Saturday, August 23, 2025

 ಕಥೆ-839 ಪುರಂದರ ದಾಸರ ವಜ್ರ ವಿರಕ್ತಿ


ಪತ್ರಿಕೆಗಳಲ್ಲಿ ನಾವು ಆಗಾಗ ಕಳ್ಳತನ-ದರೋಡೆಯ ಸುದ್ದಿಗಳನ್ನು ಓದುತ್ತೇವೆ. ಬೆಳ್ಳಿ, ಬಂಗಾರ, ಮುತ್ತು ರತ್ನ, ವಜ್ರದ ಒಡವೆಗಳೆಂದರೆ ಕಳ್ಳ, ಡಕಾಯಿತರಿಗೆ ಬಹಳ ಇಷ್ಟ. ಯಾರೂ ಇಲ್ಲದಿರುವಾಗ ಮನೆಗಳಿಗೆ ನುಗ್ಗಿ, ಮನೆ ಮಂದಿಯನ್ನು ಹೊಡೆದು, ಬಡಿದು ಬಂಗಾರ-ವಜ್ರ, ಮುತ್ತು, ರತ್ನಗಳನ್ನು ಒಯ್ಯುತ್ತಾರೆ. ಇತರರನ್ನು ಸತಾಯಿಸುತ್ತಾರೆ. ಆದರೆ ಸೂಕ್ಷ್ಮವಾದ ಮಾನವೀಯತೆಯುಳ್ಳ ಸಜ್ಜನರು, ಸಂತರ ದೃಷ್ಟಿಯಲ್ಲಿ ಬಂಗಾರ-ವಜ್ರಗಳ ವಾಸ್ತವಿಕ ಮೌಲ್ಯವೆಷ್ಟು ಎಂಬುದನ್ನು ನಿರೂಪಿಸುವ ಒಂದು ಪ್ರಸಂಗ ಅತ್ಯಂತ ಹೃದಯಸ್ಪರ್ಶಿಯಾಗಿದೆ.


ಕರ್ನಾಟಕದ ಸುಪ್ರಸಿದ್ಧ ಸಂತರೂ, ಕನ್ನಡದ ಹಿರಿಯ ದಾಸ ಪಂಥದ ಶ್ರೇಷ್ಠ ಕವಿಗಳೂ ಆಗಿದ್ದ ಪುರಂದರದಾಸರು ಭಗವಂತನ ಭಕ್ತಿಯನ್ನೇ ಸರ್ವ ಶ್ರೇಷ್ಠವೆಂದು ಬಗೆದು, ತಮ್ಮ ಸಮಯವನ್ನು ಭಗವತ್‌ ಪೂಜೆ-ಅರ್ಚನೆ ಮತ್ತು ಬಡಜನರ ಸೇವೆಯಲ್ಲಿ ವ್ಯಯಿಸುತ್ತಿದ್ದರು. ವಿಜಯನಗರ-ರಾಜ್ಯದ ಅರಸನಾದ ಕೃಷ್ಣದೇವರಾಯರಿಗೆ ಅಚ್ಚರಿ ಎನಿಸಿ, ಈ ಸಂತರ ಆಂತರ್ಯವನ್ನು ಪರೀಕ್ಷಿಸಬೇಕೆಂದು ತನ್ನ ಮಂತ್ರಿ ನೆರವಿನೊಂದಿಗೆ ನಿರ್ಣಯಿಸಿದರು.


ಸಂತ ಪುರಂದರದಾಸರಿಗೆ ಅರಮನೆಯಿಂದ ಭಿಕ್ಷೆಯ ರೂಪದಲ್ಲಿ ನೀಡಲಾಗುವ ಅಕ್ಕಿಯ ಜತೆಗೆ ರತ್ನ-ವಜ್ರಗಳನ್ನು ಬೆರಸಿ ದಾನ ಮಾಡತೊಡಗಿದರು. ಹೀಗೆಯೇ ಒಂದು ತಿಂಗಳು ದಾಟಿದಾಗ ರಾಜರೂ, ಮಂತ್ರಿಯೂ ವೇಷ ಬದಲಾಯಿಸಿ, ಪುರಂದರದಾಸರ ಪರೀಕ್ಷೆ ಮಾಡಲು ನಿರ್ಧರಿಸಿದರು.


ಇಬ್ಬರೂ ಪುರಂದರದಾಸರ ಮನೆಯ ಬಳಿ ಹೋದಾಗ, ಮನೆಯೊಳಗಿಂದ ಪುರಂದರದಾಸರ ಪತ್ನಿ ತನ್ನ ಗಂಡನೊಡನೆ ದೂರಿಕೊಂಡ ವಿಷಯ ಕೇಳಿಸಿತು. 'ಇತ್ತೀಚೆಗೆ ನೀವು ಯಾರೋ ಬಡವರ ಮನೆಯಿಂದ ಭಿಕ್ಷೆ ತರುತ್ತಿದ್ದೀರೀಂತ ಕಾಣಿಸ್ತದೆ. ಆತ ಅಕ್ಕಿ ಜತೆಗೆ ಬಿಳಿ ಬೆಣಚು ಕಲ್ಲುಗಳನ್ನು ಬೆರಸಿ ಕೊಡುತ್ತಿದ್ದಾನೆ. ಅವನ್ನು ಆರಿಸಿ ಹೆಕ್ಕಿ-ಹೆಕ್ಕಿ ನಾನು ಸುಸ್ತಾಗಿ ಬಿಟ್ಟೆ'.


ಇದನ್ನು ಕೇಳಿ ಅಚ್ಚರಿಗೊಂಡ ರಾಜರು ಆ ಮನೆಯ ಕೊಠಡಿಯ ಮೂಲೆಯ ತಿಪ್ಪೇರಾಶಿಯ ಕಡೆಗೆ ಹೋದರು. ಅಲ್ಲಿ ಸಂತರ ಪತ್ನಿ ಎಸೆದಿದ್ದ ರತ್ನ, ವಜ್ರಗಳ ರಾಶಿಯನ್ನು ಕಂಡರು. ಇಷ್ಟರಲ್ಲಿ ಅರಸರನ್ನು ಗುರುತಿಸಿದ ಪುರಂದರದಾಸರು ಅಚ್ಚರಿಯಿಂದ ನುಡಿದರು- ''ಮಹಾರಾಜರೆ, ನನ್ನ ಬಡತನ ನೋಡಿ ಅಕ್ಕಿಗೆ ವಜ್ರ ಬೆರಸಿದವರು ನೀವೇ ಎಂದು ಊಹಿಸಿದ್ದೆ. ನನ್ನಂಥ ಬ್ರಾಹ್ಮಣನಿಗೆ ವಜ್ರ ಮತ್ತು ಬೆಣಚುಕಲ್ಲಿನಲ್ಲಿ ಅಂತರವಿಲ್ಲ. ಈ ವಜ್ರಗಳನ್ನು ನೀವೇ ಒಯ್ದು ಪ್ರಜಾ ಸೇವೆಗೆ ಬಳಸಿ,'' ಆಗ ರಾಜನೂ ಮಂತ್ರಿಯೂ ಈ ಸಂತರ ವಿರಕ್ತ ಮನೋವೃತ್ತಿಗೆ ತಲೆಬಾಗಿದರು.


ಈ ಜಗತ್ತಿನಲ್ಲಿ ಜೀವನಾವಶ್ಯಕವಲ್ಲದ, ಈ ಮೌಲ್ಯದ ಮುತ್ತು-ಬಂಗಾರ, ಬೆಳ್ಳಿ, ರತ್ನಗಳನ್ನು ತಿರಸ್ಕರಿಸಿ, ಜೀವನಾವಶ್ಯಕ ವಸ್ತುಗಳಿಗೆ ಮಾತ್ರ ಮಹತ್ವ ನೀಡುವವರೇ ನಿಜವಾದ ಸಂತರು. ಜಗತ್ತಿನಲ್ಲಿ ಇಂಥ ಸಂತರ ಸಂಖ್ಯೆ ಹೆಚ್ಚಾಗಬೇಕಾಗಿದೆ. 


ಕೃಪೆ:ಡಾ. ಡಿ. ವೀರೇಂದ್ರ ಹೆಗ್ಗಡೆ,

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು