ಕಥೆ-863
ಕೂಲಿ ಕೆಲಸ ಮಾಡುವವನ ಮಗ NEET ಕ್ರ್ಯಾಕ್ ಮಾಡಿದ್ದ.
ಓಡಿಶಾದ ಖುರ್ದಾ ಜಿಲ್ಲೆಯ ಪುಟ್ಟ ಹಳ್ಳಿಯ ಹತ್ತೊಂಬತ್ತು ವರ್ಷದ ಹುಡುಗ ಶುಭಂ ಸಬರ್ ಹನ್ನೆರಡನೇ ತರಗತಿಯ ಪರೀಕ್ಷೆ ಮುಗಿಸಿ, ನೀಟ್ ಪರೀಕ್ಷೆಯನ್ನೂ ಬರೆದು ಬೆಂಗಳೂರಿಗೆ ಬಂದಿದ್ದ! ಪಾಪ ನೀಟ್ ಪರೀಕ್ಷೆಗೆ ಓದಿ ಮಗ ಸುಸ್ತಾಗಿದ್ದಾನೆ ಎಂದು ಅವರಪ್ಪ ಬೆಂಗಳೂರಿನ ಪ್ರವಾಸಕ್ಕೆ ಕಳಿಸಿದ್ದಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿದ ಶುಭಂ ಅಷ್ಟೆಲ್ಲ ಅನುಕೂಲವಿದ್ದವನಲ್ಲ. ತಂದೆಯ ಹತ್ತಿರ ಇರುವುದು ಇಷ್ಟೇ ಇಷ್ಟು ಜಮೀನು. ಅದರಲ್ಲಿ ಮನೆಯವರ ಹೊಟ್ಟೆ ತುಂಬಿಸುವುದೇ ಕಷ್ಟ! ನಾಲ್ಕು ಮಕ್ಕಳಲ್ಲಿ ಇವನೇ ಹಿರಿಯ. ಸುಮ್ಮನೆ ಕೂರುವುದಕ್ಕಿಂತ ದುಡಿದು ನಾಲ್ಕು ಕಾಸು ಮಾಡಿಕೊಂಡರೆ ಒಳ್ಳೆಯದಲ್ಲವೇ? ಅದಕ್ಕಾಗಿ ಶುಭಂ ಬೆಂಗಳೂರಿಗೆ ಬಂದಿದ್ದು! ಕೂಲಿ ಕೆಲಸ ಮಾಡಿ ಒಂದಿಷ್ಟು ಹಣ ಮಾಡಿಕೊಳ್ಳಲು! ಜೂನ್ ಹದಿನಾಲ್ಕನೇ ತಾರೀಖು ಆತ ಕೂಲಿ ಕೆಲಸ ಮಾಡುತ್ತಿರುವಾಗಲೇ ಓಡಿಶಾದಿಂದ ಶಿಕ್ಷಕರೊಬ್ಬರು ಕರೆ ಮಾಡಿದರು. ಅದು ತನ್ನ ಬದುಕು ಬದಲಾಯಿಸುವ ಕರೆಯಾಗುತ್ತದೆಂಬ ಅಂದಾಜು ಶುಭಂಗೆ ಇತ್ತೋ ಇಲ್ಲವೋ! ಶುಭಂ ನೀಟ್ ಪರೀಕ್ಷೆ ಕ್ರ್ಯಾಕ್ ಮಾಡಿದ್ದ! ಇನ್ನೂ ಕೆಲಸಕ್ಕೆ ಬಂದಿದ್ದಷ್ಟೇ. ಬಿಟ್ಟು ಹೋಗುವುದು ಹೇಗೆ? ಅಳುತ್ತ ಶುಭಂ ತನ್ನ ಪಾಲಕರಿಗೆ ಕರೆ ಮಾಡಿ ತಾನು ಡಾಕ್ಟರ್ ಆಗಲಿದ್ದೇನೆ ಅಪ್ಪಾ, ಅಮ್ಮಾ ಎಂದ! ಕಾಂಟ್ರಾಕ್ಟರ್ ಹತ್ತಿರ ಹೇಳಿ ತನ್ನ ಉಳಿಕೆ ಹಣವನ್ನು ತೆಗೆದುಕೊಂಡು ಊರಿನ ರೈಲು ಹತ್ತಿದ ಶುಭಂ ಈಗ ಬೆಹ್ರಾಮ್‌ಪುರದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ. ಕೆಲವರಿರುತ್ತಾರೆ, ಪರಿಸ್ಥಿತಿ ತಮ್ಮ ವಿರುದ್ಧ ಇದ್ದಾಗ ಅದೇಕೆ ನೋಡೇ ಬಿಡೋಣ ಎಂದು ಪರಿಸ್ಥಿತಿಗೇ ಸವಾಲು ಹಾಕಿ ಯಶಸ್ವಿಯಾಗುವವರು. ಅಂತಹ ವ್ಯಕ್ತಿಗಳಲ್ಲೊಬ್ಬ ಶುಭಂ, ಈ ಹುಡುಗ ಒಳ್ಳೆಯ ವೈದ್ಯನಾಗಲಿ. ಅವನ ಒಡಹುಟ್ಟಿದವರು, ಊರಿನ ಇತರ ಹುಡುಗರು ಈ ಸ್ಫೂರ್ತಿಯಿಂದ ಬೆಳಕನ್ನು ಕಾಣಲಿ. ಮತ್ತು ಏನು ಮಾಡಲೂ ನೆಪ ಹೇಳುವವರಿಗಂತೂ ಶುಭಂ ಸಾಧನೆಗಿಂತ ಎಚ್ಚರಿಕೆಯ ಪಾಠ ಮತ್ತೊಂದಿಲ್ಲ. ಏನಂತೀರಾ?
ದೀಪಾ ಹಿರೇಗುತ್ತಿ.

No comments:
Post a Comment