ಕಥೆ-788
ಗೆಳೆತನವೆಂಬ ಆಪ್ತ ನಿಧಿ
ಒಂದು ಮಗು ಹುಟ್ಟಿ ಬೆಳೆದು ಶಾಲೆಗೆ ಹೋಗಲು ಆರಂಭಿಸಿದಾಗ ಸಿಗುವ ಪಾಠಕ್ಕಿಂತ ಅಮೂಲ್ಯ ಬಂಧನವೇ ಗೆಳೆತನ. ಅದು ನಿಜವೇ ಆಗಿದ್ದರೆ ಯಾರಿಂದಲೂ ಅದನ್ನು ಮುರಿಯಲು ಸಾಧ್ಯವಿಲ್ಲ. ಹಾಗೆಂದು ಗೆಳೆತನ ಯಾವಾಗ ಹೀಗೆ ಆರಂಭವಾಗುತ್ತದೆ ಎಂದು ಯಾರಿಗೂ ತಿಳಿಯದು. ಆದರೆ ಅದಕ್ಕಿರುವ ಶಕ್ತಿ ಅಪೂರ್ವ. ಅನೇಕ ಬಾರಿ ನಾವು ಸಂಕಷ್ಟದಲ್ಲಿ ಸಿಲುಕಿಕೊಂಡಾಗ ತಂದೆ-ತಾಯಿಗಿಂತ ಮೊದಲು ಗೆಳೆಯನ ಬಳಿ ಮುಜುಗರವಿಲ್ಲದೆ ಹೇಳಿಕೊಳ್ಳುತ್ತೇವೆ. ಹಿರಿಯರೂ ಅಷ್ಟೇ, ತಮ್ಮ ಮಕ್ಕಳ ಜೊತೆ ಒಳ್ಳೆಯ ಗೆಳೆಯರಿದ್ದಾರೆ ಎಂದಾದರೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ.
ನಿಜವಾದ ಗೆಳೆಯರೆಂದರೆ ಹಣ, ಸಂಪತ್ತು, ಆಸ್ತಿಯಿದ್ದಾಗ ಅಥವಾ ನಾವು ಸಂತೋಷದಲ್ಲಿದ್ದಾಗ ಮಾತ್ರ ಬರುವವರಲ್ಲ. ಬದಲಿಗೆ ದುಃಖದಲ್ಲಿರುವಾಗ, ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ತನ್ನ ಕೈಲಾದಷ್ಟು ನೆರವಾಗುವವನೇ ನಿಜವಾದ ಗೆಳೆಯ. ಇಂತಹ ಒಬ್ಬ ಗೆಳೆಯ ನಮಗೆ ಸಿಕ್ಕಿದರೆ ನಾವು ಪುಣ್ಯವಂತರು ಎಂದೇ ಹೇಳಬಹುದು. ಗಮನಿಸಿ ನೋಡಿ, ನೀವು ಸಂತೋಷದಿಂದ ಇದ್ದೀರಿ ಎಂದಾದರೆ ಹೆಚ್ಚಿನ ಬಾರಿ ಅದಕ್ಕೆ ನಿಮ್ಮ ಗೆಳೆಯರೇ ಕಾರಣರಾಗಿರುತ್ತಾರೆ.
ಎಷ್ಟೋ ಮಂದಿ ಸೋತು, ಜೀವನವೇ ಮುಗಿಯಿತು ಎಂದು ಕೂತವರಿಗೆ ಬೈದು ಬುದ್ಧಿ ಹೇಳಿದ ಸ್ನೇಹಿತರನ್ನು ನೋಡಿದ್ದೇನೆ. ಇನ್ನು ತನಗೇನಾದರೂ ಆಗಲಿ ಚಿಂತೆಯಿಲ್ಲ, ನನ್ನ ಸ್ನೇಹಿತನಿಗೆ ಏನೂ ತೊಂದರೆಯಾಗಬಾರದು ಎಂದು ತೆರೆಮರೆಯಲ್ಲಿ ಕಷ್ಟಪಟ್ಟವರನ್ನು ಕಂಡಿದ್ದೇನೆ. ಹೀಗಾಗಿಯೇ ಈ ಗೆಳೆತನ ಎಂಬುದು ಯಾವುದೇ ಒಂದು ಸ್ವಾರ್ಥವಿಲ್ಲದ ಸಂಬಂಧ.
ಸ್ನೇಹ ಎನ್ನುವುದು ಬಡವ-ಬಲ್ಲಿದ, ಜಾತಿ-ಧರ್ಮ, ವಯಸ್ಸಿನ ಹಂಗಿಲ್ಲದೆ ಎಲ್ಲೆಡೆ ಬೆಳೆಯುತ್ತದೆ. ಪ್ರತಿ ವ್ಯಕ್ತಿಯೂ ತನಗೆ ಧೈರ್ಯ ತುಂಬುವ, ಕಷ್ಟ-ಸುಖಗಳನ್ನು ಹಂಚಿಕೊಳ್ಳಬಲ್ಲ, ಕೆಟ್ಟ ಪರಿಸ್ಥಿತಿಯಲ್ಲಿ ನೈತಿಕ ಸೈರ್ಯ ತುಂಬುವ ಸ್ನೇಹಿತರ ಬಳಗವನ್ನು ಸೃಷ್ಟಿಸಿಕೊಂಡಿರುತ್ತಾನೆ.
ಗೆಳೆತನ ನಿಜವಾಗಿದ್ದರೆ ಎಂದಿಗೂ ಅದನ್ನು ಕಳೆದುಕೊಳ್ಳಬೇಡಿ
-ಪ್ರಜ್ವಲ್ ಮಂಗಳೂರು
No comments:
Post a Comment