ಕಥೆ-964
ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿದೆ
https://basapurs.blogspot.com
ಕಾಡೊಂದರಲ್ಲಿ ಎಲ್ಲ ಪ್ರಾಣಿಗಳ ಜತೆ ಇಲಿಯೊಂದು ವಾಸಿಸುತ್ತಿತ್ತು. ಸ್ನೇಹಮಯಿಯಾಗಿದ್ದ ಹಾಗೂ ಚುರುಕಾಗಿದ್ದ ಇಲಿಯ ಸಮಸ್ಯೆ ಏನೆಂದರೆ ಅದರ ನಾಚಿಕೆಯ ಸ್ವಭಾವ. ಜಾಣ ಮೊಲ, ಇಂಪಾಗಿ ಹಾಡುವ ರಾಬಿನ್ ಹಕ್ಕಿ, ಬುದ್ಧಿವಂತ ಗೂಬೆ ಇವರೇ ಇಲಿಯ ಸ್ನೇಹಿತರಾಗಿದ್ದರು. ಮಾತಾಡುತ್ತಿದ್ದರು, ಒಟ್ಟಿಗೆ ತಿಂಡಿ ತಿನ್ನುತ್ತಿದ್ದರು. ಇಲಿಗೆ ಸ್ನೇಹಿತರನ್ನು ಭೇಟಿ ಮಾಡುವುದು, ಅವರ ಜತೆ ಸಮಯ ಕಳೆಯುವುದು ತುಂಬಾ ಇಷ್ಟ.ಆದರೆ ನಾಲ್ವರೂ ಒಟ್ಟಾಗಿ ಏನಾದರೂ ಸಾಹಸ ಮಾಡಹೊರಟರೆ ಇಲಿ ಹಿಂಜರಿಯುತ್ತಿತ್ತು. ತಾನು ಬಹಳ ಸಣ್ಣ ದೇಹ ಹೊಂದಿದ್ದೇನೆ, ತನ್ನಿಂದ ಏನು ಮಾಡಲು ಸಾಧ್ಯ ಎನ್ನುವುದು ಅದರ ಆಲೋಚನೆಯಾಗಿತ್ತು.
ಅವರ ಕಾಡಿನಲ್ಲಿ ಪ್ರತೀವರ್ಷ ಹಬ್ಬ ಜರುಗುತ್ತಿತ್ತು. ಆಟಗಳು, ಹಾಡು, ನೃತ್ಯ, ಪುಷ್ಕಳ ಭೋಜನ ಎಲ್ಲವೂ ಇರುತ್ತಿತ್ತು. ಕಾಡಿನ ಮಧ್ಯೆ ಇರುವ ಉದ್ದನೆಯ ಮರವೊಂದನ್ನು ಅಲಂಕರಿಸುವುದರಲ್ಲಿ ಎಲ್ಲರೂ ತೊಡಗಿದ್ದರು. ಆದರೆ ಒಂದು ಸಮಸ್ಯೆ ಇತ್ತು. ಆ ಉದ್ದನೆಯ ಮರದ ತುತ್ತ ತುದಿಯಲ್ಲಿ ಹೊಳೆವ ರಿಬ್ಬನ್ ಸಿಕ್ಕಿಹಾಕಿಕೊಂಡಿತ್ತು. ಅದನ್ನು ತೆಗೆಯಬೇಕಿತ್ತು. ಮೊಲಕ್ಕೆ ಅಷ್ಟು ಎತ್ತರ ಹೋಗಲಾಗದು, ರಾಬಿನ್ ಹಕ್ಕಿ ಅಷ್ಟು ಎತ್ತರ ಹಾರಿದರೂ ರಿಬ್ಬನ್ ತೆಗೆಯುವಾಗ ಗಾಳಿ ಬಂದರೆ ಕಷ್ಟ, ಎಲ್ಲ ಪ್ರಾಣಿಗಳೂ ಏನು ಮಾಡುವುದೆಂದು ಯೋಚನೆ ಮಾಡುವಾಗ ಮೊದಲ ಬಾರಿಗೆ ಇಲಿಗೆ ತಾನೂ ಏನಾದರೂ ಮಾಡಬೇಕು ಅನ್ನಿಸಿ ಹಿಂಜರಿಯುತ್ತಲೇ ಮುಂದೆ ಬಂದು ʼನಾನು ಹೋಗ್ತೀನಿʼ ಅಂದಿತು. ಎಲ್ಲ ಪ್ರಾಣಿಗಳು ಆಶ್ಚರ್ಯದಿಂದ ನೋಡುತ್ತಿರುವಂತೆಯೇ ಅಳಿಲು ಹೇಳಿತು, ʼಹೇಯ್ ಮರದ ಕೊನೆಯ ಕೊಂಬೆ ಬಹಳ ತೆಳುವಾಗಿದೆ, ನೋಡು ವಿಚಾರ ಮಾಡು.ʼ ಆದರೂ ಇಲಿ ತಲೆ ಅಲ್ಲಾಡಿಸಿ ಮರ ಹತ್ತಲು ಪ್ರಾರಂಭಿಸಿತು. ನಿಧಾನಕ್ಕೆ ಮೇಲೆ ಹತ್ತಿ, ಹಗೂರಕ್ಕೆ ರಿಬ್ಬನ್ ತೆಗೆದು ಅದನ್ನು ಜಾಗರೂಕತೆಯಿಂದ ಕೆಳಗೆ ತಂದಿತು. ಇಲಿ ಕೆಳಗೆ ಬಂದಾಗ ಎಲ್ಲ ಪ್ರಾಣಿಗಳೂ ಅದನ್ನು ಮುಕ್ತಕಂಠದಿಂದ ಹೊಗಳಿದವು. ʼಅರೇ ವಾ , ಏನಾದರೂ ಮಾಡೋಣ ಅಂದಾಗ ಹಿಂದೆ ಉಳಿಯುತ್ತಿದ್ದೆ, ಇವತ್ತು ದೊಡ್ಡ ಸಾಹಸ ಮಾಡಿಬಿಟ್ಟೆಯಲ್ಲ, ಸೂಪರ್ʼ ಅಂದರು ಗೆಳೆಯರು.
ಬುದ್ಧಿವಂತ ಗೂಬೆ ಹೇಳಿತು, “ನಿಜವಾದ ಶೌರ್ಯ ದೇಹದ ಗಾತ್ರದ ಮೇಲೆ ನಿರ್ಧರಿತವಾಗುವುದಿಲ್ಲ. ನಮ್ಮನ್ನು ನಾವು ನಂಬುವುದರಿಂದ, ಭಯವಿದ್ದರೂ ಧೈರ್ಯ ತಂದುಕೊಂಡು ಮುನ್ನಡೆಯುವುದರಿಂದ ಅದ್ಭುತಗಳು ನಡೆಯುತ್ತವೆ, ಈಗ ತಾನೇ ನೀನು ಮಾಡಿದೆಯಲ್ಲ ಹಾಗೆ”
ಅಂದಿನಿಂದ ಇಲಿ ತನ್ನ ಗಾತ್ರದ ಬಗ್ಗೆ ಕೀಳರಿಮೆ ವ್ಯಕ್ತಪಡಿಸಲಿಲ್ಲ. ಪ್ರತೀ ಜೀವಿಯಲ್ಲಿಯೂ ಒಂದಲ್ಲ ಒಂದು ವಿಶೇಷತೆ ಇರುತ್ತದೆ ಎಂಬುದನ್ನು ಅದು ಈಗ ಅರ್ಥ ಮಾಡಿಕೊಂಡಿತ್ತು.
ನಮ್ಮ ಬದುಕಿನಲ್ಲೂ ಕೂಡ ನಮ್ಮಿಂದ ಇದು ಸಾಧ್ಯವಿಲ್ಲ ಅಂದುಕೊಂಡು ಪ್ರಯತ್ನಿಸುವುದಕ್ಕೆ ಮೊದಲೇ ಸೋಲನ್ನು ಒಪ್ಪಿಕೊಂಡಿರುತ್ತೇವೆ. ಬೇರೆಯವರು ಬುದ್ಧಿವಂತರು ಹಾಗಾಗಿ ಅವರಿಂದ ಸಾಧ್ಯವಾಯಿತು, ನಮ್ಮಿಂದ ಆಗದು ಎಂದು ನಂಬಿಕೊಂಡಿರುತ್ತೇವೆ. ಇತರರು ಹಿಂಜರಿಯದೇ ಪ್ರಯತ್ನಿಸಿದ್ದರಿಂದ, ಬಿದ್ದರೂ ಎದ್ದು ಮುನ್ನಡೆದಿದ್ದರಿಂದ ಸಾಧಿಸಿದರು ಅನ್ನುವುದನ್ನು ಮರೆತುಬಿಡುತ್ತೇವೆ. ಶೌರ್ಯ ಎಂದರೆ ನಮ್ಮಿಂದ ಅತ್ಯುತ್ತಮವಾದುದು ಏನು ಸಾಧ್ಯವೋ ಅದನ್ನು ಮಾಡುವುದು, ಸ್ವನಂಬಿಕೆಯಿಂದ ಮುಂದುವರಿಯುವುದು. ಕೀಳರಿಮೆಯನ್ನು ಬಿಟ್ಟು ಕೊಂಚ ಆತ್ಮವಿಶ್ವಾಸ, ಚಿಟಿಕೆ ಉತ್ಸಾಹ, ಸ್ವಲ್ಪ ಛಲದಿಂದ ಮುನ್ನಡೆದರೆ ಎಲ್ಲರಿಂದಲೂ ಸಾಧನೆ ಸಾಧ್ಯ.
-ದೀಪಾ ಹಿರೇಗುತ್ತಿ
No comments:
Post a Comment