ಕಥೆ-891
ಒಳ್ಳೆಯ ವ್ಯಕ್ತಿತ್ವ ಚಿನ್ನ ಬೆಳ್ಳಿಗಿಂತ ಅಮೂಲ್ಯ
ಮನುಷ್ಯನಲ್ಲಿ ಛಲವಿರಬೇಕು. ಛಲವಿದ್ದರೆ ಯಶಸ್ಸು ನಿಶ್ಚಿತ. ಸಮಯ ಅರಿತು ಶ್ರಮದಿಂದ ಬಾಳಿದರೆ ಪ್ರತಿಫಲ ದೊರಕುವುದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ಬಳಿ ಏನಿದೆ ಏನಿಲ್ಲ ಎನ್ನುವುದಕ್ಕಿಂತ ನೆಮ್ಮದಿ ಇದೆಯೇ ಎಂದು ಯೋಚಿಸುವುದು ಉತ್ತಮ. ನೆಮ್ಮದಿಗಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ, ಸತ್ಯದ ಮಾರ್ಗದಲ್ಲಿ ನಡೆಯುವುದು ದೇವರ ಪೂಜೆಗಿಂತ ದೊಡ್ಡದು. ಕಾಯುತ್ತಾ ಕುಳಿತವರಿಗೆ ಒಳ್ಳೆಯ ದಿನಗಳು ಬರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಕಷ್ಟಪಟ್ಟು ದುಡಿಯುವವರಿಗೆ ಇಂದಿಲ್ಲ ನಾಳೆಯಾದರೂ ಒಳ್ಳೆಯ ದಿನಗಳು ಬಂದೇ ಬರುತ್ತವೆ. ವ್ಯಕ್ತಿಗೆ ಕೊಳೆ ಅಂಟಿದರೆ ಶುದ್ದ ಮಾಡುವುದು ಬಲು ಸುಲಭ. ಆದರೆ, ವ್ಯಕ್ತಿತ್ವವೇ ಕೊಳಕಾಗಿದ್ದರೆ ತೊಳೆಯುವುದು ತುಂಬಾ ಕಷ್ಟ.
ನಿಜವಾದ ಆನಂದ ಹೃದಯದ ಗೂಡಿನಲ್ಲಿದೆ. ಗುಡಿಸಲು ಅಥವಾ ಅರಮನೆಯಲ್ಲಿಲ್ಲ. ಮನುಷ್ಯ ಫಲಭರಿತ ಬಾಳೆಯಂತೆ ಬಾಗಿ ನಡೆಯಬೇಕು. ಆದರೆ ಬೀಗಬಾರದು. ಬಹಳ ಜಾಗ್ರತೆಯಿಂದ ಸತ್ಪಥದಲ್ಲಿ ನಡೆದು ಮಾನವ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ತಿಳಿದರೂ ತಿಳಿಯದ ಹಾಗೆ ಅರಿತರೂ ಅರಿಯದ ಹಾಗೆ ಕಂಡರೂ ಕಾಣದ ಹಾಗೆ ಬದುಕುವುದೇ ಕಲಿಯುಗದ ಜೀವನವಾಗಿದೆ.
ನಮ್ಮ ಮುಖ ನಾವು ನೋಡಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಕನ್ನಡಿಯ ಸಹಾಯ ಬೇಕೇ ಬೇಕು. ನಮ್ಮ ಸರಿ ತಪ್ಪುಗಳನ್ನು ನಾವೇ ತೀರ್ಮಾನಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಕನ್ನಡಿಯಂತಹ ಮನಸ್ಸಿರುವ ಒಳ್ಳೆಯ ಸ್ನೇಹಿತರು ಅಥವಾ ಒಳ್ಳೆಯ ಬಂಧುಗಳಿರಬೇಕು.
ಅದೃಷ್ಟ ನಮ್ಮ ಕೈಯಲ್ಲಿ ಇಲ್ಲದೇ ಇರಬಹುದು. ಆದರೆ, ನಿರ್ಧಾರ ನಮ್ಮ ಕೈಯಲ್ಲಿಯೇ ಇದೆ. ಸರಿಯಾದ ನಿರ್ಧಾರ ಕೈಗೊಳ್ಳುವ ಮತ್ತು ಆ ದಾರಿಯಲ್ಲಿ ಸಾಗುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಚಿಂತನೆ ಉದಾತ್ತವಾಗಿದ್ದಲ್ಲಿ ಫಲಿತಾಂಶವೂ ಶ್ರೇಷ್ಠವಾದುದೇ ಆಗಿರುತ್ತದೆ. ನೆಟ್ಟ ಗಿಡ, ಬೆಳೆಸಿಕೊಂಡಿರುವ ಸ್ನೇಹ ಎರಡೂ ಅಪರೂಪವಾದುವುಗಳೇ. ಒಂದು ನೆರಳು ನೀಡುತ್ತದೆ. ಮತ್ತೊಂದು ಜತೆಯಾಗಿ ಇದ್ದು ಮನಸ್ಸನ್ನು ಉಲ್ಲಾಸದಿಂದ ಇರುವಂತೆ ಮಾಡುತ್ತದೆ. ಒಳ್ಳೆಯ ವ್ಯಕ್ತಿತ್ವ ಚಿನ್ನ ಬೆಳ್ಳಿಗಿಂತಲೂ ಅಮೂಲ್ಯ.
-ರಂಭಾಪುರಿ ಶ್ರೀಗಳು ಬಾಳೆಹೊನ್ನೂರು
No comments:
Post a Comment