ಕಥೆ-831
ಹಾರುವ ಕುದುರೆ ಮತ್ತು ಬದುಕುವ ಕಲೆ.
ಪತ್ರಿಕೆ, ರೇಡಿಯೋ, ದೂರದರ್ಶನಗಳಲ್ಲಿ ಆಗಾಗ್ಗೆ ಕೆಲವು ವಿಚಿತ್ರ ಸಮಾಚಾರಗಳನ್ನು ಕೇಳುತ್ತೇವೆ, ನೋಡುತ್ತೇವೆ. ಸಣ್ಣಪುಟ್ಟ ಕಾರಣಗಳಿಗೋಸ್ಕರ ಪ್ರಾಣ ಕಳೆದುಕೊಳ್ಳುವ, ಆತ್ಮಹತ್ಯೆ ಮಾಡಿಕೊಳ್ಳುವ ಇಲ್ಲವೇ ಅಕಾರಣವಾಗಿ ಇತರರ ಹತ್ಯೆ ಮಾಡಿ, ತಾನು ಗಲ್ಲು ಶಿಕ್ಷೆ ಪಡೆಯುವ ವಿಚಿತ್ರ ಸುದ್ದಿಗಳು. ಇವುಗಳ ಬಗ್ಗೆ ಕೇಳಿದಾಗ, ನೋಡಿದಾಗ ''ಇವರೆಂಥ ವಿಚಿತ್ರ ಜನರು? ಇವರು ಯಾವಾಗ ಬದುಕುವ ಕಲೆಯನ್ನು ಕಲೀತಾರೆ?,'' ಅನ್ನಿಸುತ್ತದೆ. ಬದುಕುವ ಕಲೆ ಕಲಿಸುವ ಒಂದು ಮನೋಜ್ಞ ಪ್ರಸಂಗ ಇಲ್ಲಿದೆ-
ಅನೇಕ ವರ್ಷಗಳ ಹಿಂದೆ ಒಬ್ಬ ವಿಚಿತ್ರ ರಾಜನಿದ್ದ. ಆತ ಸಣ್ಣಪುಟ್ಟ ತಪ್ಪು ಮಾಡಿದವರಿಗೂ ಗಲ್ಲು ಶಿಕ್ಷೆ ವಿಧಿಸುತ್ತಿದ್ದ. ಇದರಿಂದ ಅಲ್ಲಿನ ಪ್ರಜೆಗಳೆಲ್ಲ ಗಾಬರಿಗೊಂಡಿದ್ದರು. ಆದರೆ ಆ ವಿಚಿತ್ರ ರಾಜನಲ್ಲಿ ಇನ್ನೊಂದು ವಿಚಿತ್ರವೆಂದರೆ ಗಲ್ಲು ಶಿಕ್ಷೆಗೆ ಒಳಗಾದ ವ್ಯಕ್ತಿಯ ಕೊನೆಯ ಬಯಕೆಯನ್ನು ಪೂರೈಸುತ್ತಿದ್ದ. ಒಮ್ಮೆ ಅಲ್ಲಿಯ ಮಂತ್ರಿ ಒಂದು ತಪ್ಪು ಮಾಡಿ ಸಿಕ್ಕಿ ಬಿದ್ದ. ರಾಜನು ತಕ್ಷ ಣವೇ ಮಂತ್ರಿಗೆ ಗಲ್ಲು ಶಿಕ್ಷೆ ವಿಧಿಸಿದ. ಆತನ ಮನೆಯಲ್ಲಿ ಶೋಕದ ಛಾಯೆ ವ್ಯಾಪಿಸಿತು.
ಗಲ್ಲಿಗೇರಿಸುವ ದಿನ ಹತ್ತಿರ ಬಂದಾಗ ಮಂತ್ರಿಯೊಡನೆ ''ನಿನ್ನ ಅಂತಿಮ ಬಯಕೆ ಏನು?,'' ಎಂದು ಕೇಳಿದಾಗ, ''ಮಹಾರಾಜರೇ, ಒಂದು ವರ್ಷದ ಮಟ್ಟಿಗೆ ನಿಮ್ಮ ಕುದುರೆ ನನಗೆ ಕೊಟ್ಟು ಬಿಡಿ,''ಎಂದನು. ರಾಜ ನುಡಿದ 'ಇಂದೇ ಸಾಯಲಿರುವ ನೀನು, ಒಂದು ವರ್ಷಕ್ಕೆ ಕುದುರೆ ಕೇಳುತ್ತೀಯಲ್ಲ?,'' ಆಗ ಮಂತ್ರಿ ಹೇಳಿದ ''ನನಗೊಂದು ರಹಸ್ಯ ಕಲೆ ತಿಳಿದಿದೆ. ಅದರಿಂದ ಈ ಕುದುರೆಯನ್ನು ಹಾರುವ ಕುದುರೆಯನ್ನಾಗಿ ಮಾಡಬಲ್ಲೆ. ನಾನು ಸತ್ತರೆ ಆ ಕಲೆಗೂ ಅಂತ್ಯ,''
ರಾಜನು ಹೇಳಿದ ''ಒಂದು ವರ್ಷದ ಮಟ್ಟಿಗೆ ನಿನಗೆ ರಿಯಾಯಿತಿ ಕೊಡೋಣ. ಆದರೆ ಕುದುರೆ ಹಾರದಿದ್ದರೆ ನಿನಗೆ ತಕ್ಷ ಣವೇ ಗಲ್ಲು ಶಿಕ್ಷೆ ನೀಡಲಾಗುವುದು,''. ರಾಜನ ಮಾತಿಗೆ ಒಪ್ಪಿ ಮಂತ್ರಿ ತನ್ನ ಮನೆಗೆ ಮರಳಿದ. ಆತನ ಮನೆಯವರೆಲ್ಲರೂ ಸಂತಸಪಟ್ಟರು. ಮಂತ್ರಿಯೊಡನೆ ಆತನ ಪತ್ನಿ ಕೇಳಿದಾಗ, ನಡೆದುದೆಲ್ಲವನ್ನೂ ಹೇಳಿದ. ಆಗ ಆ ಪತ್ನಿ ''ಒಂದು ವರ್ಷದೊಳಗೆ ಆ ಶಪಥ ಹೇಗೆ ಪೂರೈಸುತ್ತೀರಾ?,'' ಎಂದು ಕೇಳಿದಾಗ ಮಂತ್ರಿ ಉತ್ತರಿಸಿದ. ''ಒಂದು ವರ್ಷದಲ್ಲಿ ಏನಾಗುತ್ತದೋ ಯಾರು ಬಲ್ಲರು? ಈ ರಾಜನೇ ಯುದ್ಧದಲ್ಲಿ ಸಾಯಬಹುದು. ಈ ಕುದುರೆಯೇ ಸತ್ತು ಹೋದೀತು. ಶತ್ರು-ರಾಜರು ನಮ್ಮ ರಾಜನನ್ನು ಕೊಲ್ಲಬಹುದು. ಇಡೀ ಸಾಮ್ರಾಜ್ಯವೇ ನಾಶವಾಗಬಹುದು. ಆದ್ದರಿಂದ ಇಂದಿನ ದಿನ ಮುಖ್ಯ. ಬದುಕುವ ಕಲೆಯು ಬಹುದೊಡ್ಡ ರಹಸ್ಯವಾಗಿದೆ,'' ಎಲ್ಲರೂ ಸುಮ್ಮನಾದರು.
ಈ ಪ್ರಪಂಚದಲ್ಲಿ ಎಲ್ಲ ಸಮಸ್ಯೆಗಳನ್ನು ಎದುರಿಸಲು ಬದುಕುವ ಕಲೆ ಮುಖ್ಯ.
ಕೃಪೆ:ಡಾ. ಡಿ. ವೀರೇಂದ್ರ ಹೆಗ್ಗಡೆ.
No comments:
Post a Comment