ಕಥೆ-785
ಓದು ಕೃತಿಯಲ್ಲಿ ಬಂದಾಗ
ಒಂದು ಊರಿನಲ್ಲಿ ಒಬ್ಬ ವಿದ್ವಾಂಸನಿದ್ದನು. ಆತ ಸಾಕಷ್ಟು ಓದಿಕೊಂಡಿದ್ದ. ಓದಿಕೊಂಡ ತಿಳಿವಳಿಕೆಯ ಬಲದಿಂದ ಕಂಡಕಂಡವರನ್ನು ಕೆಣಕುತ್ತಿದ್ದನು. ಅವರನ್ನು ಮಾತಿಗೆಳೆಯುತ್ತಿದ್ದನು. ಅವರನ್ನು ತನ್ನ ತರ್ಕದ ಜಾಲದಲ್ಲಿ ಸಿಲುಕಿಸುತ್ತಿದ್ದನು. ಅವರ ಮಾತುಗಳಲ್ಲಿನ ತಪ್ಪುಗಳನ್ನು ಎತ್ತಿ ಹೇಳಿ ಅವಮಾನಗೊಳಿಸುತ್ತಿದ್ದನು. ಸಣ್ಣ ಪುಟ್ಟ ವಿಷಯಕ್ಕೂ ಜಗಳ ಕಾಯುತ್ತಿದ್ದನು. ವಾದ ಮಾಡಿ ಅವರನ್ನು ಸೋಲಿಸುತ್ತಿದ್ದನು. ಮತ್ತು ತಾನೊಬ್ಬ ಮಹಾ ಪಂಡಿತನೆಂಬ ಗತ್ತಿನಲ್ಲಿ ಮೆರೆಯುತ್ತಿದ್ದನು.
ಒಮ್ಮೆ ಅವನು ರಸ್ತೆಯಲ್ಲಿ ಹೋಗುತ್ತಿದ್ದ ರೈತನೊಬ್ಬನನ್ನು ಕರೆದನು. ರೈತನು ಹತ್ತಿರ ಬರುತ್ತಲೇ ಅವನ ಬಳಿ ಕೇಳಿದನು. 'ನೀನು ವೇದಗಳನ್ನು ಓದಿದ್ದೀಯಾ?'
'ಇಲ್ಲ ಸ್ವಾಮಿ ನಾನು ಓದಿಲ್ಲ...' ರೈತನು ಉತ್ತರ ಕೊಡುತ್ತಾನೆ.
'ಪುರಾಣ ಶಾಸ್ತ್ರಗಳನ್ನು ಓದಿದ್ದಿಯಾ?'
ಇಲ್ಲ ಸ್ವಾಮಿ ನಾನು ಓದಿಲ್ಲ...'
ಮಹಾಕಾವ್ಯ ಮೀಮಾಂಸೆ, ತರ್ಕ, ವ್ಯಾಕರಣ ಮುಂತಾದುವುಗಳನ್ನಾದರೂ ಓದಿದ್ದಿಯಾ? ಪಂಡಿತ ಅಹಂಕಾರದಿಂದ ಕೇಳುತ್ತಾನೆ.
ಇಲ್ಲ ಮಹಾಸ್ವಾಮಿ ನನಗೆ ಅವುಗಳನ್ನು ಓದಲು ಅವಕಾಶವೇ ಆಗಿಲ್ಲ ಎಂದು ರೈತ ಕುಗ್ಗಿ ಹೋಗುತ್ತಾನೆ.
ನಿನ್ನ ಇಡೀ ಜೀವನ ಬರಿಯ ಹೊಲ ಉಳುವುದರಲ್ಲಿಯೇ ಹೋಯಿತು.
ಅದರಿಂದ ವ್ಯಕ್ತಿಗೆ ಏನು ತಿಳಿವಳಿಕೆ ಬರುತ್ತದೆ? ನಿನ್ನ ಅಜ್ಞಾನಕ್ಕೆ ಏನನ್ನಬೇಕೋ ತಿಳಿಯದು. ನಿನ್ನ ಇಡೀ ಜೀವನ ವ್ಯರ್ಥವಾಗಿ ಹೋಯಿತು.... ನನಗೆ ನೋಡು ಜನರು ಎಷ್ಟೊಂದು ಗೌರವ ಕೊಡುತ್ತಾರೆ ಎಂದು ರೈತನನ್ನು ತುಚ್ಚವಾಗಿ ನಿಂದಿಸುತ್ತಾನೆ.
ಆಗ ರೈತ ಹೇಳುತ್ತಾನೆ- ನಿಜ ಸ್ವಾಮಿ ನಿಮ್ಮಿಂದ ಜನ ತಿಳಿವಳಿಕೆಯನ್ನು ಪಡೆಯುತ್ತಾರೆ. ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ನೀವು ಕೂಡಾ ಹಸಿವೆಯಾದಾಗ ಉಣ್ಣಬೇಕು. ಉಣ್ಣುವುದರ ಮೂಲಕ ಮೈಯಲ್ಲಿ ಶಕ್ತಿ ಬರುತ್ತದೆ. ವಿದ್ವಾಂಸರಿರಲಿ, ಅಧಿಕಾರಿಯಿರಲಿ, ವ್ಯಾಪಾರಿಯಿರಲಿ, ವೈದ್ಯರಿರಲಿ ಯಾರೇ ಇದ್ದರೂ ರೈತ ಬೆಳೆದ ಆಹಾರವನ್ನೇ ತಿನ್ನಬೇಕು. ರೈತನಿಲ್ಲದೇ ಈ ಜಗತ್ತು ನಡೆಯಲಾರದು ಎಂದು ಹೆಮ್ಮೆಯಿಂದ ಹೇಳಿದ.
ಹೆಚ್ಚು ಓದಿದವರು ಅಂತ ಹೇಳಿ ಸೊಕ್ಕಿನಿಂದ ಅಹಂಕಾರದಿಂದ ಮೆರೆಯುವುದಲ್ಲ.. ನಾವು ಓದಿದವರು ಅಂತ ಅಹಂಕಾರಕ್ಕೆ ಹೋಗಿ ಸಮಾಜಕ್ಕೆ ದಂಡಪಿಂಡ ಆದವರು ಇದ್ದಾರೆ, ಓದು ಕೃತಿಯಲ್ಲಿ ಬಂದಾಗ ಮಾತ್ರ ಸಾರ್ಥಕತೆ ಸಾಧ್ಯ..
ಕೃಪೆ:ನೆಟ್
No comments:
Post a Comment