ಕಥೆ-906
ಪ್ರತಿಫಲಕ್ಕಾಗಿ ಧಾವಂತ ಬೇಡ
ಎಲ್ಲವನ್ನೂ ಬೇಗ ಪಡೆಯಬೇಕು ಎನ್ನುವ ಧಾವಂತ ನಮ್ಮ ಬೆನ್ನು ಹತ್ತಿ ಕುಳಿತುಕೊಂಡಿದೆ. ಏನನ್ನಾದರೂ ಸರಿ ಕ್ಷಣಾರ್ಧದಲ್ಲಿ ಪಡೆಯಲೇಬೇಕು ಅನ್ನುವ ಮನೋಭಾವ ಹೆಚ್ಚುತ್ತಿದೆ. ನಾವು ಏನನ್ನೇ ಮಾಡಿದರೂ, ಅದು ಫಲ ನೀಡಲು ಒಂದಷ್ಟು ಸಮಯ ಬೇಕಾಗುತ್ತದೆ ಎನ್ನುವ ಮೂಲಭೂತ ಗ್ರಹಿಕೆಯಿಂದ ನಾವು ದೂರ ಸರಿದಿದ್ದೇವೆ. ಪ್ರಕೃತಿ ನಮಗೆ ಅಗೋಚರವಾಗೇನೂ ಇಲ್ಲ. ಪ್ರತಿಯೊಂದರ ಹುಟ್ಟು, ಬೆಳವಣಿಗೆಗೆ ಒಂದಷ್ಟು ಸಮಯ ಎಂಬುದು ಅತ್ಯಗತ್ಯ. ಅದು ಆಗುವ ತನಕ ಕಾಯುವ ತಾಳ್ಮೆ ನಮಗಿರಬೇಕು. ಓದು ಬೇಗ ಮುಗಿಯಬೇಕು, ಕೆಲಸ ತಕ್ಷಣ ಸಿಗಬೇಕು, ವ್ಯವಹಾರಕ್ಕಾಗಿ ಹೂಡಿದ ಬಂಡವಾಳ ತಕ್ಷಣ ಲಾಭತಂದು ಕೊಡಬೇಕು, ಎಲ್ಲರದೂ ದಿವ್ಯ ಮಂತ್ರ ಇದೇ ಆಗಿದೆ. ನಮಗೆಂದೂ ಇದು ಅಸಹಜ ನಿರೀಕ್ಷೆ ಎಂದು ಅನ್ನಿಸುವುದೇ ಇಲ್ಲ.
ಫಲಿತಾಂಶದ ನಿರೀಕ್ಷೆಯಲ್ಲಿ ನಾವು ಪೂರ್ವಭಾವಿ ಕೆಲಸಗಳನ್ನೇ ಸಮರ್ಪಕವಾಗಿ ಮಾಡುವುದನ್ನು ಕೈ ಬಿಟ್ಟಿದ್ದೇವೆ. ಒಬ್ಬ ರೈತ ಒಂದು ಬೆಳೆ ಬೆಳೆಯಲು ಏನೆಲ್ಲ ಕಷ್ಟ ಪಡಬೇಕು. ಎಷ್ಟೆಲ್ಲ ಪ್ರಾಕೃತಿಕ ಸವಾಲು ಎದುರಿಸಬೇಕು. ಮಾರುಕಟ್ಟೆ ಸವಾಲು ಎದುರಿಸಬೇಕು. ತಾಳ್ಮೆ ಎಂದರೇನೆಂಬುದನ್ನು ನಿಜಕ್ಕೂ ಕಲಿಯಬೇಕು ಎನ್ನುವ ಮನಸ್ಸಿದ್ದರೆ ಅದು ಕಾಯಕಯೋಗಿಗಳಾದ ರೈತರಿಂದಲೇ ಕಲಿಯಬೇಕು. ಎಷ್ಟೋ ರೈತರು ಸರಣಿ ನಷ್ಟ ಅನುಭವಿಸಿದರೂ, ತಮ್ಮ ಕೃಷಿಕಾಯಕದಿಂದ ಹೊರಬರಲಾರರು. ನಷ್ಟದ ಮೇಲೆ ನಷ್ಟ ಬಂದರೂ ಸರಿಯೇ ಕಾಯಕ ಮಾಡಿಯೇ ಸಿದ್ದ ಎನ್ನುವಂತೆ ಹಠಕ್ಕೆ ಬಿದ್ದು ಕೃಷಿ ಮಾಡುತ್ತಾರೆ. ಎಷ್ಟು ಬೆಳೆ ಹೋದರೂ ಸರಿ, ಒಂದೇ ಒಂದು ಫಸಲು ಕೈಗೆಟುಕಿದರೆ ಮತ್ತೆ ಅದೇ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಾರೆ. ಕೃಷಿ ಕಾಯಕದೆಡೆಗಿನ ಬೇಷರತ್ ಬದ್ದತೆ ಅದು. ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ ಇದು ಎಷ್ಟರಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಸಹಾ ಏಳಬಹುದು.
ರೈತರ ಉದಾಹರಣೆ ಇಷ್ಟು ಸುದೀರ್ಘವಾಗಿ ಹೇಳಲು ಕಾರಣ ಇದೆ. ಇಂದು ಆಧುನಿಕ ವೃತ್ತಿ, ವ್ಯಾಪಾರಗಳಲ್ಲಿ ತೊಡಗಿರುವ ನಮಗೆ ಇಂತಹ ಮಾದರಿಗಳು ಬೇಕು. ಹಾಗೆಂದು ನಷ್ಟ ಅನುಭವಿಸುತ್ತಲೇ ಮತ್ತೆ ಮತ್ತೆ ಅದೇ ಕೆಲಸ ಮಾಡಬೇಕು ಎಂದರ್ಥವಲ್ಲ. ಯಾವ ಕೆಲಸಕ್ಕೆ ಕೈ ಹಾಕಿದರೂ ಕೇವಲ ಅದರ ಫಲಿತದ ಮೇಲೆ ಕಣ್ಣಿಟ್ಟು ಧಾವಂತದಿಂದ ಕಾಯುವುದರಿಂದ ಏನೂ ಪ್ರಯೋಜನ ಇಲ್ಲ. ಮೊದಲು ನಿಮ್ಮ ಹಾಗೆ ಪ್ರಯತ್ನ ಶೀಲರಾಗಿ ಗೆದ್ದವರತ್ತ ಒಮ್ಮೆ ನೋಡಿ. ಯಾರೊಬ್ಬರೂ ದಿಢೀರ್ ಮೇಲೆದ್ದು ಬಂದವರಾಗಿರುವುದಿಲ್ಲ. ಪ್ರತಿಯೊಬ್ಬರ ಬೆಳವಣಿಗೆಯ ಹಿಂದೆ ಸುದೀರ್ಘ ಸಮಯ, ಎಡಬಿಡದ ಪ್ರಯತ್ನಗಳು ಇರುತ್ತವೆ. ಅವೆಲ್ಲವನ್ನೂ ದಾಟಿಯೇ ಅವರು ಫಲಿತ ಕಂಡಿರುತ್ತಾರೆ. ಈ ವಾಸ್ತವ ಮನವರಿಕೆಯಾದಾಗ ಫಲಿತದ ಬಗೆಗಿನ ನಿಮ್ಮ ದೃಷ್ಟಿಕೋನ ಬದಲಾಗುತ್ತದೆ. ಆಗ ನಿಮ್ಮೆಲ್ಲ ಪ್ರಯತ್ನಗಳು ಕೇವಲ ಫಲಿತದ ಮೇಲೆ ಕೇಂದ್ರೀಕರಿಸದೆ, ಸಹಜ ಕ್ರಿಯೆಗಳಂತೆ ಅನುಭವಕ್ಕೆ ಬರತೊಡಗುತ್ತವೆ. ಆ ಅನುಭವ ಪಕ್ವತೆಯಿಂದ ಕೂಡಿ ಫಲಿತದ ಬಗೆಗಿನ ನಮ್ಮ ದೃಷ್ಟಿಕೋನವನ್ನೇ ಬದಲಿಸುತ್ತದೆ.
- ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ
No comments:
Post a Comment