ಕಥೆ-905
ವಿಶ್ವಾಸ ಗಳಿಸದೇ ಏನೇ ಬದಲಾಯಿಸಬೇಕೆಂದರೂ ಕಷ್ಟ..
ಪೋಷಕರಿಗೆ ಮಕ್ಕಳನ್ನು ಬದಲಾಯಿಸಬೇಕು ಎನ್ನುವ ಗುರಿ. ಶಿಕ್ಷಕರಿಗೆ ತಮ್ಮ ಶಿಷ್ಯಂದಿರನ್ನು ತಮ್ಮ ನಿರೀಕ್ಷೆಯಂತೆ ಬದಲಾಯಿಸುವ ಗುರಿ. ಕಚೇರಿಯ ಮುಖ್ಯಸ್ಥನಿಗೆ ತನ್ನ ನೌಕರರನ್ನು ಹೊರಗಿನ ಸ್ಪರ್ಧೆಯ ವೇಗಕ್ಕೆ ತಕ್ಕಂತೆ ಬದಲಾಯಿಸುವ ಆದ್ಯತೆ. ಒಬ್ಬೊಬ್ಬರು ಒಂದೊಂದು ಆಗತ್ಯ, ಆದ್ಯತೆಗಳಿಗಾಗಿ ಸುತ್ತಲಿನ ಜನರನ್ನು ಬದಲಾಯಿಸುವ, ಅದರಿಂದ ದೊಡ್ಡ ಮಟ್ಟದ ಪ್ರತಿಫಲ ಪಡೆಯುವ ನಿರೀಕ್ಷೆಯಲ್ಲಿ ಇರುತ್ತಾರೆ. ಅದಕ್ಕಾಗಿ ಸಾಕಷ್ಟು ಶ್ರಮ, ಸಮಯ ಎರಡನ್ನೂ ಹಾಕುತ್ತಾರೆ. ಇದರಲ್ಲಿ ಯಶಸ್ಸು ಪಡೆಯುವ ಪ್ರಮಾಣ ಎಷ್ಟು ಎಂದು ನೋಡಿದರೆ ಉತ್ತರ ನಿರಾಶದಾಯಕವಾಗಿರುತ್ತದೆ, ಏಕೆಂದರೆ, ಬದಲಾಯಿಸುವ ಇಚ್ಛೆ ಉಳ್ಳವರು ತಾವು ಬದಲಾಗುವುದಿಲ್ಲ. ಆದರೆ, ಸುತ್ತಲಿನವರು ಮಾತ್ರ ಬದಲಾಗಬೇಕು ಎಂದು ಬಯಸುತ್ತಾರೆ.
ಒಬ್ಬ ವ್ಯಕ್ತಿ ನಮ್ಮಿಚ್ಛೆಯಂತೆ ಸ್ಪಂದಿಸಬೇಕಾದರೆ, ಆತನ ಗುಣಸ್ವಭಾವಗಳನ್ನು ಅರಿತು ನಾವು ಸ್ಪಂದಿಸಬೇಕು. ಇಲ್ಲವೇ ನಮ್ಮ ಗುಣಸ್ವಭಾವಗಳನ್ನರಿತು ಆತ, ಆಕೆ ಸ್ಪಂದಿಸಬೇಕು. ಜತೆಗೆ ಪರಸ್ಪರ ಸಹಕಾರದ ಧೋರಣೆ ಇರಬೇಕು. ಇದು ಸಾಮಾನ್ಯ ಗ್ರಹಿಕೆ. ಬಹಳಷ್ಟು ಜನರಿಗೆ ಇಂತಹ ಸಾಮಾನ್ಯ ಗ್ರಹಿಕೆಯ ಕೊರತೆಯಿಂದಾಗಿ ಸುತ್ತಲಿನವರನ್ನು ಬದಲಾಯಿಸಲು ವಿಫಲ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇದು ಪೋಷಕರು, ಶಿಕ್ಷಕರು, ಕೆಲಸ ತೆಗೆದುಕೊಳ್ಳುವ ಮುಖ್ಯಸ್ಥ ಎಲ್ಲರಿಗೂ ಅನ್ವಯಿಸುತ್ತದೆ.
ಮಕ್ಕಳು ಓದುತ್ತಿಲ್ಲ ಎನ್ನುವ ಸದಾ ಕೊರಗುವ ಮತ್ತು ಮಕ್ಕಳನ್ನು ದೂರುವ ಪೋಷಕರು ಮಕ್ಕಳ ಸ್ಥಾನದಲ್ಲಿ ನಿಂತು ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ, ಮಕ್ಕಳು ಕಲಿಕೆಯತ್ತ ಏಕೆ ಆಸಕ್ತಿ ತೋರುತ್ತಿಲ್ಲ, ಯಾವ ಸಮಸ್ಯೆ ಅವರನ್ನು ಕಲಿಕೆಯ ಮನೋಭಾವದಿಂದ ದೂರವಿಟ್ಟಿರಬಹುದು ಎಂದು ಯೋಚಿಸುವುದಿಲ್ಲ. ಕಲಿಕೆಯನ್ನೂ ಸಂತೋಷದಿಂದ ಮಗು ರೂಢಿಸಿಕೊಳ್ಳುವಂತೆ ಏನು ಮಾಡಬಹುದು ಎಂದು ಯೋಚಿಸುವುದಿಲ್ಲ ಎಲ್ಲದಕ್ಕೂ ದಂಡಂ, ದಶಗುಣಂ ಸೂತ್ರವೇ ಪಾಲನೆಯಾಗುತ್ತಿರುತ್ತದೆ. ಶಿಕ್ಷಕರದೂ ಇದೇ ಕಥೆ. ಬಾಸ್ ಗಳದೂ ಇದೇ ಕಥೆ..
ಪ್ರತಿ ವ್ಯಕ್ತಿ. ವಸ್ತುವಿಗೂ ತನ್ನದೇ ಆದ ಗುಣಸ್ವಭಾವಗಳು ಇರುತ್ತವೆ. ಇದನ್ನು ಗ್ರಹಿಸಬೇಕು. ನಾವು ಯಾರನ್ನು ಬದಲಾಯಿಸಬೇಕು ಎಂದು ನಿರೀಕ್ಷಿಸುತ್ತೀರೋ ಅವರನ್ನು ಮೊದಲು ನಮ್ಮ ವಿಶ್ವಾಸದ ತೆಕ್ಕೆಗೆ ತೆಗೆದುಕೊಳ್ಳಬೇಕು. ಹಾಗೆ, ನಾವು ವಿಶ್ವಾಸದಿಂದ ಅವರನ್ನು ಸ್ವೀಕರಿಸಿದ ಕ್ಷಣದಿಂದ ನಮ್ಮ ಬಗೆಗೆ ಒಂದು ಗೌರವದ ಭಾವನೆ ಮೂಡುತ್ತದೆ. ಜತೆಗೆ ಅವರ ಅನಿಸಿಕೆಗಳಿಗೆ ಒಂದಷ್ಟು ಜಾಗ ಕೊಟ್ಟಾಗ, ಅವು ಅನುಪಯುಕ್ತವಾಗಿದ್ದರೂ ಸರಿ. ಕೇಳಿಸಿಕೊಂಡು. ಕೇಳಿಸಿಕೊಂಡ ಹತ್ತು ಮಾತುಗಳನ್ನು ಗಂಭೀರವಾಗಿ ಕೇಳಿ. ಸರಿಯಾದ ಒಂದಕ್ಕೇ ನಾವು ಸ್ಪಂದಿಸಿ. ಪ್ರಶಂಸಿಸಿದಾಗ. ಆಗ ಬರುವ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ . ಇದು ಅಬಾಲವೃದ್ಧರಾದಿಯಾಗಿ ಎಲ್ಲರೂ ನಿರೀಕ್ಷಿಸುವ ಧೋರಣೆ. ತಮ್ಮನ್ನು ವಿಶ್ವಾಸದಿಂದ ಕಾಣದ ಯಾರೂ ಮತ್ತೊಬ್ಬರನ್ನು ವಿಶ್ವಾಸದಿಂದ ಕಾಣಲಾರರು. ನಾವು ಒಬ್ಬರನ್ನು ವಿಶ್ವಾಸದಿಂದ ಗೆದ್ದಾಗ ಅದು ನಮ್ಮೊಬ್ಬರ ಗೆಲುವು ಆಗಿರುವುದಿಲ್ಲ. ಅದರಲ್ಲಿ ನಾವು ಗೆದ್ದ ವ್ಯಕ್ತಿಯ ಪಾತ್ರವೂ ಸೇರಿರುತ್ತದೆ.
ಕೃಪೆ :ನೆಟ್
No comments:
Post a Comment