Wednesday, January 28, 2026

 ಕಥೆ-1019

ನೀರಿನಿಂದ ಬೆಂಕಿ ಹುಟ್ಟಿದ ಚರಿತ್ರೆಯೇ ಇಲ್ಲ.. ಆದರೆ ಆ ತಾಯಿಯ ಕಣ್ಣೀರಿಂದ ಬೆಂಕಿಯೂ ಹುಟ್ಟಿತು, ಯುವರಾಜನೆಂಬ ಚರಿತ್ರೆಯೂ ಸೃಷ್ಠಿಯಾಯಿತು..!

 KGF ಸಿನಿಮಾದಲ್ಲಿ ತಾಯಿಯ ಬಗ್ಗೆ ಕೇಳುವ ಆ ಡೈಲಾಗ್’ಗಳು. ಇವತ್ತಿನ ಕಥಾನಾಯಕಿಯ ಬಗ್ಗೆ ಬರೆಯಲು ಕುಳಿತಾಗ ಮೊದಲು ನೆನಪಾಗಿದ್ದು ಅದೇ ಸಾಲುಗಳು..

ನಿಜ.. ಈ ಜಗತ್ತಿನಲ್ಲಿ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ.. ಭಾರತದ ವಿಶ್ವಕಪ್ ಹೀರೋ ಯುವರಾಜನ ತಾಯಿ..ಶಬ್ನಮ್ ಸಿಂಗ್.. 

ಸಾಮಾನ್ಯ ರೈತ ಕುಟುಂಬದಿಂದ ಬಂದಿದ್ದ ಕ್ರಿಕೆಟಿಗ ಯೋಗರಾಜ್ ಸಿಂಗ್.. ಶಬ್ನಮ್ ಅನುಕೂಲಸ್ಥ ಮನೆಯ ಹೆಣ್ಣು ಮಗಳು.. ಆ ಕಾಲಕ್ಕೆ ಚಂಡೀಗಢದ ಕ್ರಿಕೆಟಿಗನಾಗಿದ್ದ ಯೋಗರಾಜ್ ಸಿಂಗ್’ ಮದುವೆಯಾಗಿದ್ದವರು ಶಬ್ನಮ್ ಸಿಂಗ್.

ಯೋಗರಾಜ್ ಸಿಂಗ್ ಜಮದಗ್ನಿಯಂಥಾ ಗಂಡ.. ಮಹಾ ಮುಂಗೋಪಿ.. ಅಷ್ಟೇ ಕಟ್ಟುನಿಟ್ಟಿನ ಮನುಷ್ಯ.. ಒಂದು ರೀತಿಯಲ್ಲಿ ಬೆಂಕಿ ನವಾಬ.. ಶಬ್ನಮ್ ಹಕ್ಕಿಯಂತೆ ಹಾರಾಡುತ್ತಿರಬೇಕೆಂಬ ಸ್ವತಂತ್ರ ಮನಸ್ಥಿತಿಯ ಹೆಣ್ಣು ಮಗಳು. ಇಬ್ಬರ ಯೋಚನೆಗಳು ಬೇರೆ, ಆದ್ಯತೆಗಳೂ ಬೇರೆ ಬೇರೆ.. ಮದುವೆಯಾದರೂ ಮನಸ್ಸುಗಳು ಒಂದಾಗಲೇ ಇಲ್ಲ. ಈ ಮಧ್ಯೆ ದಂಪತಿಗೆ ಇಬ್ಬರು ಗಂಡು ಮಕ್ಕಳು ಜನಿಸಿದರು. ಅವರಲ್ಲಿ ಒಬ್ಬ ಯುವರಾಜ್ ಸಿಂಗ್. 


ಮಗನನ್ನು ಕ್ರಿಕೆಟಿಗನಾಗಿಸಬೇಕೆಂಬ ಹಠ ತಂದೆಗೆ.. ಆಗಿನ್ನೂ ಯುವಿ 10-11ರ ಪೋರ.. ಕ್ರಿಕೆಟ್ ಆಡಲು ಆಸಕ್ತಿಯೇ ಇರಲಿಲ್ಲ ಹುಡುಗನಿಗೆ. ಟೆನಿಸ್, ಫುಟ್ಬಾಲ್, ಸ್ಕೇಟಿಂಗ್ ಮೇಲೆ ಪ್ರೀತಿ.. ಒಂದು ದಿನ 

ರೋಲರ್ ಸ್ಕೇಟಿಂಗ್ ಅಂಡರ್-14 ಚಾಂಪಿಯನ್’ಷಿಪ್’ನಲ್ಲಿ ಗೆದ್ದ ಚಿನ್ನದ ಪದಕವನ್ನು ಕೊರಳಲ್ಲಿ ಹಾಕಿಕೊಂಡು, ಕೈಯಲ್ಲಿ ಸರ್ಟಿಫಿಕೇಟ್ ಹಿಡಿದು ಅಪ್ಪನ ಮುಂದೆ ಹೋಗಿ ನಿಂತಿದ್ದ ಯುವರಾಜ.


 ‘‘ಅಪ್ಪಾ, ನಾನು ಇವತ್ತು ಚಿನ್ನದ ಪದಕ ಗೆದ್ದಿದ್ದೇನೆ’’ ಎಂದಿದ್ದ. ತಂದೆ ಏನೂ ಮಾತನಾಡಲಿಲ್ಲ.. ಮಗನ ಕೊರಳಲ್ಲಿದ್ದ ಪದಕ ಮತ್ತು ಕೈಯಲ್ಲಿದ್ದ ಸರ್ಟಿಫಿಕೇಟನ್ನು ಕಿತ್ತುಕೊಂಡು ಎಸೆದೇ ಬಿಟ್ಟರು. 


ಮಗನಿಗೆ ಹೇಳಿದ್ದು ಒಂದೇ ಮಾತು.. ‘‘ನಿನ್ನ ನಾಟಕ ಅತಿಯಾಯಿತು.. ಇವತ್ತಿನಿಂದ ನೀನು ಕ್ರಿಕೆಟ್ ಆಡುತ್ತೀಯಾ.. ಕ್ರಿಕೆಟ್ ಮಾತ್ರ..’’ 


ಅದು ಜನವರಿ ತಿಂಗಳು.. ಕೊರೆಯುವ ಚಳಿಯಲ್ಲಿ ಚಂಡೀಗಢ ಹೇಗಿರುತ್ತದೆ ಎಂಬುದು ಅನುಭವಿಸಿದವರಿಗಷ್ಟೇ ಗೊತ್ತು. ಒಂದು ದಿನ ಬೆಳಗ್ಗೆ ಯುವಿ ಮಲಗಿದ್ದ, ಬೆಳಗ್ಗಿನ ಚಳಿಯಲ್ಲಿ ಗಾಢ ನಿದ್ದೆಯಲ್ಲಿದ್ದ.. ತಂದೆ ಬಂದರು.. ‘’ಕ್ರಿಕೆಟ್ ಅಭ್ಯಾಸಕ್ಕೆ ಹೋಗಬೇಕು ಎದ್ದೇಳು’’ ಎಂದರು.. 


ಚಳಿಯಲ್ಲಿ ಮುದುಡಿ ಮಲಗಿದ್ದ ಪುಟ್ಟ ಮಗ ಏಳಲೇ ಇಲ್ಲ. 

ನಾಲ್ಕಾರು ಬಾರಿ ಹೇಳಿದರು.. ಉಹೂಂ.. ಮಗ ಅಲುಗಾಡಲಿಲ್ಲ.. ಅಲ್ಲಿಂದ ತೆರಳಿದ ಅಪ್ಪ ಒಂದು ಬಕೆಟ್ ನೀರಿನೊಂದಿಗೆ ಬಂದು ಮಗನ ಮೇಲೆ ಸುರಿದರು. 11 ವರ್ಷದ ಹುಡುಗ..! ಹೇಗಾಗಿರಬೇಡ… ತಾಯಿಯ ಕರುಳು ಚುರುಕ್ ಎಂದಿತ್ತು. ಗಂಡನೊಂದಿಗೆ ದೊಡ್ಡ ಜಗಳವನ್ನೇ ಆಡಿ ಬಿಟ್ಟರು ಶಬ್ನಮ್ ಸಿಂಗ್.. 


ಚಳಿಯಲ್ಲಿ ನಡುಗುತ್ತಾ ಕೂತಿದ್ದ ಮಗನನ್ನು ನೋಡಿದ ತಂದೆ, ‘ಎದ್ದು ಓಡು’ ಎಂದರು.. ಓಡುತ್ತಿದ್ದ ಮಗನನ್ನು ಬೈಕ್’ನಲ್ಲಿ ಹಿಂಬಾಲಿಸಿದರು ತಂದೆ.. ಆ ದಿನ ಓಡಲು ಶುರು ಮಾಡಿದ ಯುವಿ ನಿಲ್ಲಲೇ ಇಲ್ಲ..’’ ಯೋಗರಾಜ್ ಸಿಂಗ್ ಅವರ ತರಬೇತಿ ಅದೆಷ್ಟು ಕಠೋರವಾಗಿತ್ತು ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ.. 


ಚಿಕ್ಕ ವಯಸ್ಸಿನಿಂದಲೂ ಯುವರಾಜನದ್ದು ಹೋರಾಟದ ಬದುಕು. ತಂದೆ-ತಾಯಿ ಮಧ್ಯೆ ಪ್ರತೀ ದಿನ ಜಗಳ.. ಇನ್ನು ಈ ಮನುಷ್ಯನ ಜೊತೆ ಬಾಳಲು ಸಾಧ್ಯವೇ ಇಲ್ಲ ಎಂದ ಶಬ್ನಮ್ ವಿಚ್ಚೇದನ ಪಡೆಯುತ್ತಾರೆ. 


ಗಂಡನಿಂದ ದೂರವಾದರೂ ಅಪ್ಪನಿಂದ ಮಗನನ್ನು ದೂರ ಮಾಡಲಿಲ್ಲ ಆ ತಾಯಿ.. ತನ್ನ ಮಗ ಒಬ್ಬ ಒಳ್ಳೆಯ ಕ್ರಿಕೆಟಿಗನಾಗಬೇಕೆಂದರೆ ಅವನಿಗೆ ಅಪ್ಪನ ಆಸರೆ ಬೇಕೇ ಬೇಕೆಂದು ಅವರಿಗೆ ಗೊತ್ತಿತ್ತು. ಯೋಗರಾಜ್ ಸಿಂಗ್ ಹಿಡಿದ ಹಠವನ್ನು ಸಾಧಿಸಿ ಬಿಡುವ ಹಠಗಾರ..


ಮಗನ ಪಾಲಿಗಂತೂ ಹಿಟ್ಲರ್ ತಂದೆ.. ಅಂಥಾ ಅಪ್ಪನ ಗರಡಿಯಲ್ಲಿ ಬೆಳೆದ ಯುವಿ ಗಟ್ಟಿಗನಾಗಿ ಬಿಟ್ಟ.. 


ಯುವರಾಜನಿಗೆ ಕ್ರಿಕೆಟ್ ಪಾಠ ಹೇಳಿ ಕೊಟ್ಟವರು ತಂದೆ ಯೋಗರಾಜ್ ಸಿಂಗ್.. ಬದುಕಿನ ಪಾಠ ಕಲಿಸಿದವರು ತಾಯಿ ಶಬ್ನಮ್ ಸಿಂಗ್.. 


ಯೋಗರಾಜ್ ಸಿಂಗ್ ಜೊತೆಗಿನ ದಾಂಪತ್ಯ ಬದುಕಿಗೆ ಎಳ್ಳು ನೀರು ಬಿಟ್ಟ ಶಬ್ನಮ್ ಸಿಂಗ್, ಮಗನ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುತ್ತಾರೆ. ಹಗಲೆಲ್ಲಾ ಅಪ್ಪನ ಗರಡಿಯಲ್ಲಿ ಕ್ರಿಕೆಟ್ ಕಲಿಯುತ್ತಿದ್ದ ಯುವರಾಜನಿಗೆ ರಾತ್ರಿಯಾದರೆ ಅಮ್ಮನ ಮಡಿಲೇ ಆಸರೆ… ಅದೆಂಥಾ ಕಷ್ಟ ಬಂದರೂ ಎದೆಗುಂದದೆ ಎದುರಿಸಿ ನಿಲ್ಲಬಲ್ಲ ಮಗನಾಗಿ ಯುವಿಯನ್ನು ಬೆಳೆಸಿದರು ತಾಯಿ ಶಬ್ನಮ್ ಸಿಂಗ್.. 


ಅಪ್ಪ ಒಂದು ಕಡೆ.. ಅಮ್ಮ ಒಂದು ಕಡೆ.. ಇಬ್ಬರ ಮಧ್ಯೆ ಹೊತ್ತಿಕೊಂಡ ಜ್ವಾಲೆ.. ಆ ಜ್ವಾಲೆಯಿಂದ ಭುಗಿಲೆದ್ದು ನಿಂತ ಜ್ವಾಲಾಮುಖಿ ಯುವರಾಜ್ ಸಿಂಗ್.. 


ಸಾಮಾನ್ಯ ಪೆಟ್ಟುಗಳಿಗೆಲ್ಲಾ ಸೋಲುವವನಲ್ಲ ಅವನು.. ಕುಲುಮೆಯಲ್ಲಿ ಬೆಂದು ಬೆಂದು ಗಟ್ಟಿಯಾಗಿದ್ದವನು ದೇಶಕ್ಕೆ ಅಂಡರ್-19 ವಿಶ್ವಕಪ್ ಗೆದ್ದುಕೊಟ್ಟ.. ಮೊಟ್ಟ ಮೊದಲ ಟಿ20 ವಿಶ್ವಕಪ್ ಭಾರತದ ಮುಡಿಗೇರುವಂತೆ ಮಾಡಿದ. ಮುಂದಿನದ್ದು 2011ರ ವಿಶ್ವಕಪ್. ಅದಕ್ಕೂ ಮೊದಲೇ ಅವನನ್ನು ಕಾಡಿತ್ತು ಕ್ಯಾನ್ಸರ್.. 


2010.. ರಾತ್ರಿ ಮಲಗಿದ್ದವನು ಮಧ್ಯರಾತ್ರಿ ಎದ್ದು ಕುಳಿತಿದ್ದ.. ಹೊಟ್ಟೆಯಲ್ಲಿ ಅಸಾಧ್ಯ ನೋವು.. ಕೆಮ್ಮಿದಾಗ ರಕ್ತ.. ಏನೋ ಎಡವಟ್ಟಾಗಿದೆ ಎಂದು ಗೊತ್ತಾಗಿತ್ತು. ಆದರೆ ಅದು ಕ್ಯಾನ್ಸರ್ ಎಂದು ಅವನಿಗೂ ಗೊತ್ತಿರಲಿಲ್ಲ.. 

ನೋವಿನಲ್ಲೇ 2011ರ ವಿಶ್ವಕಪ್ ಆಡಿದ.. ವಿಶ್ವಕಪ್ ಗೆಲ್ಲಿಸಿದ.. ವಿಶ್ವಕಪ್’ನಲ್ಲಿ 4 ಬಾರಿ ಮ್ಯಾನ್ ಆಫ್ ದಿ ಮ್ಯಾಚ್.. ಸರಣಿಶ್ರೇಷ್ಠ.. ವಿಶ್ವಕಪ್ ಇತಿಹಾಸದಲ್ಲೇ ದಾಖಲಾದ ಅತ್ಯಂತ ಶ್ರೇಷ್ಠ ಆಲ್ರೌಂಡ್ ಆಟವದು. 

ಏನಂದುಕೊಂಡಿದ್ದನೋ ಅದನ್ನು ಸಾಧಿಸಿದ್ದ ಯುವಿ.. ಹೊರಗೆ ಸಂಭ್ರಮ.. ಒಳಗೆ ಅಸಾಧ್ಯ ನೋವು.. 


ತಾಯಿಯೊಂದಿಗೆ ವೈದ್ಯರ ಬಳಿ ಹೋಗಿ ಸ್ಕ್ಯಾನ್ ಮಾಡಿಸಿದಾಗ ಶಬ್ನಮ್ ಸಿಂಗ್ ಒಂದು ಕ್ಷಣ ಗರ ಬಡಿದವರಂತೆ ನಿಂತು ಬಿಟ್ಟರಂತೆ.. ದೇಹದೊಳಗೆ ಗೆಡ್ಡೆ ಬೆಳೆದಿತ್ತು.. ಯುವರಾಜನನ್ನು ಕ್ಯಾನ್ಸರ್ ಆವರಿಸಿಕೊಂಡಿತ್ತು. 


ಅಲ್ಲಿಂದ ಆರಂಭವಾಗಿದ್ದು ಯುವರಾಜನ ಬದುಕಿನಲ್ಲಿ ಮತ್ತೊಂದು ಹೋರಾಟದ ಅಧ್ಯಾಯ. ಮಗನನ್ನು ಚಿಕಿತ್ಸೆಗೆ ಅಮೆರಿಕಗೆ ಕರೆದೊಯ್ಯುತ್ತಾರೆ ಶಬ್ನಮ್ ಸಿಂಗ್.. ತಾಯಿಯ ಮಡಿಲಲ್ಲಿ ಮತ್ತೊಮ್ಮೆ ಮಗುವಾಗಿ ಬಿಟ್ಟ ಯುವಿ. ಆ ಟ್ರೀಟ್ಮೆಂಟಾ.. ಆ ಕೀಮೋ… ಪ್ರಾಣವನ್ನೇ ತೆಗೆದು ಬಿಡುವಂಥಾ ನೋವು.. ಆ ದಿನಗಳಲ್ಲಿ ಯುವಿ ಜೊತೆಗಿದ್ದದ್ದು ಒಂದೇ ಧೈರ್ಯ. ಆ ಧೈರ್ಯ ತಾಯಿ.. ಮಗನನ್ನು ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡುತ್ತಾರೆ ಶಬ್ನಮ್ ಸಿಂಗ್. 

ದೇಹದೊಳಗೆ ಕ್ಯಾನ್ಸರ್ ಇಂಚಿಂಚೂ ಸಾಯಿಸುತ್ತಿದ್ದಾಗ 

ನೀನು ಮತ್ತೆ ಭಾರತ ಪರ ಆಡುವೆ ಎಂದು ಯುವಿಯನ್ನು ಪ್ರೇರೇಪಿಸಿದವರು ಆ ತಾಯಿ.. 

ಮಗನನ್ನು ಮರಣಶಯ್ಯೆಯಿಂದ ಮರಳಿ ಕರೆ ತಂದವರು ಆ ತಾಯಿ.. 

ಯುವರಾಜನೆಂಬ ಕ್ರಿಕೆಟ್ ಯೋಧನಿಗೆ ಜನ್ಮಕೊಟ್ಟ, ಪುನರ್ಜನ್ಮ ಕೊಟ್ಟ ಆ ಮಹಾತಾಯಿ. 

ಹೊಟ್ಟೆಯಲ್ಲಿ ಸಾಕಷ್ಟು ನೋವಿದ್ದಾಗಲೂ ದೇಶದ ಪರವಾಗಿ ಆಡಿ ಭಾರತಕ್ಕೆ ವಿಶ್ವ ಕಪ್ ತಂದುಕೊಡುವಲ್ಲಿ ಪ್ರಮುಖವಾಗಿ ಪಾತ್ರವಹಿಸಿದರು... ಕ್ರಿಕೆಟ್ ಇತಿಹಾಸ ಸೃಷ್ಟಿಸಿದ..


-ಸುದರ್ಶನ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು