಂದದಂತೆ ಆ ಯುವಕನ ತೂಕವನ್ನು ನೋಡಿದರೆ, ಅವನ ತೂಕವು ಮುಂಚೆಗಿಂತ ಕಮ್ಮಿಯಾಗಿತ್ತು! ಆ ವಿದೇಶಿಗೆ ಅನುಮಾನ ಬಂದು ಏನು ನಿನಗೆ ಇವರು ಊಟ, ತಿಂಡಿ ಸರಿಯಾಗಿ ಕೊಟ್ಟರೋ ಇಲ್ಲೋ ಎಂದು ಕೇಳಿದಾಗ ಆ ಯುವಕ ನನಗೆ ಮೃಷ್ಟಾನ ಭೋಜನವನ್ನು ಹೊತ್ತಿಗೆ ಸರಿಯಾಗಿಯೇ ಕೊಡುತ್ತಿದ್ದರು ಎಂದನು. ಆಗ ಆ ವಿದೇಶಿಯು ತನ್ನ ಸೋಲನ್ನು ಒಪ್ಪಿಕೊಂಡು, ಕಪ್ಪವನ್ನು ಕಟ್ಟಿ ನಿರಾಸೆಯಿಂದ ಹೊರಟು ಹೋದನು.
ನಂತರ ರಾಜನು ಆಶ್ಚರ್ಯದಿಂದ ಆ ಮಂತ್ರಿಗೆ ಅಲ್ಲಾ, ನೀನು ಏನು ಚಮತ್ಕಾರ ಮಾಡಿದೆ? ಎಂದು ಕೇಳಿದಾಗ
ಏನಿಲ್ಲಾ, ಆ ಯುವಕನ ಕೋಣೆಯ ಪಕ್ಕ ಒಂದು ಸಿಂಹದ ಬೋನನ್ನು ಇಟ್ಟು, ಆ ಯುವಕನ ಹತ್ತಿರ ನೋಡಪ್ಪ ಹುಷಾರಾಗಿರು ಆಗಾಗ ಇಲ್ಲೊಂದು ಸಿಂಹ ಬರುತ್ತೆ ಇದನ್ನು ಹಿಡಿಲಿಕ್ಕೆ ಬೋನ್ ಹಾಕಿದ್ದೇವೆ ಅಂತಷ್ಟೇ ಹೇಳಿದೆ. ಅವನಿಗೆ ಜೀವ ಭಯದಿಂದ ತಿಂದ ಅನ್ನ ಮೈಯಿಗೆ ಒಗ್ಗಿಕೊಳ್ಳದೆ. ಮಾನಸಿಕವಾಗಿ ಕುಗ್ಗಿ ತೂಕ ಕಮ್ಮಿಯಾಗುವಂತೆ ಮಾಡಿತು ಅಷ್ಟೇ. ಎಂದಾಗ, ರಾಜನು ಭಲೇ, ಮೆಚ್ಚಿದೆ ನಿನ್ನ ಚಾಣಾಕ್ಷತೆಯನ್ನು ಎಂದ...
ಅದಕ್ಕೆ ಮಕ್ಕಳೇ, ಯಾವಾಗ ನಮ್ಮ ಮನಸ್ಸಿನಲ್ಲಿ ಭಯ ಹೊಕ್ಕುವುದೋ, ಆಗ ಯಾವ ಕಾರ್ಯವು ನಾವು ಅಂದುಕೊಂಡಂತೆ ಆಗುವುದಿಲ್ಲ.
ಮೊದಲು ಮನಸ್ಸಿನಲ್ಲಿ ಏಳುವ ಭಯ ಕಿತ್ತು ಹಾಕಿ. ನಂತರ ಶ್ರದ್ಧೆಯಿಂದ ಕಾರ್ಯೋನ್ಮುಖರಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ.
ವಿ. ವಿಜಯೇಂದ್ರ ರಾವ್
No comments:
Post a Comment