ಕಥೆ-784
ತಾಯಿಗೆ ಪ್ರಣಾಮಗಳು🙏💐 (ಭಾಗ-2)
https://basapurs.blogspot.com
ಸುಂದರ ಪಿಚಾಯಿ ಅವರು ಬೆಳೆದದ್ದು ಚೆನ್ನೈನ ಎರಡು ಕೋಣೆಗಳ ಒಂದು ಸಾಧಾರಣ ಮನೆಯಲ್ಲಿ. ಅದರ ಗೋಡೆಗಳು ಮಂಕಾಗಿ ಬಣ್ಣ ಕಳೆದುಕೊಂಡಿದ್ದವು. ಅವರ ತಂದೆ ಎಲೆಕ್ಟ್ರಿಸಿಯನ್ ಆಗಿದ್ದರು. ಅವರು ಮನೆಗೆ ಸರ್ಕ್ಯೂಟ್ ಡಯಾಗ್ರಮ್ ಗಳು ಮತ್ತು ಸೋಲ್ಡರಿಂಗ್ ವೈರ್‌ಗಳನ್ನು ಅಷ್ಟೇ ತರುತ್ತಿದ್ದರು. ಮಕ್ಕಳಿಗೆ ಆಟಿಕೆಗಳನ್ನು ತರುವಷ್ಟು ಶ್ರೀಮಂತರಾಗಿರಲಿಲ್ಲ ಅವರು. ಕೆಟ್ಟು ಹೋದ, ಯಾರೋ ನೀಡಿದ ರೇಡಿಯೋಗಳನ್ನು ಅವರು ಮನೆಗೆ ತರುತ್ತಿದ್ದರು. ಸುಂದರ್ ಗಂಟೆಗಳ ಕಾಲ ತನ್ನ ಅಪ್ಪನನ್ನು ಪ್ರಶ್ನಿಸುತ್ತಿದ್ದರು.
ತಾಯಿ ಅಕ್ಕಿ ಕಾಳುಗಳನ್ನು ಉಪಯೋಗಿಸಿ ಮಗನಿಗೆ ಗಣಿತ ಕಲಿಸುತ್ತಿದ್ದರು. ಸುಂದರ್ ಕಾಲೇಜಿಗೆ ಸೇರಿದಾಗ, ಫೀಸು ನೀಡಲು ಆ ತಾಯಿ ತನ್ನ ಮದುವೆಯಲ್ಲಿ ನೀಡಲಾಗಿದ್ದ ಬಂಗಾರದ ಬಳೆಗಳನ್ನು ಮಾರಿದ್ದರು! ಇದನ್ನು ಅವರು ಯಾರಿಗೂ ಹೇಳಿರಲಿಲ್ಲ. "ಹೇಗೋ ಸರಿದೂಗಿಸಿದರೆ ಆಯಿತು" ಎಂದಷ್ಟೇ ಹೇಳುತ್ತಿದ್ದರು.
ಶಾಲೆಯಲ್ಲಿ ಸುಂದರ ತಂಟೆ ಮಾಡದ ಹುಡುಗ. ಆದರೆ ಅವನಿಗೆ ವಿಷಯವನ್ನು ತಿಳಿದುಕೊಳ್ಳಲು ಅಪಾರ ಕುತೂಹಲ. ಅವನ ಶಿಕ್ಷಕರು ಅವನ ಬಗ್ಗೆ ಹೇಳುತ್ತಿದ್ದರು "ಇವನ ನೆನಪಿನ ಶಕ್ತಿ ಅದ್ಭುತ! ಇವನು ಒಮ್ಮೆ ಡಯಲ್ ಮಾಡಿದ ಟೆಲಿಫೋನ್ ನಂಬರ್‌ಗಳನ್ನು ಮತ್ತೆಂದೂ ಮರೆಯುತ್ತಿರಲಿಲ್ಲ". ಅವನ ಸಹಪಾಠಿಗಳು ಅವನ ಹಳೆಯ ಸವೆದು ಹೋದ ಶೂಗಳ ಬಗ್ಗೆ ಅಥವಾ ಅವನು ತರುತ್ತಿದ್ದ ಊಟದ ಡಬ್ಬಿಯ ಬಗ್ಗೆ ಅವನನ್ನು ಕಿಚಾಯಿಸುತ್ತಿದ್ದರು. ಅದಕ್ಕೆಲ್ಲ ಸುಂದರ್ ನಸುನಕ್ಕು ಸುಮ್ಮನೆ ದೂರ ಹೋಗುತ್ತಿದ್ದ. ಬಿರುಬೇಸಿಗೆಯಲ್ಲಿ, ರಾತ್ರಿ ವಿದ್ಯುತ್ ಹೊರಟು ಹೋಗಿ ಫ್ಯಾನ್ ತಿರುಗದಿದ್ದಾಗ, ಬೆವರಿನಿಂದ ನೆನೆದ ನೆಲದಲ್ಲಿ ಸುಂದರ ಮತ್ತು ಅವರ ಅಣ್ಣ ಮಲಗುತ್ತಿದ್ದರು. ಎಷ್ಟೋ ರಾತ್ರಿಗಳು ಅವರ ತಾಯಿ ಒಂದು ರಟ್ಟಿನ ತುಂಡಿನಿಂದ ಮಕ್ಕಳಿಗೆ ಗಾಳಿ ಬೀಸುತ್ತಿದ್ದರು. ರಾತ್ರಿ ಮಲಗದಿದ್ದರೂ ಬೆಳಿಗ್ಗೆ ಬೇಗ ಎದ್ದು ಮಕ್ಕಳಿಗೆ ಆಹಾರ ಸಿದ್ಧಪಡಿಸುತ್ತಿದ್ದರು.
ಸುಂದರ್ ಅಮೇರಿಕಾದಲ್ಲಿ ಉನ್ನತ ಅಧ್ಯಯನ ಮಾಡಲು ವಿದ್ಯಾರ್ಥಿವೇತನವೇನೋ ಸಿಕ್ಕಿತು. ಆದರೆ ವಿಮಾನಯಾನದ ಖರ್ಚನ್ನು ನೆನೆಸಿಕೊಂಡು ಸುಂದರ್ ಅಮೆರಿಕಾಗೆ ಹೋಗಲು ಹಿಂಜರಿದ. "ನೀನು ಅಮೆರಿಕಾಗೆ ಹೋಗು. ನಾನು ಬ್ಯಾಂಕಿನವರೊಡನೆ ಮಾತನಾಡುತ್ತೇನೆ" ಎಂದು ಹೇಳಿದರು ಅಮ್ಮ. ಆದರೆ ಅವರು ಮಾಡಿದ್ದೇನೆಂದರೆ ತಮ್ಮಲ್ಲಿದ್ದ ಚಿನ್ನದ ಕಡೆಯ ಒಡವೆಯ ಮಾರಾಟ!
ಈಗ ಸುಂದರ ಪಿಚಾಯಿ, ದೆಹಲಿಯ ಪ್ರತಿಷ್ಠಿತ ಸಭಾಂಗಣದಲ್ಲಿ ಪ್ರಧಾನಮಂತ್ರಿ ಹಾಗೂ ತನ್ನ ತಾಯಿಯೊಡನೆ ನಿಂತಿದ್ದರು! ಆ ಕ್ಷಣ, ಸುಂದರ ಪಿಚಾಯಿಗೆ ಸುತ್ತಲಿನ ಪ್ರಪಂಚವೇ ಮಸುಕಾಯಿತು. ಕೇವಲ ತಾಯಿಯ ಉಸಿರಾಟ ಮತ್ತು ಆಪ್ತತೆಯ ಕೈಯ ಹಿಡಿತ ಇವಿಷ್ಟು ಮಾತ್ರ ಅನುಭವ ಆಯಿತು. ಚಿಕ್ಕ ಹುಡುಗ ಇದ್ದಾಗ ಮಗನ ಕೈಹಿಡಿಹಿಡಿಯುವಂತೆ ಇತ್ತು ಆ ತಾಯಿಯ ಹಿಡಿತ. ಆಕೆ ಮೆಲ್ಲನೆ ಮಗನ ಕಿವಿಯಲ್ಲಿ ಉಸುರಿದರು "ನೀನು ಹಿಂದಿನದನ್ನೆಲ್ಲ ನೆನಪಿಟ್ಟುಕೊಂಡಿದ್ದೀಯಲ್ಲ ಅಷ್ಟೇ ಸಾಕು. ಇವೆಲ್ಲಾ ಪ್ರದರ್ಶನ ಯಾಕೆ?"
ಆಗ ಸುಂದರ ಪಿಚಾಯಿ ಹೇಳಿದರು "ಅಮ್ಮಾ, ನೀನು ಯಾವತ್ತೂ ಏನನ್ನೂ ಕೇಳಲಿಲ್ಲ. ಆದ್ದರಿಂದಲೇ ನಾನು ಯಾವುದನ್ನೂ ಮರೆತಿಲ್ಲ!"
(ಜಯಂತಿ ಜೋಶಿ ಅವರು ಮರಾಠಿಯಲ್ಲಿ ಬರೆದ ನಿರೂಪಣೆಯ ಕನ್ನಡ ಭಾವಾನುವಾದ)
No comments:
Post a Comment