ಕಥೆ-832
ತಾಳ್ಮೆಯ ಪರೀಕ್ಷೆ
ಯುರೋಪ ದೇಶದ ಅಥೆನ್ಸ್ ಪಟ್ಟಣದಲ್ಲಿ ವಾಸವಾಗಿದ್ದ ಸುಕರಾತನು(ಸಾಕ್ರಟಿಸ್) ಮಹಾಜ್ಞಾನಿ ಆದರೆ ಬಡವ, ಕುರೂಪಿ; ಅವನ ಹೃದಯ ಮಾತ್ರ ಅತಿ ಸುಂದರ. ಅವನ ಶಿಷ್ಯರೆಲ್ಲರೂ ಆಗರ್ಭ ಸಿರಿವಂತರು. ಸುಕರಾತನು ಮಾತ್ರ ಶಿಷ್ಯರಿಂದ ಏನನ್ನೂ ಬಯಸಿದವನಲ್ಲ. ಅವನ
ಉಪದೇಶ ಕೇಳಲು ತರುಣರು ಮೊದಲು ಮಾಡಿ ಎಲ್ಲರೂ ತುದಿಗಾಲಿನ ಮೇಲೆ ನಿಲ್ಲುತ್ತಿದ್ದರು. ಒಂದು ದಿನ ಸುಕರಾತನು
(ಸಾಕ್ರೆಟಿಸ್) ಶಿಷ್ಯರಿಗೆ ಉಪದೇಶ ಮಾಡುತ್ತ ಮನೆಯಲ್ಲಿ ಕುಳಿತಿದ್ದ.ಅವನ ಪತ್ನಿ ಝಾಂತಿಪಿ ಸ್ವಲ್ಪ ಮುಂಗೋಪಿ, ನಾಲ್ಕಾರು ಸಲ
ಏನೋ ಹೇಳಬೇಕೆಂದು ಪತಿಯ ಹತ್ತಿರ ಬಂದಳು. ಆದರೆ ಸುಕರಾತನು ಅವಳತ್ತ ಕಣ್ಣೆತ್ತಿಯೂ ನೋಡದೇ ಉಪದೇಶ ಮುಂದುವರಿಸಿದ. ಕೊನೆಗೆ ಝಾಂತಿಪಿಯು ಸಿಟ್ಟು ತಾಳದೆ ಮುಸುರೆಯ ನೀರನ್ನು ತಂದು ಸುಕರಾತನ ತಲೆಯ ಮೇಲೆ ಸುರಿದು ಹೋದಳು. ಆದರೂ ಸುಕರಾತನು ಅಷ್ಟೇ ಶಾಂತವಾಗಿಯೇ ಕುಳಿತಿದ್ದ. ಶಿಷ್ಯರಿಗೆಲ್ಲ ಸ್ವಲ್ಪ
ಆಶ್ಚರ್ಯವಾಗಿತ್ತು. ಗಾಬರಿಯೂ ಆಗಿತ್ತು, ಆದರೆ ಸಾವರಿಸಿಕೊಂಡು ಶಿಷ್ಯರು ಸುಕರಾತನಿಗೆ ಕೇಳಿದರು. “ನಿಮ್ಮ ಪತ್ನಿಯು ಹೀಗೆ ಮಾಡಿದರೂ ತಾವು ಶಾಂತವಾಗಿಯೇ ಕುಳಿತಿದ್ದೀರಲ್ಲ ಹೇಗೆ?” ಸುಕರಾತ ಹೇಳಿದರು. ಅವಳು ಹೀಗೆ ಮಾಡಿ ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಾಳೆ
ಚಿಂತನೆಗೆ ತೊಡಗಿಸುತ್ತಾಳೆ. ಈ ಸಿಟ್ಟಿಗೆ ಕಾರಣವೇನು ಅದನ್ನು ಕಳೆದುಕೊಳ್ಳುವುದು ಹೇಗೆ ಮತ್ತು ಸಿಟ್ಟು ಬರದಂತೆ ಮಾಡುವುದು
ಹೇಗೆ? ಸಿಟ್ಟು ನಿಜವಾಗಿ ಇರಬೇಕೆ, ಇರಬಾರದೆ, ಇದ್ದರೆ ಎಷ್ಟಿರಬೇಕು, ಹೇಗಿರಬೇಕು ಎಂದೆಲ್ಲ ಆಲೋಚನೆ ಮಾಡುತ್ತೇನೆ. ಇಂಥ ಹಲವಾರು ಪ್ರಸಂಗಗಳ ಮೂಲಕ ನನ್ನ ಪತ್ನಿಯೇ ನನ್ನನ್ನು ತತ್ತ್ವಜ್ಞಾನಿಯನ್ನಾಗಿ ಮಾಡಿದ್ದಾಳೆ. ಸುಕರಾತನ ಈ ಅನುಭವದ ಮೃದು ಮಧುರ
ನುಡಿಗಳನ್ನು ಕೇಳಿದ ಅವನ ಶಿಷ್ಯರು ನಿಜವಾಗಿಯೂ ನಮ್ಮ ಗುರು ಸುಕರಾತನು ಮಹಾಜ್ಞಾನಿಯಾಗಿದ್ದಾನೆಂದು ವಂದಿಸಿ ಮುನ್ನಡೆದರು.
ಶ್ರೀ *ಸಿದ್ಧೇಶ್ವರ ಸ್ವಾಮೀಜಿ*
No comments:
Post a Comment