Monday, March 16, 2026

 ಕಥೆ-1062

ಸಮಸ್ಯೆಯಿಂದ ಕೂಡ ಹೊರ ಬರಬಹುದು


ಒಂದು ರಾಜ್ಯದಲ್ಲಿ ಒಬ್ಬ ಸಣ್ಣ ಹುಡುಗ ತುಂಬಾ ಬುದ್ಧಿವಂತ ಇರ್ತಾನೆ. ಆ ಹುಡುಗನ ಅಪ್ಪನನ್ನ ಆ ರಾಜ್ಯದ ರಾಜ ಕರೆದು ಹೇಳ್ತಾನಂತೆ ನಿನ್ನ ಮಗ ತುಂಬಾ ಬುದ್ಧಿವಂತ ಇದ್ದಾನೆ ಅವನು ನನ್ನ ಜೊತೆ ಇರಬೇಕು ಅವನನ್ನ ನನ್ನ ವಶಕ್ಕೆ ಕೊಟ್ಟುಬಿಡು ಅಂತ. ಆ ಹುಡುಗನ ಅಪ್ಪ ತುಂಬಾ ಬೇಜಾರು ಮಾಡ್ಕೊಂಡು ಮನೆಗೆ ಬಂದು ಆ ಹುಡುಗನಿಗೆ ವಿಚಾರ ಹೇಳ್ತಾನೆ. ಆಗ ಆ ಹುಡುಗ ಹೇಳ್ತಾನಂತೆ ಅಷ್ಟೇನಾ ಅಪ್ಪ ನಡಿರಿ, ನಾವು ರಾಜನ ಹತ್ರ ಹೋಗೋಣ ರಾಜನ ಹತ್ರ ನಾನು ಮಾತಾಡ್ತೀನಿ ಅಂತ. ಅರಮನೆಗೆ ಬಂದು ಆ ಹುಡುಗ ರಾಜನ ಹತ್ರ ಮಾತಾಡಿ ನಾನು ನನ್ನ ಅಪ್ಪನ ಜೊತೆ ಇರಬೇಕು ನಮ್ಮಿಬ್ಬರನ್ನು ದೂರ ಮಾಡಬೇಡಿ ಅಂತ ವಿನಂತಿಸುತ್ತಾನೆ..

ಆ ತುಂಬಿದ ಸಭೆಯಲ್ಲಿ ಆ ರಾಜನ ಮಂತ್ರಿ ಎರಡು ಚೀಟಿಗಳನ್ನ ತಂದು ಇದರಲ್ಲಿ ಒಂದು ಚೀಟಿಯಲ್ಲಿ ರಾಜನ ಹೆಸರಿದೆ ಇನ್ನೊಂದು ಚೀಟಿಯಲ್ಲಿ ನಿನ್ನ ಹೆಸರಿದೆ ನೀನು ಇವೆರಡರಲ್ಲಿ ಯಾವುದಾದ್ರೂ ಒಂದನ್ನೇ ಎತ್ತು ನಿನ್ನ ಹೆಸರು ಬಂದ್ರೆ ನೀನು ಹೇಳಿದ ಹಾಗೆ ನಾವು ಕೇಳ್ತೀವಿ ಇಲ್ಲಾ ರಾಜನ ಹೆಸರು ಬಂದ್ರೆ ರಾಜ ಹೇಳಿದ ಹಾಗೆ ನೀನು ಕೇಳಬೇಕು ಅಂತಾನೆ.. ಆ ಹುಡುಗ ಮನಸಲ್ಲೇ ಅಂದ್ಕೋತಾನಂತೆ ಅರಮನೆಯಲ್ಲಿ ರಾಜನ ಮಾತನ್ನ ಬಿಟ್ರೆ ಬೇರೆ ಯಾರ ಮಾತುಕೂಡ ನಡೆಯೋದಿಲ್ಲ, ಈ ಮಂತ್ರಿ ಪಕ್ಕ ಎರಡು ಚೀಟಿಯಲ್ಲೂ ಕೂಡ ರಾಜನ ಹೆಸರನ್ನೇ ಬರ್ಕೊಂಡು ಬಂದಿರ್ತಾನೆ, ನನ್ನನ್ನ ಇಲ್ಲಿ ಸಿಲುಕಿ ಹಾಕಿಸ್ತಾನೆ ಅಂತ, ಆಗ ಆ ಹುಡುಗ ಶಾಂತವಾಗಿ ಯೋಚನೆ ಮಾಡ್ತಾನೆ ಆ ಎರಡು ಚೀಟಿಯಲ್ಲಿ ಒಂದು ಚೀಟಿನ ತೆಗೆದು ಅದನ್ನ ಓಪನ್ ಮಾಡದೆ ಬಾಯಲ್ಲಿ ಹಾಕೊಂಡು ತಿಂದು ನುಂಗಿಬಿಡ್ತಾನೆ ಆಮೇಲೆ ಆ ಹುಡುಗ ಹೇಳ್ತಾನೆ ನನ್ನ ಚೀಟಿಯನ್ನ ನಾನು ಆಯ್ಕೆ ಮಾಡಿಕೊಂಡ ಆಯ್ತು ಈಗ ಆ ಚೀಟಿನ ತೆಗೆರಿ ಅದರಲ್ಲಿ ರಾಜನ ಹೆಸರಿದ್ರೆ ನಾನು ತಿಂದಂತಹ ಚೀಟಿಯಲ್ಲಿ ನನ್ನ ಹೆಸರೇ ಇರುತ್ತೆ, ನಾನು ಹೇಳಿದಾಗೆ ನೀವು ಕೇಳಬೇಕು ಅಂತ... ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗುತ್ತಾನೆ... 

ಒಂದು ಕಷ್ಟದ ಸನ್ನಿವೇಶದಲ್ಲಿ ನಾವು ಸಿಗಾಕೊಂಡಾಗ ಗಾಬರಿ ಮಾಡಿಕೊಳ್ಳದೆ ತಾಳ್ಮೆಯಿಂದ ಯೋಚನೆ ಮಾಡಿದಾಗ ಸಮಸ್ಯೆಯಿಂದ ಕೂಡ ಹೊರ ಬರಬಹುದು ಅನ್ನೋದನ್ನ ಈ ಒಂದು ಸಣ್ಣ ಕಥೆಯಿಂದ ನಾವು ಅರ್ಥ ಮಾಡ್ಕೋಬಹುದು..

ಕೃಪೆ :ನೆಟ್

Saturday, March 14, 2026

 ಕಥೆ-1061

ದ್ವೀಪದ ಆಕರ್ಷಣೆ


ಒಂದು ಹಡಗಿನಲ್ಲಿ ನೂರಾರು ಜನರು ಕುಳಿತು ಸಾಗರದಲ್ಲಿ ಪ್ರಯಾಣ ಮಾಡುತ್ತಿದ್ದರು. ಮಧ್ಯದಲ್ಲಿ ಒಂದು ಸುಂದರವಾದ ನಡುಗಡ್ಡೆ ಬಂದಾಗ ಎಲ್ಲರೂ ನೋಡಲೆಂದು ಅಲ್ಲಿಗೆ ಹೋದರು. ಆ ನಡುಗಡ್ಡೆಯಲ್ಲಿ ಎಲ್ಲಿ ನೋಡಿದಲ್ಲಿ ಮುತ್ತು ರತ್ನಗಳು ರಾಶಿ ರಾಶಿಯಾಗಿ ಬಿದ್ದಿದ್ದವು.


ಆ ಹಡಗಿನ ಯಜಮಾನ ಮೊದಲೇ ಹೇಳಿದ್ದೇನೆಂದರೆ-"ಆ ನಡುಗಡ್ಡೆಯಲ್ಲಿರುವುದನ್ನೆಲ್ಲ ನೋಡಿ ಸುಮ್ಮನೆ ಬರಿಗೈಯಿಂದ ಬರಬೇಕು. ಏನನ್ನೂ ನೀವು ತರಬಾರದು. ಹೊತ್ತು ಮುಳುಗುವುದರೊಳಗಾಗಿ ಹಡಗಿನಲ್ಲಿ ಮತ್ತೆ ಸೇರಬೇಕು."


ಅದೇ ಪ್ರಕಾರ ಎಲ್ಲರೂ ಸ್ವರ್ಗ ಸದೃಶ್ಯವಾದ ಆ ನಡುಗಡ್ಡೆಯ ವೈಭವವನ್ನೆಲ್ಲ ನೋಡಿ ಸಂತಸದಿಂದ ಬಂದು ಸರಿಯಾದ ಸಮಯಕ್ಕೆ ಹಡಗನ್ನೇರಿ ಕುಳಿತುಕೊಂಡರು. ಒಬ್ಬ ಜಿಪುಣ ಮಹಾಶಯ ಮಾತ್ರ ಇಂಥಾ ವೈಭವ ಸಿರಿಸಂಪತ್ತು ಇನ್ನೆಲ್ಲಿ ಸಿಗುತ್ತದೆಂದು ಅಲ್ಲಿಯೇ ಉಳಿದುಬಿಟ್ಟ. ಇತ್ತ ಆತ ಕುಳಿತು ಬಂದಿದ್ದ ಹಡಗು ಹೊರಟು ಹೋಯಿತು. ಆ ಬಳಿಕ ಅನ್ನ, ನೀರು ಏನೂ ಇಲ್ಲದೆ ಆ ಮನುಷ್ಯ ಅಲ್ಲೇ ಅಸುನೀಗಿದ! ಮುಂದಿನ ವರುಷ ಅದೇ ಹಡಗು ಪ್ರವಾಸಕ್ಕೆಂದು ಬಂದಾಗ ಅಲ್ಲಿ ಜಿಪುಣನ ಎಲುಬಿನ ಹಂದರ ಮಾತ್ರ ಇತ್ತು


ಮಿತಿಯಲ್ಲಿರುವ ಆಸೆ ಆಶೀರ್ವಾದ, 

ದರಾಸೆ ಮನುಷ್ಯನನ್ನು ಅಂಧನನ್ನಾಗಿಸುತ್ತದೆ. ಅತಿಯಾದ ದುರಾಸೆ ಕೊನೆಗೆ ವಿನಾಶವನ್ನು ತರುತ್ತದೆ.

-ಶ್ರೀ ಸಿದ್ದೇಶ್ವರ ಸ್ವಾಮೀಜಿ

Friday, March 13, 2026

 ಕಥೆ-1060

ಆರಡಿ ಭೂಮಿ ಮಾತ್ರ

https://basapurs.blogspot.com

ಲಿಯೋ ಟಾಲ್ ಸ್ಟಾಯ್ ರಷ್ಯಾದ ಶ್ರೀಮಂತ ಕುಟುಂಬವೊಂದರಲ್ಲಿ ಸುಮಾರು 200 ವರ್ಷಗಳ ಹಿಂದೆ ಜನಿಸಿದರು. ಬಾಲ್ಯದಲ್ಲೇ ತಂದೆ ತಾಯಿಯರನ್ನು ಕಳೆದುಕೊಂಡ ಅವರಿಗೆ ಕುಟುಂಬದ ಆಸ್ತಿ ಹಂಚಿಕೆಯಾದಾಗ ಮನೆತನದಿಂದ ಬಳುವಳಿಯಾಗಿ ಬಂದದ್ದು ಸುಮಾರು 5400 ಎಕರೆ ಭೂಮಿ, ಮತ್ತು 330 ಜೀತದಾಳುಗಳು.! 


ಆದರೆ ಟಾಲ್ ಸ್ಟಾಯ್ ಅವೆಲ್ಲವನ್ನೂ ತ್ಯಜಿಸಿ ಸಾಮಾನ್ಯ ಕೃಷಿಕನಾಗಿ ಗ್ರಾಮೀಣ ಜನರ ಉದ್ಧಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟರು, ಮುಂದೆ ಲೇಖಕನಾಗಿ ಜಗತ್ತಿನ ಅಸಂಖ್ಯಾತ ಶ್ರೀಮಂತರಿಗೆ ಹೇಗೆ ಬದುಕಬೇಕು? ಬದುಕಿನ ಅಂತಿಮ ಸತ್ಯವೇನು? ಎಂಬುದನ್ನು ಮನವರಿಕೆ ಮಾಡಿಕೊಟ್ಟರು. 


ಅವರ "ಒಬ್ಬ ಮನುಷ್ಯನಿಗೆ ಎಷ್ಟು ಭೂಮಿ ಬೇಕು?" ಎಂಬ ಸಣ್ಣ ಕಥೆಯ ಸಾರಾಂಶ ಹೀಗಿದೆ. 

  

ಕಥೆಯ ನಾಯಕ ಪಾಹೋಮ್ ಒಂದು ಹಳ್ಳಿಯಲ್ಲಿ ಸುಖೀ ಜೀವನ ನಡೆಸುತ್ತಿದ್ದ ರೈತ. ಅವನು ತನ್ನ ಬದುಕಿನ ಬಗ್ಗೆ ತೃಪ್ತನಾಗಿರುತ್ತಾನೆ, ಆದರೆ ಒಮ್ಮೆ "ನನ್ನ ಬಳಿ ಸಾಕಷ್ಟು ಭೂಮಿ ಇದ್ದರೆ ನಾನು ಸೈತಾನನಿಗೂ ಹೆದರುವುದಿಲ್ಲ" ಎಂದು ಅಂದುಕೊಳ್ಳುತ್ತಾನೆ. ಅವನ ಈ ಮಾತನ್ನು ಕೇಳಿದ ಸೈತಾನನು ಅವನಿಗೆ ಹೆಚ್ಚು ಹೆಚ್ಚು ಭೂಮಿಯ ಆಸೆ ತೋರಿಸಿ ಪರೀಕ್ಷಿಸಲು ನಿರ್ಧರಿಸುತ್ತಾನೆ.


ಪಾಹೋಮ್ ಹೊಸ ಹೊಸ ಜಾಗಗಳಿಗೆ ಹೋಗಿ ಭೂಮಿ ಖರೀದಿಸುತ್ತಾ ಶ್ರೀಮಂತನಾಗುತ್ತಾನೆ. ಆದರೂ ಅವನಿಗೆ ತೃಪ್ತಿ ಸಿಗುವುದಿಲ್ಲ. ಕೊನೆಗೆ ಅವನು ಬಶ್ಕಿರ್ ಎಂಬ ಜನರ ಪ್ರದೇಶಕ್ಕೆ ಹೋಗುತ್ತಾನೆ. ಅಲ್ಲಿನ ಮುಖ್ಯಸ್ಥ ಒಂದು ವಿಚಿತ್ರ ಆಫರ್ ನೀಡುತ್ತಾನೆ: "ಒಂದು ದಿನದಲ್ಲಿ ನೀನು ನಡೆದು ಗುರುತು ಹಾಕಿದಷ್ಟು ಭೂಮಿ ನಿನಗೆ ಸೇರುತ್ತದೆ. ಆದರೆ ಸೂರ್ಯ ಮುಳುಗುವ ಮೊದಲು ನೀನು ಎಲ್ಲಿಂದ ಹೊರಟಿದ್ದೆಯೋ ಅದೇ ಜಾಗಕ್ಕೆ ವಾಪಸ್ ಬರಬೇಕು.!"  


ಹೆಚ್ಚು ಭೂಮಿಯನ್ನು ಪಡೆಯುವ ಆಸೆಯಿಂದ ಪಾಹೋಮ್ ಬಹಳ ದೂರ ಓಡುತ್ತಾನೆ. ಸೂರ್ಯ ಮುಳುಗುವ ಸಮಯ ಹತ್ತಿರವಾದದ್ದನ್ನು ಕಂಡು ಗಾಬರಿಯಿಂದ ವೇಗವಾಗಿ ತಾನು ಹಿಂದೆ ಆರಂಭಿಸಿದ ಜಾಗಕ್ಕೆ ಓಡಿ ಬಂದು ತಲುಪುತ್ತಾನೆ. ಆದರೆ ಅತಿಯಾದ ಆಯಾಸ ಮತ್ತು ಒತ್ತಡದಿಂದಾಗಿ ಅಲ್ಲಿಯೇ ಕುಸಿದು ಬಿದ್ದು ರಕ್ತ ವಾಂತಿ ಮಾಡಿಕೊಂಡು ಸಾಯುತ್ತಾನೆ. ಕೊನೆಯಲ್ಲಿ ಅವನ ಸೇವಕನು ಪಾಹೋಮ್‌ನನ್ನು ಹೂಳಲು ಒಂದು ಸಣ್ಣ ಗುಂಡಿ ತೋಡುತ್ತಾನೆ. 


ಆಗ ಟಾಲ್ ಸ್ಟಾಯ್ ಹೇಳುವ ಮರ್ಮದ ಮಾತು:

"ಅವನಿಗೆ ಬೇಕಾಗಿದ್ದು ಕೇವಲ ಆರಡಿ ಭೂಮಿ ಮಾತ್ರ!" (ತನ್ನ ದೇಹವನ್ನು ಹೂಳಲು ಬೇಕಾದಷ್ಟು ಜಾಗ).

ಕೃಪೆ: ನೆಟ್

Tuesday, March 10, 2026

 ಕಥೆ-1059

ಭಾರತದ "ಕ್ಷೀರ ಕ್ರಾಂತಿ'


ಭಾರತದ "ಕ್ಷೀರ ಕ್ರಾಂತಿಯ ಪಿತಾಮಹ" ವರ್ಗೀಸ್ ಕುರಿಯನ್ ರವರ ಅನನ್ಯ ಕೊಡುಗೆಯ ಪರಿಣಾಮವಾಗಿ ಇಂದು ನಮ್ಮ ದೇಶವು ಜಾಗತಿಕವಾಗಿ ಶೇ 25 ರಷ್ಟು ಹಾಲು ಉತ್ಪಾದಿಸುವ ದೇಶವಾಗಿ ಮೊದಲ ಸ್ಥಾನ ಹೊಂದಲು ಸಾಧ್ಯವಾಗಿದೆ.


ಕುರಿಯನ್ ರವರು ಹುಟ್ಟಿದ್ದು ಕೇರಳದ ಕೋಝಿಕೋಡ್ (ಅಂದರೆ ಕ್ಯಾಲಿಕಟ್) ನಲ್ಲಿ. ಭೌತಶಾಸ್ತ್ರದಲ್ಲಿ ಪದವಿಯ ನಂತರ B.E. ( ಮೆಕ್ಯಾನಿಕಲ್ ಇಂಜಿನಿಯರಿಂಗ್) ಮಾಡಿದರು. ಬಳಿಕ ಜಮ್ ಷೆಡ್ ಪುರದ ಟಾಟಾ ಸ್ಟೀಲ್ ತಾಂತ್ರಿಕ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಮೆಟಲರ್ಜಿಕಲ್ ಇಂಜಿನಿಯರಿಂಗ್ ನಲ್ಲಿ ಎಂ.ಎಸ್ಸಿ. ಮಾಡಲು ಸ್ಕಾಲರ್ಶಿಪ್ ಪಡೆದುಕೊಂಡು ಅಮೇರಿಕಕ್ಕೆ ತೆರಳಿದರು.


ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (GCMMF)ದ ಸಂಸ್ಥಾಪಕ ಅಧ್ಯಕ್ಷರಾಗಿ, ಕುರಿಯನ್ ಅವರು ಅಮುಲ್ ಡೈರಿ ಉತ್ಪನ್ನಗಳ ಬ್ರಾಂಡ್ ನ ಸೃಷ್ಟಿ ಮತ್ತು ಯಶಸ್ಸಿಗೆ ಕಾರಣರಾದರು. 


ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದಲ್ಲಿ ಅವರ ಸಾಧನೆ ಕಂಡು ರಾಷ್ಟ್ರೀಯ ಮಟ್ಟದಲ್ಲಿ ನ ಅಮುಲ್ ಯಶಸ್ಸನ್ನು ಪುನರಾವರ್ತಿಸಲು, 1965 ರಲ್ಲಿ ಅವರನ್ನು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ(NDDB) ಯ ಸ್ಥಾಪಕ ಅಧ್ಯಕ್ಷರನ್ನಾಗಿ ನೇಮಿಸಿದರು. ಕೆಲವು ವರ್ಷಗಳ ನಂತರ, ಕುರಿಯನ್ ರ ಮುಂದಾಳುತನದಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು ಆಪರೇಷನ್ ಫ್ಲಡ್ (ಅಥವಾ ವೈಟ್ ರೆವಲ್ಯೂಷನ್-ಕ್ಷೀರಕ್ರಾಂತಿ ) ಎಂಬ ಜಗತ್ತಿನ ಅತಿ ದೊಡ್ಡ ಡೈರಿ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿತು. 


ಆಪರೇಷನ್ ಫ್ಲಡ್ ಯೋಜನೆಯು ಭಾರತವನ್ನು ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕ ದೇಶವನ್ನಾಗಿ ಮಾಡಿತು.


"ಭಾರತದ ಹಾಲು ವಿತರಕ" ಮತ್ತು "ಕ್ಷೀರ ಕ್ರಾಂತಿಯ ಪಿತಾಮಹ" ಎಂದು ಬಣ್ಣಿಸಲ್ಪಟ್ಟ ಕುರಿಯನ್ ರವರು ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ '"ಪದ್ಮ ವಿಭೂಷಣ" ಪ್ರಶಸ್ತಿ, ವಿಶ್ವ ಆಹಾರ ಪ್ರಶಸ್ತಿ ಮತ್ತು ಮ್ಯಾಗ್ಸೇಸೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.


ಅತ್ಯಂತ ಕುಶಲ ಹಾಗೂ ಶ್ರಮಭರಿತ ದುಡಿಮೆಗೆ ಹೆಸರಾದ ವರ್ಗಿಸ್ ಕುರಿಯನ್ ರವರು ಯಾವುದೇ ಪ್ರತೀಕೂಲ ಪರಿಸ್ಥಿತಿ ಇದ್ದಾಗ್ಯೂ ಒಬ್ಬ ವ್ಯಕ್ತಿ ಇಡೀ ಸಮಾಜಕ್ಕೆ ದೇಶಕ್ಕೆ ದಾರಿ ದೀಪವಾಗಬಹುದು..

Monday, March 9, 2026

 ಕಥೆ-1058

ಪೋಲಿಯೋ ಔಷಧಿ


ಈ ಭೂಮಿಯ ಮೇಲಿನ ಕೊಟ್ಯಂತರ ಮಕ್ಕಳ ಪಾಲಿಗೆ "ಸಂಜೀವಿನಿ" ಯಾಗಿರುವ ಫೋಲಿಯೋ ಹನಿಗಳನ್ನು ಕೊಡುಗೆಯಾಗಿ ಕೊಟ್ಟು ಹೋದ ಮಹಾನುಭಾವ ವೈದ್ಯ ವಿಜ್ಞಾನಿ ಜೋನಾಸ್ ಸಾಲ್ಕ್.


1950ರ ದಶಕದಲ್ಲಿ ಅಣು ಬಾಂಬ್ ನಷ್ಟೇ ವಿನಾಶಕಾರಿ ಎಂಬ ಅಪಖ್ಯಾತಿ ಗಳಿಸಿದ್ದ ಫೋಲಿಯೋ ರೋಗಕ್ಕೆ ಚುಚ್ಚು ಮದ್ದು ಕಂಡು ಹಿಡಿದಿದ್ದು ಇವರ ವಿದ್ಯೆ-ಬುದ್ದಿವಂತಿಕೆಗೆ ಸಾಕ್ಷಿಯಾದರೆ, ತಾವು ಕಂಡು ಹಿಡಿದ ಈ ಚುಚ್ಚು ಮದ್ದಿಗೆ ಪೇಟೆಂಟ್ ಪಡೆಯದೇ "ಯಾರಾದರು, ಯಾವ ದೇಶವಾದರೂ ಪುಕ್ಕಟೆಯಾಗಿ ಈ ಔಷಧಿಯನ್ನು ಬಳಸಿಕೊಳ್ಳಿ, ಇದಕ್ಕೆ ನನ್ನ ಅನುಮತಿ ಬೇಕಿಲ್ಲ" ಎಂದದ್ಡು ಅವರಲ್ಲಿದ್ದ ಮಾನವೀಯ ಕಳಕಳಿಯನ್ನು ತೋರಿಸುತ್ತದೆ.

 

"ನೂರಾರು ಕೋಟಿ ಸಂಪಾದಿಸಬಹುದಾಗಿದ್ದ ಈ ಲಸಿಕೆಗೆ ನೀವು ಏಕೆ ಪೇಟೆಂಟ್ ಪಡೆಯಲಿಲ್ಲ?" ಎಂದು ಯಾರೋ ಕೇಳಿದ ಪ್ರಶ್ನೆಗೆ ಜೋನಾಸ್ ರವರ ಉತ್ತರ ಹೀಗಿತ್ತಂತೆ..


"ಸೂರ್ಯನೂ ತನ್ನ ಬೆಳಕಿಗೆ ಪೇಟೆಂಟ್ ಪಡೆದರೆ ಏನು ಮಾಡಬೇಕು?" ಎಂದದ್ದು ಅವರಲ್ಲಿನ ವಿಶ್ವಮಾನವ ಪ್ರಜ್ಞೆಗೆ ಸಾಕ್ಷಿ.

Saturday, March 7, 2026

 ಕಥೆ-1057

ಆಲೋಚಿಸಿ ತೀರ್ಮಾನಿಸಿ ಅಪಾರ ಲಾಭ ಕಟ್ಟಿಟ್ಟಬುತ್ತಿ…


ಸನ್ಯಾಸಿಯೊಬ್ಬ ಏಕಾಂಗಿಯಾಗಿ ಧ್ಯಾನಮಾಡಬೇಕೆಂದು ತನ್ನ ಆಶ್ರಮದಿಂದ ದೂರಹೋಗಲು ನಿರ್ಧರಿಸುತ್ತಾನೆ. ಏಕೆಂದರೆ ಆತ ಬಹುಕೋಪಿಷ್ಟ. ಆಶ್ರಮದಲ್ಲಿ ಆತನ ಧ್ಯಾನಕ್ಕೆ ತೊಂದರೆಯಾಗುತ್ತಿರುತ್ತದೆ. ಯಾರಾದರೂ ಬರುವುದು, ಈತ ಅವರ ಮೇಲೆ ಕೋಪಗೊಳ್ಳುವುದು ನಡೆಯುತ್ತಲೇ ಇರುತ್ತದೆ. ದೋಣಿಯನ್ನೇರಿ ಕೆರೆಯ ನಡುವೆ ನಿಲ್ಲಿಸಿ ಕಣ್ಣುಮುಚ್ಚಿ ಧ್ಯಾನಕ್ಕೆ ತೊಡಗುತ್ತಾನೆ. ಕೆಲವು ಗಂಟೆಗಳು ನಿಶ್ಶಬ್ದವಾಗಿ ಸರಿದುಹೋಗುತ್ತವೆ. ಇದ್ದಕ್ಕಿದ್ದಂತೆ ಇನ್ನೊಂದು ದೋಣಿ ಬಂದು ಸನ್ಯಾಸಿಯ ದೋಣಿಗೆ ಡಿಕ್ಕಿಹೊಡೆದ ಅನುಭವವಾಗುತ್ತದೆ. ಕಣ್ಣುಮುಚ್ಚಿದ್ದ ಸನ್ಯಾಸಿಗೆ ತನ್ನ ಕೋಪ ಹೆಚ್ಚಾಗುತ್ತಿರುವ ಅನುಭವವಾಗುತ್ತದೆ. ಏಕಾಗ್ರತೆಗೆ ಭಂಗ ತಂದ ದೋಣಿಯಾತನನ್ನು ಚೆನ್ನಾಗಿ ಬೈದುಬಿಡಬೇಕು ಎಂದುಕೊಳ್ಳುತ್ತ ಸಿಟ್ಟಿನಿಂದ ಕಣ್ಣುಬಿಡುತ್ತಾನೆ. ಆದರೆ, ಎದುರಿನ ದೋಣಿ ಖಾಲಿ ಇರುತ್ತದೆ. ನಾವಿಕನಿಲ್ಲದ ಆ ದೋಣಿ ಹಗ್ಗ ಬಿಚ್ಚಿಹೋಗಿ ತಾನಾಗಿಯೇ ತೇಲುತ್ತ ತೇಲುತ್ತ ಬಂದು ಈ ದೋಣಿಗೆ ಡಿಕ್ಕಿ ಹೊಡೆಯಿತು.


ಆ ಸಂನ್ಯಾಸಿಗೆ ಜ್ಞಾನೋದಯವಾಗುತ್ತದೆ. ‘ಕೋಪವೆಂಬುದು ತನ್ನೊಳಗೇ ಇದೆಯೇ ಹೊರತು ಹೊರಗಡೆಯಿಂದ ಬರುವುದಲ್ಲ; ಹೊರಗಡೆಯ ವಸ್ತುವೊಂದು ತಾಕುವುದರಿಂದ ತನ್ನೊಳಗಿರುವ ಕೋಪ ಜಾಗೃತಗೊಳ್ಳುತ್ತದೆ’ ಎಂಬ ಸತ್ಯವನ್ನು ಆತ ಅರಿತುಕೊಳ್ಳುತ್ತಾನೆ. ಆಗಿನಿಂದ ಆತ ಯಾರಾದರೂ ಕಿರಿಕಿರಿಯಾಗುವಂತೆ ವರ್ತಿಸಿದರೆ, ಕೋಪ ಬರುವಂತೆ ನಡೆದುಕೊಂಡರೆ ತನಗೆ ತಾನೇ ಹೇಳಿಕೊಳ್ಳುತ್ತಿದ್ದ- ‘ಅವರೊಂದು ಖಾಲಿ ದೋಣಿಯಂಥವರು, ಕೋಪ ನನ್ನೊಳಗೇ ಇದೆ’ ಅಂತ.


ಇದು ಆ ಸಂನ್ಯಾಸಿಯ ಸಮಸ್ಯೆ ಮಾತ್ರವಲ್ಲ, ನಮ್ಮೆಲ್ಲರ ಸಮಸ್ಯೆ. ನಾವು ತಲ್ಲಣಗೊಳ್ಳುವುದು ಯಾವಾಗ? ಮನಸ್ಸಿಗೆ ಕಿರಿಕಿರಿಯಾದಾಗ. ಆದರೆ ಕಿರಿಕಿರಿ ಮಾಡಿಕೊಳ್ಳುವುದರಿಂದ, ಹತಾಶರಾಗಿ ತಲೆಮೇಲೆ ಕೈಹೊತ್ತು ಕೂರುವುದರಿಂದ ಸಮಸ್ಯೆಯ ಬೆಟ್ಟ ಒಂದಿಂಚೂ ಕರಗುವುದಿಲ್ಲ. ನಾವು ಬಯಸಲಿ ಬಿಡಲಿ ಕೆಲವು ಘಟನೆಗಳು ತಮ್ಮಷ್ಟಕ್ಕೆ ತಾವೇ ನಡೆಯುತ್ತಿರುತ್ತವೆ. ನಮ್ಮ ಕೈಮೀರಿದ ಘಟನೆಗಳು ನಡೆದಾಗ ಅವನ್ನು ಹೇಗೆ ಸ್ವೀಕರಿಸುತ್ತೇವೆ ಎಂಬುದನ್ನಾಧರಿಸಿ ಅದರ ಪರಿಣಾಮದ ತೀವ್ರತೆ ಮತ್ತು ನಮ್ಮ ವ್ಯಕ್ತಿತ್ವ ನಿರ್ಧರಿಸಲ್ಪಡುತ್ತವೆ.

ಕೃಪೆ: ದೀಪಾ ಹಿರೇಗುತ್ತಿ

 ಕದೆ- 1056

ಅವಶ್ಯಕತೆಗಳನ್ನು ನೀಗಿಸಿಕೊಳ್ಳಲು ಕಷ್ಟಪಡಬೇಕು.

                                                           ಎಷ್ಟು ಅದ್ಭುತವಾದ ಪೋಸ್ಟಿಂಗ್ ಇದು ಎಲ್ಲರೂ ತಪ್ಪದೇ ಓದಿರಿ….. ಈ ಕಥೆಯನ್ನು ಓದಿದ ಕೆಲವರಲ್ಲಾದರೂ ಬದಲಾವಣೆ ಯಾಗುತ್ತದೆ….*


ನಿಜವಾಗಿಯೂ ಇದೊಂದು ಕಣ್ಣು ತೆರೆಸುವಂತಹ ಅದ್ಭುತವಾದ ನೀತಿಕಥೆ. ಒಂದಾನೊಂದು ನಗರದಲ್ಲಿ ಲಕ್ಷ್ಮೀಪತಿ ಎಂಬ ವ್ಯಕ್ತಿ ಇದ್ದನು. ಆತನಿಗೆ ಒಂದು ಸಂಕಲ್ಪವಿದೆ. ಅವರ ಮನೆಯ ಹತ್ತಿರದಲ್ಲಿ ಒಂದು ಸುಂದರವಾದ ಭವನವಿದೆ. ಯಾರದು ಆ ಮನೆ ಎಂದು ಕೇಳಿದರೆ ಯಾರೋ ಕೋಟ್ಯಾಧಿಪತಿಯ ಮನೆ ಎಂಬ ಉತ್ತರ ಬರುತ್ತದೆ. ಆಗ ಅಂದು ಕೊಳ್ಳುತ್ತಾನೆ ಈ ನಗರದಲ್ಲಿರುವ ಕೋಟ್ಯಾಧಿಪತಿಗಳ ಸಾಲಿನಲ್ಲಿ ತಾನೂ ಸೇರಬೇಕು ಎಂದು. ಅದಕ್ಕಾಗಿ ಆತನು ಯುವಕನಾಗಿದ್ದಾಗಿನಿಂದಲೂ ತುಂಬಾ ಕಷ್ಟಪಡುತ್ತಿದ್ದನು. ಹಗಲು ರಾತ್ರಿ ದುಡಿಯುತ್ತಿದ್ದನು. ಸಂಪಾದನೆ ಮಾಡುವುದೇ ಸರ್ವಸ್ವವೆಂದು ಭಾವಿಸಿ ದುಡಿಯುತ್ತಿದ್ದನು.


40 ವರ್ಷದೊಳಗೆ ಕೋಟ್ಯಾಧಿಪತಿಯಾದನು. ಒಂದು ಕೋಟಿಯ ನಂತರ ಇನ್ನೊಂದು ಕೋಟಿ ಹೀಗೆ 50 ವರ್ಷದೊಳಗೆ ಎಷ್ಟೋ ಕೋಟಿಗಳ ಹಣ ಸಂಪಾದನೆ ಮಾಡಿದ. ಹಿಂದೆ ತಾನು ನೋಡಿದ ಬಂಗಲೆಯಂತಹ 2-3 ಬಂಗಲೆಗಳನ್ನು ಕಟ್ಟಿಸಿದನು. ಆದರೂ ತೃಪ್ತಿಯಾಗಲಿಲ್ಲ. ಈಗಿರುವ ಮನೆಗಳಲ್ಲದೆ, ನಗರದ ಮಧ್ಯಭಾಗದಲ್ಲಿ ತನ್ನ ಶ್ರೀಮಂತಿಕೆಯನ್ನು ಜನರಿಗೆ ತಿಳಿಯುವಂತೆ ಮಾಡಲು ಇಂದ್ರ ಭವನದಂತಹ ಒಂದು ಮನೆಯನ್ನು ಕಟ್ಟಿಸಬೇಕೆಂದು ಅದಕ್ಕಾಗಿ ಮತ್ತಷ್ಟು ಕಷ್ಟಪಟ್ಟು ದುಡಿದನು.


ಅಂದುಕೊಂಡದ್ದನ್ನು ಸಾಧಿಸಿದನು ಲಕ್ಷ್ಮೀಪತಿ. ನಗರದ ಮಧ್ಯದಭಾಗದಲ್ಲಿ ವಿಶಾಲವಾದ ಸ್ಥಳದಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಅದ್ಭುತವಾದ ಭವನವನ್ನು ಕಟ್ಟಿಸಿದನು. ಅದರ ಗೃಹಪ್ರವೇಶದ ದಿನದಂದು ನಗರದ ಪ್ರಮುಖ ವ್ಯಕ್ತಿಗಳೆಲ್ಲರನ್ನು ಆಹ್ವಾನಿಸಿದನು. ಒಂದೊಂದು ದೇಶಕ್ಕೆ ಸಂಬಂದಿಸಿದ ಒಂದೊಂದು ವೈಶಿಷ್ಠತೆಗಳೆಲ್ಲವನ್ನು ಒಂದೇ ಕಡೇ ಹೊಂದಿಸಿದಂತೆ ಆ ಮನೆ ಇರುವುದರಿಂದ ಎಲ್ಲರೂ ಅಬ್ಬಾ! ಎಂದು ಆಶ್ಚರ್ಯಪಟ್ಟರು. ಶಭಾಷ್ ಎಂದು ಲಕ್ಷ್ಮೀಪತಿಯನ್ನು ಅಭಿನಂದಿಸಿದರು.


ಬಂದಿದ್ದ ಅತಿಥಿಗಳೆಲ್ಲರೂ ಹೋದ ಮೇಲೆ, ಲಕ್ಷ್ಮೀಪತಿ ಮಲಗುವ ಕೋಣೆಗೆ ಹೋಗಿ ಹಾಸಿಗೆ ಮೇಲೆ ಹಾಗೆಯೇ ಮಲಗಿದನು. ಹೆಂಡತಿ ಮಕ್ಕಳು ಇನ್ನೂ ಪೋನ್ ನಲ್ಲಿ ಎಲ್ಲರೊಂದಿಗೆ ಮಾತಾಡುತ್ತಿದ್ದರು. ಮನೆಯ ವೈಭೋಗದ ಬಗ್ಗೆ, ಅಥಿತಿಗಳ ಕಾಮೆಂಟಗ’ಗಳ ಬಗ್ಗೆ, ಮನೆಗೆ ಆದ ಖರ್ಚಿನ ಬಗ್ಗೆ ಅವರು ತಮ್ಮ ಸ್ನೇಹಿತರ ಜೊತೆ ಮಾತನಾಡುತ್ತಿದ್ದರು. ಲಕ್ಷ್ಮೀಪತಿಗೆ ಯಾಕೋ ಇಂದು ಕಣ್ತುಂಬ ನಿದ್ದೆ ಹೋಗಬೇಕೆನ್ನಿಸಿತು.


ನಿಧಾನವಾಗಿ ಕಣ್ಣು ಮುಚ್ಚುತ್ತಿರುವಾಗ “ನಾನು ಹೋಗುತ್ತೇನೆ” ಎಂದು ಯಾರೋ ಕಿವಿಯಲ್ಲಿ ಹೇಳಿದಂತಾಯಿತು. ಕಣ್ಣು ತೆರೆದು ನೋಡಿದರೆ ಏನೂ ಕಾಣಿಸಲಿಲ್ಲ. ಎಲ್ಲಾ ಕತ್ತಲೆಯಂತಿದೆ. ಯಾರು? ಎಂದನು…. ಲಕ್ಷ್ಮೀಪತಿ. ಆದರೂ ತನ್ನ ಧ್ವನಿಗೆ ಪ್ರತಿಧ್ವನಿ ನೀಡಿದಂತೆ ಆಯಿತು. ನಾನು ನಿನ್ನ ಆತ್ಮ , ನಾನು ಹೋಗುತ್ತಿದ್ದೇನೆ ಎಂದು ಕೇಳಿ ಬಂದಿತು.


ಅದೇನು, ನೀನು ಹೋದರೆ ನಾನು ಸತ್ತು ಹೋಗ್ತೀನಿ ಅಲ್ವಾ! ಎಂದು ಗಾಬರಿಯಾದನು ಲಕ್ಷ್ಮೀಪತಿ. ಹೌದು ಎಂದು ಪ್ರತಿಧ್ವನಿಸಿತು. ಆಗ ಆತ್ಮ ಬೇಡ ಹೋಗಬೇಡ! ನೋಡು ಎಷ್ಟು ಸುಂದರವಾದ ಮನೆಯನ್ನು ಕಟ್ಟಿಸಿದ್ದೇನೆ. ಎಷ್ಟು ಹಣ ಸಂಪಾಧನೆ ಮಾಡಿದ್ದೆನೆ. ನೋಡು ಇವೆಲ್ಲಾ ನಿನಗೋಸ್ಕರನೇ ಅಲ್ವಾ! ನಿನ್ನನ್ನು ಸುಖಪಡಿಸುವುದಕ್ಕೆ ಅಲ್ವಾ, ನಿನ್ನ ತೃಪ್ತಿಗಾಗಿಯೇ ಅಲ್ವಾ. ಇರು ನನ್ನಲ್ಲಿದ್ದು ಇವೆಲ್ಲವನ್ನು ಅನುಭವಿಸು ಎಂದನು ಲಕ್ಷ್ಮೀಪತಿ. ಅನುಭವಿಸಬೇಕಾ….? ಹೇಗೆ ಅನಿಭವಿಸಲಿ….? ನಿನ್ನ ಶರೀರಕ್ಕೆ ಡಯಾಬೀಟಿಸ್ ಇರುವುದರಿಂದ ಸಿಹಿ ತಿನ್ನಲು ಆಗುವುದಿಲ್ಲ, ನಿನ್ನ ಶರೀರಕ್ಕೆ BP ಇರುವುದರಿಂದ ಉಪ್ಪು ಕಾರವನ್ನು ತಿನ್ನುವುದಕ್ಕೆ ಆಗುವುದಿಲ್ಲ, ಅದರ ಮೇಲೆ ಇಷ್ಟುವೂ ಇಲ್ಲ. ಇನ್ನೂ ಇಷ್ಟವಾದದ್ದೂ ಏನೂ ತಿನ್ನಲಾರೆ ಏಕೆಂದರೆ ನಿನ್ನ ಶರೀರಕ್ಕೆ ಜೀರ್ಣಮಾಡಿಕೊಳ್ಳಲು ಆಗುವುದಿಲ್ಲ. ನಿನ್ನ ಶರೀರವು ಒಟ್ಟಾರೆಯಾಗಿ ಕಣ್ಣಿನಿಂದ ಕಾಲಿನ ಏರೆಗೂ ಒಂದು ರೀತಿಯ ರೋಗಗಳ ಹುತ್ತವಾಗಿದೆ.


ಆ ಹೊಟ್ಟೆ ನೋಡು ಹೇಗೆ ಮುಂದಕ್ಕೆ ಬಂದಿದೆ. ಹೆಜ್ಜೆ ತೆಗೆದು ಮರು ಹೆಜ್ಜೆಹಾಕುವುದಕ್ಕೆ ನೀನು ಎಷ್ಟು ಆಯಾಸ ಪಡುತ್ತೀಯಾ ಎಂಬುದು ನಮ್ಮಿಬ್ಬರಿಗೂ ಗೊತ್ತು. ನೀನೇ ಹೇಳು ನಿನ್ನ ಶರೀರದಲ್ಲಿ ಹೇಗಿರಲಿ…? ಅಲ್ಲಲ್ಲಿ ಶಿಥಿಲವಾಗಿರುವ ಮನೆಯಲ್ಲಿ ಯಾರಾದ್ರು ಇರ್ತಾರಾ…? ನೀನು ಕಟ್ಟಿಸಿದ ಸುಂಧರವಾದ ಮನೆಯಿಂದ ನನಗೇನು ಸಂಬಂಧ…? ನಾನಿರುವುದು ನಿನ್ನ ಶರೀರದಲ್ಲಿ, ಅದೇ ನನ್ನ ನಿವಾಸಸ್ಥಳ. ನನ್ನ ಮನೆಗೆ ಇರುವ ಒಂಭತ್ತು ದ್ವಾರಗಳಿಗೂ ಸಮಸ್ಯೆಗಳೇ, ನನಗೆ ರಕ್ಷಣೆ ಇಲ್ಲ, ಸುಖವಿಲ್ಲ, ಎಲ್ಲಕ್ಕಿಂತ ಮಿಗಿಲಾಗಿ, ನಿನಗೆ ಮೊದಲಿಗೆ ಬಂದತಹ ಖಾಯಿಲೆ, ಹಣದ ಖಾಯಿಲೆ ‌.


ಹಣದ ಖಾಯಿಲೆ ನಿನಗೆ ಬಂದಂದಿನಿಂದ, ನನ್ನನು ಒಮ್ಮೆಯಾದರೂ ನಿದ್ದೆ ಮಾಡಲು ಬಿಟ್ಟಿದ್ದೀಯಾ…? ನಾನಿರುವ ಶರೀರಕ್ಕೆ ಸ್ವಲ್ಪವಾದರೂ ವಿಶ್ರಾಂತಿ ನೀಡಿದ್ದೀಯಾ….? ಪ್ರತೀಕ್ಷಣವೂ ಇನ್ನೊಬ್ಬನಿಗೆ ಪೈಪೋಟಿಯಾಗಿ ನನ್ನಲ್ಲಿ ಅಸೂಯೆಯನ್ನು ತುಂಬಿದ್ದೀಯಾ…? ಇನ್ನೊಬ್ಬನನ್ನು ಹಿಂದೆ ತಳ್ಳಲು ನನ್ನಿಂದ ಕುತಂತ್ರಗಳನ್ನು ಮಾಡಿಸಿದೆ. ಎಷ್ಟೋ ಸಾರಿ ನನ್ನನ್ನು ಹಗೆಯಿಂದ, ಹೊಟ್ಟೆಕಿಚ್ಚಿನಿಂದ, ಎಷ್ಟು ನೋಯಿಸಿದೆಯೋ ಒಂದುಸಾರಿ ನೆನಪುಮಾಡಿಕೋ… ರೋಗಗಳು ಆವರಿಸಿದರೂ, ಎಂದಾದರೂ ಗಮನ ಹರಿಸಿದೆಯಾ? ಯೋಚನೆ ಮಾಡಿ ನೋಡು. ಇನ್ನೂ ಒಂದು ಕ್ಷಣವೂ ನಾನು ನಿನ್ನ ಶರೀರದಲ್ಲಿ ಇರುವುದಿಲ್ಲ. ನಾನು ಹೋಗುತ್ತಿದ್ದೇನೆ…!” ಎಂದು ಆ ರಾತ್ರಿ ತಾನು ಸಂಪಾದನೆ ಮಾಡಿರುವ ಲಕ್ಷ್ಮೀಯನ್ನು ಇಲ್ಲಿಯೇ ಬಿಟ್ಟು ಲಕ್ಷ್ಮೀಪತಿ ಸ್ವರ್ಗಕ್ಕೋ ನರಕಕ್ಕೋ ಯಾವುದೋ ಒಂದು ಲೋಕಕ್ಕೆ ಕಾಣದಂತಹ ಲೋಕಕ್ಕೆ ಹೋಗಿಬಿಟ್ಟನು.


ಇಂದು ಪ್ರತಿ ಮನುಷ್ಯನಿಗೂ ನಾಳೆಯ ಬಗ್ಗೆ ಆಲೋಚನೆ ಅಧಿಕವಾಗಿದೆ. ಆದ್ದರಿಂದ ಈ ದಿನ, ಈ ಕ್ಷಣವನ್ನು ಆನಂದದಿಂದ ಅನಿಭವಿಸುವುದನ್ನು ಮರೆತಿದ್ದಾನೆ. ದೇವರು ಕೊಟ್ಟ ಆರೋಗ್ಯವೇ ಮಹಾಭಾಗ್ಯ ಎಂಬ ವಿಷಯವನ್ನು ಮರೆತು, ಮನುಷ್ಯ ಸೃಷ್ಠಿಸಿಕೊಂಡ ಹಣವನ್ನೇ ಭಾಗ್ಯವೆಂದುಕೊಳ್ಳುತ್ತಿದ್ದಾನೆ. ಒಂದು ಮಾತಿನಲ್ಲಿ ಹೇಳುವುದಾದರೆ, ರೋಗಗಳನ್ನು ಬರಲೆಂದು ಆಹ್ವಾನ ನೀಡಿ, ಅವು ಬಂದಾಗ ಖರ್ಚು ಮಾಡಲು ಕಷ್ಟಪಟ್ಟು ಹಣಸಂಪಾದನೆ ಮಾಡುತ್ತಿದ್ದಾನೆ. ನಮ್ಮ ಅವಶ್ಯಕತೆಗಳನ್ನು ನೀಗಿಸಿಕೊಳ್ಳಲು ಕಷ್ಟಪಡಬೇಕು. ಆನಂದಿಸಲು ಕಷ್ಟಪಡಬೇಕು. ನಾವು ಇರುವ ಜೀವನಕ್ಕಾಗಿ ಕಷ್ಟಪಡಬೇಕು. ಅಷ್ಟೇ ಆಗಲಿ ನಾವು ಹೋದ ನಂತರದ ಜೀವನಕ್ಕಾಗಿ ಕಷ್ಟ ಪಡುವುದರಲ್ಲಿ ಏನಾದರೂ ಅರ್ಥವಿದೆಯೇ….? ಕೃಪೆ:ಮುಖ ಪುಸ್ತಕ.

Thursday, March 5, 2026

 ಕಥೆ-1055

ಬಾಗುವುದೆಂದರೆ ಶರಣಾಗತಿಯಲ್ಲ


ಪಶ್ಚಿಮಘಟ್ಟಗಳ ಹಸಿರು ಒಡಲಿನಲ್ಲಿ ನದಿಯೊಂದು ಹುಟ್ಟಿ ಹರಿಯುತ್ತಿತ್ತು. ಹುಟ್ಟಿದಾಗಿನಿಂದಲೇ ಕೊಂಚ ರಭಸವಾಗಿ ಯಾವುದನ್ನೂ ಲೆಕ್ಕಿಸದೇ ಹರಿಯುತ್ತಿದ್ದ ನದಿಯದು. ತಿಳಿನೀರಿನ ಚುರುಕು ನದಿ ಬೆಟ್ಟದಿಂದ ರಭಸವಾಗಿ ಇಳಿದು ತನ್ನದೇ ಆದ ಜುಳುಜುಳು ನಿನಾದದೊಂದಿಗೆ ಸಾಗುತ್ತಿತ್ತು. ತಾನು ಬಲಶಾಲಿ, ತಾನು ಅತ್ಯಂತ ವೇಗದ ನದಿ, ಯಾರೂ ತನ್ನ ದಾರಿಗೆ ಅಡ್ಡ ಬರಲು ಸಾಧ್ಯವಿಲ್ಲ ಎಂದು ತನಗೆ ತಾನೇ ಹೇಳಿಕೊಂಡು ಹರಿಯುತ್ತಿತ್ತು. ಒಂದು ದಿನ ನದಿ ಹರಿಯುವಾಗ ಒಂದು ದೊಡ್ಡ ಬಂಡೆ ದಾರಿಗೆ ಅಡ್ಡವಾಗಿ ಬಿದ್ದಿತ್ತು. ಆ ಬಂಡೆ ಅಲ್ಲಿದ್ದು ಶತಮಾನಗಳೇ ಕಳೆದಿದ್ದವು. ಯಾವ ಮಳೆ, ಗಾಳಿ, ಸಮಯ ಅದನ್ನು ಏನೂ ಮಾಡಲು ಸಾಧ್ಯವಾಗಿರಲಿಲ್ಲ. ನದಿಗೋ ತನ್ನ ದಾರಿಗೆ ಅಡ್ಡಲಾಗುವ ಧೈರ್ಯ ಈ ಬಂಡೆಗೆಂಬ ಸಿಟ್ಟು. ದಾರಿ ಬಿಡು ಎಂದಿತು ನದಿ. ಬಂಡೆ ಅಲುಗಾಡಲಿಲ್ಲ. ಆದಷ್ಟೂ ಜೋರಾಗಿ ಬಂಡೆಗೆ ಅಪ್ಪಳಿಸಿತು ನದಿ. ಉಹೂಂ. ಬಂಡೆ ಜರುಗಲಿಲ್ಲ. ಮತ್ತೆ ಮತ್ತೆ ಅಪ್ಪಳಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಇಡೀ ಕಣಿವೆ ಅಲ್ಲಾಡಿದರೂ ಬಂಡೆ ಒಂದಿಂಚೂ ಜರುಗಲಿಲ್ಲ. ನದಿಯ ನೀರು ಕೆಂಪಾಯಿತು. ನದಿ ದಣಿಯಿತು. ತಾನು ಯಾವ ಕಾರಣಕ್ಕೂ ಬಾಗುವುದಿಲ್ಲ ಎಂದು ನದಿ ತೀರ್ಮಾನಿಸಿಕೊಂಡಿತ್ತಲ್ಲ, ಹಾಗಾಗಿ ಅದು ಮತ್ತೆ ಮತ್ತೆ ಬಂಡೆಗೆ ಢಿಕ್ಕಿ ಹೊಡೆಯುತ್ತಲೇ ಇತ್ತು. ನದಿಯ ತಿಳಿನೀರನ್ನು ಕುಡಿಯುತ್ತಿದ್ದ ಪ್ರಾಣಿಗಳು ಬಾಯಾರಿದವು. 

ಒಂದು ಸಂಜೆ ನದಿಯೊಳಗಿನ ಪುಟ್ಟ ಮೀನೊಂದು ಮಾತಾಡಿತು. “ನೀನು ಬಹಳ ಗಟ್ಟಿಗಿತ್ತಿಯೇ. ಆದರೆ ಸಾಮರ್ಥ್ಯವೆಂದರೆ ಶಕ್ತಿ ಪ್ರದರ್ಶನ ಮಾತ್ರ ಎಂದು ನಿನಗೆ ಹೇಳಿದವರಾದರೂ ಯಾರು?” ಎಂದು ಕೇಳಿತದು. ಇನ್ನೇನು ಮತ್ತೊಮ್ಮೆ ಬಂಡೆಯನ್ನು ಗುದ್ದಲು ಹೋಗುತ್ತಿದ್ದ ನದಿ ಕೊಂಚ ತಡೆದು ಯೋಚಿಸಿತು. ಬಂಡೆಯನ್ನು ಎಚ್ಚರಿಕೆಯಿಂದ ನೋಡಿತು. ಅದೆಷ್ಟೋ ಕಾಲದಿಂದ ನೆಲಕ್ಕಂಟಿದ್ದ ಬಂಡೆಯದು. ಯಾವ ಕಾರಣಕ್ಕೂ ಅದನ್ನು ಅಲ್ಲಿಂದ ಕೀಳಲು ಸಾಧ್ಯವಿಲ್ಲವೆಂಬ ಸತ್ಯ ನದಿಗೆ ಹೊಳೆಯಿತು. ಸಣ್ಣ ನಿಟ್ಟುಸಿರಿಟ್ಟು ಮೀನಿಗೊಂದು ಧನ್ಯವಾದ ಹೇಳಿದ ನದಿ ಮೆಲ್ಲನೆ ಬಂಡೆಯನ್ನು ಎರಡೂ ತೋಳುಗಳಂತಹ ಅಲೆಗಳಿಂದ ಬಳಸಿತು. ಭೋರ್ಗರೆಯುತ್ತಿದ್ದ ನದಿ ಮೆಲ್ಲಗೆ ಹರಿಯತೊಡಗಿತು. 

ಕೆಲವೇ ವಾರದಲ್ಲಿ ವಾತಾವರಣ ತಿಳಿಯಾಯಿತು. ಸುತ್ತಲಿನ ಪ್ರಕೃತಿ ಹಸಿರು ಮುಕ್ಕಳಿಸಲಾರಂಭಿಸಿತು. ಪ್ರಾಣಿಗಳು ನೀರು ಕುಡಿದು ಚಿನ್ನಾಟವಾಡತೊಡಗಿದವು. ಹೊಸ ದಾರಿಯುದ್ದಕ್ಕೂ ಪುಟ್ಟ ಹಸಿರು ಹುಲ್ಲು ಚಿಗುರಿ ಬಣ್ಣ ಬಣ್ಣದ ಹೂಗಳು ಅರಳಿ ಪಾತರಗಿತ್ತಿಗಳು ವಾತಾವರಣವನ್ನು ಕಳೆಗಟ್ಟಿಸಿದವು. ಕಾಲಕಳೆದಂತೆ ನದಿಗೆ ಒಂದು ವಿಷಯ ಅರ್ಥವಾಯಿತು. ಬಂಡೆಗಲ್ಲನ್ನು ಬಳಸಿ ಮುಂದೆ ಬಂದಿದ್ದರಿಂದ ತಾನು ದುರ್ಬಲವಾಗಲಿಲ್ಲ, ಬದಲಾಗಿ ಮತ್ತಷ್ಟು ಬಲಶಾಲಿಯಾದೆ ಎಂಬುದು ಅದಕ್ಕೆ ಅರ್ಥವಾಯಿತು. ಎಲ್ಲ ಅಡೆತಡೆಗಳೂ ಸೋಲಿಸಲು ಇರುವುದಲ್ಲ, ಕೆಲವೊಂದು ನಮ್ಮನ್ನು ರೂಪುಗೊಳಿಸುತ್ತವೆ ಎಂದು ಸುತ್ತಲಿನ ಬೆಟ್ಟಗಳ ಹತ್ತಿರದ ಸಂಜೆಯ ಹರಟೆಯಲ್ಲಿ ನದಿ ಹೇಳಲಾರಂಭಿಸಿತು. ತನ್ನ ಕಣ್ಣು ತೆರೆಸಿದ ಪುಟಾಣಿ ಮೀನಿನ ಸಲಹೆಗೆ ಅದು ಯಾವಾಗಲೂ ಕೃತಜ್ಞವಾಗಿತ್ತು. 

ಅಹಂಕಾರದಿಂದ ಯಾವ ಪ್ರಯೋಜನವೂ ಇಲ್ಲ, ಬದಲಾಗಿ ಕೆಲವೊಮ್ಮೆ ಪರಿಸ್ಥಿತಿಗೆ ತಕ್ಕನಾಗಿ ಹೊಂದಿಕೊಳ್ಳುವುದರಿಂದ ಅನಾಹುತಗಳನ್ನು ತಪ್ಪಿಸಬಹುದು. ಸಮಸ್ಯೆಗಳನ್ನು ಶಕ್ತಿಯಿಂದ ಅಲ್ಲ ವಿವೇಚನೆಯಿಂದಲೂ ಪರಿಹರಿಸಬಹುದು. ಹೊಂದಿಕೊಳ್ಳುವುದು ನಮ್ಮ ಬಲಹೀನತೆಯಲ್ಲ, ಅದೇ ಕೆಲವೊಮ್ಮೆ ಸಾಮರ್ಥ್ಯವೂ ಹೌದು. 

-ದೀಪಾ ಹಿರೇಗುತ್ತಿ

Wednesday, March 4, 2026

 ಕಥೆ-1054

ಬಣ್ಣದ ಕನಸುಗಳಿಗೆ 

ಬಣ್ಣದ ಹೋಳಿ ಜೀವ ತುಂಬಲಿ..


ಹೋಳಿ ಎಂದರೆ ಕಳೆದು ಹೋದ ಹಿಂದಿನ ಕ್ಷಣಗಳನ್ನು ಮರೆತು ಹೊಸ ಆರಂಭಗಳನ್ನು ಆಚರಿಸುವ ಸಮಯ..


ಪದೇ ಪದೇ ನಮ್ಮನ್ನು ನಾವೇ ಚಿವುಟುತ್ತಾ ಕುಗ್ಗಿಸಿಕೊಳ್ಳಬಾರದು”


ಯಾವತ್ತೂ ನಮ್ಮನ್ನು ನಾವು ಕಡಿಮೆ ಎಂದು ಕಡೆಗಣಿಸಿಕೊಳ್ಳಬಾರದು. ನಾವು ಅಂದುಕೊಂಡಿದ್ದಕ್ಕಿಂತ, ನಾವು ಬುದ್ಧಿವಂತರು ಮತ್ತು ಸಮರ್ಥರು. ನಿರ್ಣಾಯಕ ಸಮಯದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ನಿಭಾಯಿಸಬಲ್ಲೆವು ಎಂಬ ಮನಸ್ಥಿತಿ ನಮ್ಮದಾಗಿರಲಿ.


ಹೋಳಿ ಸಂತೋಷದ ಹಬ್ಬ, ಆದರೆ ಕೆಲವೊಂದು ಕೃತಕ ಬಣ್ಣಗಳು ಆರೋಗ್ಯಕ್ಕೆ ಹಾನಿಕಾರಕವಾಗಿರಬಹುದು. ಮುನ್ನೆಚ್ಚರಿಕೆ ಇರಲಿ.. ಪರಿಸರ ಸ್ನೇಹಿ ಹೋಳಿ ಆಚರಿಸೋಣ.


ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಹೇಳಿದಂತೆ ಬಣ್ಣ ಬಣ್ಣಗಳಿಂದ ಬಿಡಿಸಿದ ಬಣ್ಣದ ಪಕ್ಷಿ ಚಿತ್ರದ ಬೆಲೆ ಲಕ್ಷ,ಆದರೆ ಅದು ಹಾಡಲಾರದು, ಹಾರಲಾರದು ಬದುಕೆಂದರೆ ಹಾಡುವುದು, ಹಾರುವುದು, ಆನಂದಿಸುವುದು..


ಹಳೆಯ ನೋವನ್ನು ತೊಳೆಯೋಣ, ಹೊಸ ಸಂತೋಷವನ್ನು ಬಣ್ಣಗಳಿಂದ ಬರೆಯೋಣ 


 "ಬಣ್ಣಗಳು ಮಸುಕಾದರೂ ನೆನಪುಗಳು ಮಸುಕಾಗಬಾರದು 


ಬಣ್ಣಗಳ ಸಿಂಚನವು ನಮ್ಮ ಜೀವನದಲ್ಲಿ ಪ್ರೀತಿ ಮತ್ತು ಉತ್ಸಾಹ, ಆನಂದವನ್ನು ತರಲಿ.


ಹಳೆಯ ನೋವನ್ನು ತೊಳೆಯೋಣ, ಹೊಸ ಸಂತೋಷವನ್ನು ಬಣ್ಣಗಳಿಂದ ಬರೆಯೋಣ.. 

ಹೋಳಿ ಹಬ್ಬದ ಶುಭಾಶಯಗಳು.

  - ಶಂಕರಗೌಡ ಬಸಾಪೂರ

Tuesday, March 3, 2026

 ಕಥೆ-1053

ವಿಜ್ಞಾನ ಹಿಡಿ,

ಮೂಢನಂಬಿಕೆ ಬಿಡಿ... 

ಇವತ್ತಿನ ಚಂದ್ರಗ್ರಹಣವನ್ನು ಭಯದಿಂದ ನೋಡುವ ಬದಲು ಅಚ್ಚರಿಯಿಂದ ಮತ್ತು ಕುತೂಹಲದಿಂದ ನೋಡಬೇಕಿದೆ... ಚಂದ್ರಗ್ರಹಣದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿರುವುದು ನಿಜಕ್ಕೂ ಆಘಾತಕಾರಿ..

ಇವತ್ತಿನ ಚಂದ್ರಗ್ರಹಣವನ್ನು ಅರ್ಥಮಾಡಿಕೊಳ್ಳುವುದು ನಮ್ಮಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಉತ್ತಮ ಅವಕಾಶ ಅಂತ ಭಾವಿಸಿಕೊಳ್ಳಬೇಕು..

ಚಂದ್ರಗ್ರಹಣ ಎಂದರೇನು?

ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ಸರಳ ರೇಖೆಯಲ್ಲಿ ಬಂದಾಗ, ಭೂಮಿ ಸೂರ್ಯನ ಬೆಳಕನ್ನು ಚಂದ್ರನಿಗೆ ತಲುಪದಂತೆ ತಡೆದಾಗ ಚಂದ್ರಗ್ರಹಣ ಉಂಟಾಗುತ್ತದೆ.

ಇದು ಒಂದು ಸ್ವಾಭಾವಿಕ ಘಟನೆ. ಇದರಲ್ಲಿ ಯಾವುದೇ ಅಶುಭ ಅಥವಾ ಅಪಶಕುನವಿಲ್ಲ.

 ಚಂದ್ರಗ್ರಹಣ ಸಂದರ್ಭದಲ್ಲಿ ಮೂಢನಂಬಿಕೆಗಳು ನಮ್ಮನ್ನು ತಳಕು ಹಾಕಿಕೊಳ್ಳುತ್ತವೆ.. ಅವುಗಳಿಂದ ನಾವು ಹೊರ ಬರಬೇಕಿದೆ..

ಗ್ರಹಣದ ಸಮಯದಲ್ಲಿ ತಿನ್ನಬಹುದು, ನಿತ್ಯ ಕೆಲಸದಲ್ಲಿ ತೊಡಗಬಹುದು ಅದರಿಂದ ತೊಂದರೆ ಇಲ್ಲ.. ವಿಶೇಷವಾಗಿ ಗರ್ಭಿಣಿಯರನ್ನು ಭಯಭೀತರನ್ನಾಗಿಸುವ ವಾತಾವರಣ ಸೃಷ್ಟಿಯಾಗುತ್ತಿದೆ.. ಈ ಗ್ರಹಣಗಳಿಂದ ಗರ್ಭಿಣಿಯರಿಗೆ ತೊಂದರೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ..

ಚಂದ್ರಗ್ರಹಣದಿಂದ ಕಲಿಯಬಹುದಾದ ವೈಜ್ಞಾನಿಕ ಪಾಠಗಳು

ಸೌರಮಂಡಲದ ಚಲನೆ ಬಗ್ಗೆ ತಿಳಿಯಬಹುದು

ಭೂಮಿ ನೆರಳು ಚಂದ್ರನ ಮೇಲೆ ಹೇಗೆ ಬೀಳುತ್ತದೆ ಎಂಬುದನ್ನು ಗಮನಿಸಬಹುದು

“ರಕ್ತ ಚಂದ್ರ” (Red Moon) ಏಕೆ ಕಾಣುತ್ತದೆ ಎಂಬುದನ್ನು ಅರಿತುಕೊಳ್ಳಬಹುದು

(ಇದು ವಾಯುಮಂಡಲದಲ್ಲಿ ಬೆಳಕಿನ ಚದುರುವಿಕೆ ಕಾರಣದಿಂದ ಉಂಟಾಗುತ್ತದೆ)

ಕರ್ನಾಟಕದ ಬಹುತೇಕ ಭಾಗಗಳಲ್ಲಿ, ಗ್ರಹಣವು ಮಧ್ಯಾಹ್ನ 3:20 ಕ್ಕೆ ಆರಂಭವಾದರೂ, ಅದು ಹೆಚ್ಚಾಗಿ 6:20 – 6:47 PM ನಡುವೆ ಮಾತ್ರ ಭಾಗಶಃ ಗ್ರಹಣದ ಕ್ಷಣಗಳನ್ನು ನೋಡಲು ಸಾಧ್ಯವಾಗುತ್ತದೆ.

ಚಂದ್ರಗ್ರಹಣವನ್ನು ಭಯದಿಂದ ನೋಡುವ ಬದಲು ಅಚ್ಚರಿಯಿಂದ ಮತ್ತು ಕುತೂಹಲದಿಂದ ನೋಡೋಣ. ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಿ ಆನಂದಿಸಬಹುದು. 

ಪ್ರಶ್ನೆ ಕೇಳುವ ಮನಸ್ಸೇ ನಿಜವಾದ ವಿಜ್ಞಾನ ಮನಸ್ಸು.

 “ಮೂಢನಂಬಿಕೆಗಳನ್ನು ಬಿಡಿ, ವಿಜ್ಞಾನವನ್ನು ಹಿಡಿ” ಇದೇ ನಿಜವಾದ ಪ್ರಗತಿ.

-ಶ್ರೀ ಶಂಕರಗೌಡ ಬಸಾಪೂರ

Monday, March 2, 2026

 ಕಥೆ-1052

ನೀರು ಕುಡಿಯಲೊಲ್ಲದ ಕುದುರೆ...

ಕುದುರೆಗೆ ದಣಿವಾಗಿದೆ. ಆದರೆ ಅದು ನೀರು ಕುಡಿಯಲು ಮನಸ್ಸು ಮಾಡುತ್ತಿಲ್ಲ. ಸೋಮಾರಿತವೋ, ದಾರಿಯ ದೂರ ತಿಳಿದಿಲ್ಲವೋ, ಹಾಗೆಯೇ ನಾವು ಕೂಡಾ….

ಇವತ್ತಿನ ದಿನವನ್ನು ಆದಷ್ಟು ಎಚ್ಚರಿಕೆಯಿಂದ ಕಳೆಯಬೇಕು, ಕೆಲಸಗಳನ್ನು ಮಾಡಬೇಕು ಎಂದೆಲ್ಲ ನಿರ್ಧರಿಸಿ ಆಗಿದೆ. 

 ಕುದುರೆ ಸಾಕಷ್ಟು ದೂರ ಪ್ರಯಾಣಿಸಿದೆ; ಇನ್ನೂ ಬಹಳ ದೂರದವರೆಗೆ ಪ್ರಯಾಣ ಮಾಡಬೇಕಿದೆ. ಆದ್ದರಿಂದಲೇ ದಾರಿಯಲ್ಲಿ ನೀರಡಿಕೆಯಾಗದಿರಲೆಂದು ಮುನ್ನೆಚ್ಚರಿಕೆಯಿಂದ ಕೊಳದ ಬಳಿ ಬಂದು ಸ್ವಲ್ಪ ನೀರು ಕುಡಿದು ದಾಹ ತಣಿಸಿಕೊಂಡರೆ ಮುಂದಿನ ಪ್ರಯಾಣ ಸಲೀಸು. ಕುದುರೆಗೆ ದಣಿವಾಗಿದೆ. ಆದರೆ ಅದು ನೀರು ಕುಡಿಯಲು ಮನಸ್ಸು ಮಾಡುತ್ತಿಲ್ಲ. ಸೋಮಾರಿತನವೋ, ದಾರಿಯ ದೂರ ತಿಳಿದಿಲ್ಲವೋ, ದಾಹ ತಣಿಸಿಕೊಳ್ಳುವ ಅಗತ್ಯ ಮನಗಾಣಲಿಲ್ಲವೋ…. ಒಟ್ಟಾರೆ ನೀರು ಕುಡಿಯುತ್ತಿಲ್ಲ.


ನಾವು ಕೂಡಾ. ನಮ್ಮ ಕುಟುಂಬ, ಪರಿಸರ, ವಿದ್ಯೆ ಇತ್ಯಾದಿಗಳೆಲ್ಲ ನಮ್ಮನ್ನು ಒಂದು ಹಂತದವರೆಗೆ ಬೆಳೆಸಿ ಮುಂದಿನ ಬದುಕಿಗೆ ಸಜ್ಜುಗೊಳಿಸುತ್ತವೆ. ನಮ್ಮನ್ನು ತಂದು ನಿಲ್ಲಿಸಲಾಗಿರುವ ಕಾರ್ಯಕ್ಷೇತ್ರದೊಳಕ್ಕೆ ಧುಮುಕುವ, ಜವಾಬ್ದಾರಿ ಹೊರುವ ಅಗತ್ಯ ನಮಗೂ ಇದೆ. ಆದರೆ ನಾವು ಮನಸ್ಸು ಮಾಡುತ್ತಿಲ್ಲ. ಉಳಿದ ಸಂಗತಿಗಳೆಲ್ಲ ನಮ್ಮನ್ನು ಕೊಳದವರೆಗೆ ತಂದು ನಿಲ್ಲಿಸಬಲ್ಲವು. ಸವಾರ ಹೆಚ್ಚೆಂದರೆ ನಮ್ಮ ಮನವೊಲಿಸಬಲ್ಲ, ಛಡಿಯೇಟು ಕೊಟ್ಟು ಒತ್ತಾಯವನ್ನೂ ಮಾಡಬಲ್ಲ. ಆದರೆ, ನೀರು ಕುಡಿಯಬೇಕಿರೋದು ಕುದುರೆಯೇ. ಕೆಲಸ ಮಾಡಬೇಕಿರೋದು ನಾವೇ!

ಕುದುರೆಯ ದಾಹ ತಣಿಯಬೇಕೆಂದರೆ, ಕುದುರೆಯೇ ನೀರು ಕುಡಿಯಬೇಕು. ನಮ್ಮ ಬದುಕು ಸಾಗಬೇಕೆಂದರೆ, ನಾವೇ ದುಡಿಯಬೇಕು. ಎದುರಿಗೆ ಕೊಳವಿದ್ದೂ, ಗಂಟಲು ಒಣಗಿದ್ದೂ, ಸುಮ್ಮನೆ ನಿಲ್ಲುವ ಮೂರ್ಖತನ ಮಾಡಬಾರದು.


ದಿನದ ಕೆಲಸ ನಮ್ಮ ಮುಂದೆ ಹರವಿಕೊಂಡಿದೆ. ಅದನ್ನು ನಾವೇ ಮಾಡಿ ಮುಗಿಸಬೇಕು. ಅವನ್ನು ಸುಸೂತ್ರವಾಗಿ ಮಾಡಿ ಮುಗಿಸಿದರಷ್ಟೆ ಜೀವನಯಾನದ ಯಶಸ್ವಿಯಾಗಿ ಕಳೆದು ಮುಂದಿನ ದಾರಿ ಸುಗಮವಾಗುವುದು. ನಮ್ಮ ಕೆಲಸಗಳಿಗೆ ನಾವೇ ಜವಾಬ್ದಾರರು. ಬಾಕಿಯಂತೆ ಎಷ್ಟೇ ಬೆಂಬಲ ಮತ್ತು ಸಹಾಯ ಪಡೆದರೂ ಮುನ್ನಡಿಗೆಯ ಪ್ರಶ್ನೆ ಬಂದಾಗ, ಹೆಜ್ಜೆ ಎತ್ತಿಡಬೇಕಾದವರು ನಾವೇ … ನೀರು ಕುಡಿಯಬೇಕಾದ ಆ ಕುದುರೆಯೂ ನಾವೇ!..

-ಚೇತನಾ ತೀರ್ಥಹಳ್ಳಿ

Sunday, March 1, 2026

 ಕಥೆ-1051

ಮೌಲ್ಯ ಅರಿಯದ ಸ್ಥಳವನ್ನು ಬಿಡು


ಒಬ್ಬ ತಂದೆ ತನ್ನ ಹಳೆಯ, ಕೆಟ್ಟುಹೋದ ಗಡಿಯಾರವನ್ನು ಮಗನಿಗೆ ನೀಡಿ ಅದರ ಬೆಲೆ ವಿಚಾರಿಸಲು ಹೇಳಿದನು. ಮಗ ಮೊದಲು ಗುಜರಿ ಅಂಗಡಿಗೆ ಹೋದಾಗ ಅವರು ಅದನ್ನು ಕೇವಲ 100 ರೂಪಾಯಿಗೆ ಕೇಳಿದರು. ನಂತರ ಗಡಿಯಾರ ಮಳಿಗೆಗೆ ಹೋದಾಗ ಅವರು 1,000 ರೂಪಾಯಿ ನೀಡುತ್ತೇವೆ ಎಂದರು. ಕೊನೆಯದಾಗಿ ಮಗ ಅದನ್ನು ಮ್ಯೂಸಿಯಂಗೆ (ಸಂಗ್ರಹಾಲಯ) ಕೊಂಡೊಯ್ದಾಗ, ಅದರ ಅಪರೂಪದ ವಿನ್ಯಾಸ ಕಂಡು ಅವರು 50 ಲಕ್ಷ ರೂಪಾಯಿ ನೀಡಲು ಮುಂದಾದರು.

​ಹೀಗೆ ತಂದೆ ಮಗನಿಗೆ ಹೇಳುತ್ತಾನೆ"ನೀನು ತಪ್ಪು ಜಾಗದಲ್ಲಿದ್ದಾಗ ಜನರು ನಿನ್ನ ಮೌಲ್ಯವನ್ನು ಕಡಿಮೆ ಅಳೆಯುತ್ತಾರೆ. ಆದರೆ ಸರಿಯಾದ ಜಾಗದಲ್ಲಿದ್ದಾಗ ಮಾತ್ರ ನಿನ್ನ ನಿಜವಾದ ಯೋಗ್ಯತೆ ಏನು ಎಂಬುದು ಜಗತ್ತಿಗೆ ತಿಳಿಯುತ್ತದೆ. ನಿನ್ನನ್ನು ಗೌರವಿಸದ ಜಾಗದಲ್ಲಿ ನೀನಿದ್ದು ನಿನ್ನ ಮೌಲ್ಯವನ್ನು ಕುಗ್ಗಿಸಿಕೊಳ್ಳಬೇಡ ಎಂದನು.

ತಪ್ಪು ಪರಿಸರದಲ್ಲಿ ಪ್ರತಿಭೆ ಮಂಕಾಗುತ್ತದೆ; ಸರಿಯಾದ ಪರಿಸರದಲ್ಲಿ ಅದೇ ಪ್ರತಿಭೆ ಇತಿಹಾಸ ಬರೆಯುತ್ತದೆ.


“ಬೀಜ ಮಣ್ಣಿನಲ್ಲಿ ಬಿದ್ದಾಗ ಮಾತ್ರ ಮರವಾಗುತ್ತದೆ; ವ್ಯಕ್ತಿ ಸರಿಯಾದ ವಾತಾವರಣದಲ್ಲಿ ಇದ್ದಾಗ ಮಾತ್ರ ಯಶಸ್ವಿಯಾಗುತ್ತಾನೆ.”

 ಮೌಲ್ಯ ಅರಿಯದ ಸ್ಥಳವನ್ನು ಬಿಡು..

ಕೃಪೆ :ನೆಟ್

Saturday, February 28, 2026

 ಕಥೆ-1050

ಆತ್ಮವಿಶ್ವಾಸದಿಂದ ಬದುಕು ಸುಂದರ


ಒಬ್ಬರು ಆಂಗ್ಲ ವಿಜ್ಞಾನಿ ಹೀಗೆ ಹೇಳುತ್ತಾರೆ- ''ಯಾರು ದೇವರಲ್ಲಿ ನಂಬಿಕೆಯನ್ನು ಇಡುವುದಿಲ್ಲವೋ ಅವರು ನಾಸ್ತಿಕರು,'' ಎಂದು ಹೇಳುವುದು ಹಳೆಯ ಧರ್ಮ. "ಯಾರು ತಮ್ಮನ್ನು ತಾವು ನಂಬುವುದಿಲ್ಲವೋ ಅವರು ನಾಸ್ತಿಕರು,'' ಎಂದು ಹೇಳುವುದು ಹೊಸಧರ್ಮ! ತನ್ನ ತನಗೆ ವಿಶ್ವಾಸವಿಲ್ಲದವನು ಪರಮಾತ್ಮನಲ್ಲಿ ಏನು ವಿಶ್ವಾಸ ಇಡುವನು? ಆತ್ಮವಿಶ್ವಾಸದಿಂದ ನಮ್ಮ ಬದುಕು ಸುಂದರ- ಸುಮಧುರವಾಗುತ್ತದೆ!


ಒಂದು ಪುಟ್ಟ ಪಕ್ಷಿ ಅದು ದೇಶದಿಂದ ದೇಶಕ್ಕೆ ಹಾರುವ ವಲಸೆ ಪಕ್ಷಿ. ಸಾಗರ ಸಾಗರಗಳನ್ನೇ ದಾಟುವ ಸಾಮರ್ಥ್ಯ ಅದಕ್ಕಿದೆ! ಒಂದು ದಿನ ಅದು ಸಾವಿರ ಸಾವಿರ ಮೈಲುಗಳಾಚೆಯ ದೇಶಕ್ಕೆ ಪ್ರವಾಸ ಹೊರಟಿತು. ನೂರಾರು ಮೈಲು ಹಾರಿದ ನಂತರ ಒಂದೆಡೆ ಮರದ ಮೇಲೆ ವಿಶ್ರಾಂತಿಗೆ ಇಳಿಯಿತು.


ಅಲ್ಲಿ ಒಬ್ಬ ಸಂತ ಪಕ್ಷಿಗೆ ಕೇಳಿದ, ''ನೀನು ಎಲ್ಲಿಗೆ ಹೊರಟಿರುವಿ?''. ಪಕ್ಷಿ ಹೇಳಿತು, 'ಸಾವಿರಾರು ಮೈಲುಗಳಾಚೆಯ ದೇಶಕ್ಕೆ!". "ಆ ದೇಶವೆಲ್ಲಿದೆ,'' ಸಂತ ಕೇಳಿದ. ಪಕ್ಷಿ 'ಗೊತ್ತಿಲ್ಲ'', ಎಂದಿತು. ಆಗ ಸಂತ "ಆ ದೇಶವೆಲ್ಲಿದೆ ಎಂಬುದೇ ನಿನಗೆ ಗೊತ್ತಿಲ್ಲ. ದೇಶದ ನಕಾಶೆಯೂ ಇಲ್ಲ. ದಿಕ್ಕೂಚಿಯೂ ಇಲ್ಲ, ಅಲ್ಲಿ ನೀನು ಹೋಗಿ ತಲುಪುವುದು ಹೇಗೆ!?,'' ಎಂದು ಕೇಳಿದ. "ಸಂತನೇ, ಅದಾವೂದೂ ನನಗೆ ಗೊತ್ತಿಲ್ಲ. ಆದರೆ, ಹೃದಯ ಹೇಳುತ್ತದೆ, ನನಗೆ ಆತ್ಮವಿಶ್ವಾಸವಿದೆ ನಾನು ಖಂಡಿತವಾಗಿಯೂ ಆ ದೇಶವನ್ನು ತಲುಪುತ್ತೇನೆ,'' ಎಂದಿದ್ದೇ ಪಕ್ಷಿ ಗಗನದೆತ್ತರಕ್ಕೆ ಹಾರಿತು. ಇದುವೇ ಆಸ್ತಿಕ ಬುದ್ದಿ!

-ಶ್ರೀ ಸಿದ್ದೇಶ್ವರ ಸ್ವಾಮೀಜಿ

Friday, February 27, 2026

 ಕಥೆ-1049

ನಿಜವಾದ ಸ್ನೇಹವೆಂದರೆ


ಒಮ್ಮೆ ಒಬ್ಬ ತಂದೆ ಮತ್ತು ಪುಟ್ಟ ಮಗಳು ಸೇತುವೆಯೊಂದನ್ನು ದಾಟುತ್ತಿರುತ್ತಾರೆ. ಆಗ ಅಪ್ಪ ಮಗಳ ಹತ್ತಿರ ತನ್ನ ಕೈ ಹಿಡಿದುಕೊಳ್ಳಲು ಹೇಳುತ್ತಾನೆ. ಆ ಪುಟ್ಟ ಮಗಳು “ಅಪ್ಪಾ, ನೀನೇ ನನ್ನ ಕೈ ಹಿಡಿದುಕೋ” ಎನ್ನುತ್ತಾಳೆ. ಗೊಂದಲಗೊಂಡ ಅಪ್ಪ, ಎಲ್ಲ ಒಂದೇ ಅಲ್ಲವೇ ಎನ್ನುತ್ತಾನೆ. ಆಗ ಅವಳು “ನಾನು ನಿನ್ನ ಕೈ ಹಿಡಿದರೆ ಅಕಾಸ್ಮಾತ್ ಆಗಿ ಬಿಟ್ಟು ಬಿಡಬಹುದು. ಆದರೆ ನೀನು ಯಾವ ಕಾರಣಕ್ಕೂ ಕೈ ಬಿಡುವುದಿಲ್ಲವಲ್ಲ” ಎನ್ನುತ್ತಾಳೆ. ಅ ಪುಟ್ಟ ಬಾಲೆಗೆ ಅಪ್ಪನ ಮೇಲಿರುವ ಭರವಸೆಯ ಮತ್ತೊಂದು ಹೆಸರೇ ಸ್ನೇಹ. 

ಸ್ನೇಹಿತನೆಂದರೆ ಒರಗಿಕೊಳ್ಳಲು ಸದಾ ಇರುವ ಭರವಸೆಯ ಹೆಗಲು. ನಮ್ಮೆಲ್ಲ ನೋವುಗಳನ್ನು ಅಹವಾಲುಗಳನ್ನು ಆಲಿಸಲು ಯಾವತ್ತೂ ತೆರೆದಿರುವ ಕಿವಿ. ಸಾಂತ್ವನ ನೀಡುವ ಮಡಿಲು. ಮಹಾಭಾರತ ಯುದ್ಧದ ಸಂದರ್ಭದಲ್ಲಿ ಕೃಷ್ಣ ಬಂದು ಕರ್ಣನ ಹತ್ತಿರ ‘ಮಾರಾಯ, ನೀನೇ ಹಿರಿಯ ಪಾಂಡವ, ಬಂದು ಸಿಂಹಾಸನದ ಮೇಲೆ ಕುಳಿತುಕೋ. ಪಾಂಡವರು ಮತ್ತು ಕೌರವರು ಇಬ್ಬರೂ ಆಗ ಸುಮ್ಮನಿರುತ್ತಾರೆ, ಯುದ್ಧವೂ ಆಗುವುದಿಲ್ಲʼ ಎನ್ನುತ್ತಾನಷ್ಟೇ. ಆಗ ನ್ಯಾಯವಾಗಿಯೇ ಕೌರವನ ಹತ್ತಿರ ಹೋಗಿ, ‘ಗಾಂಧಾರೀ ಪುತ್ರಾ, ಯುದ್ಧದ ತಲೆಬಿಸಿಯೇ ಬೇಡ ಬಿಡು. ನಾನೇ ಕುಂತಿಯ ಹಿರಿಯ ಮಗನಂತೆ. ರಾಜನಾಗು ಅಂತ ಕರೆಯುತ್ತಿದ್ದಾರೆ. ರಾಜ ನಾನಾದರೇನು ನೀನಾದರೇನು, ನೀನೂ ನನ್ನ ತಮ್ಮನೇ. ಆರಾಮಾಗಿ ರಾಜ್ಯವಾಳಿಕೊಂಡು ಇದ್ದು ಬಿಡೋಣʼ ಎಂದು ಎರಡು ಕಡೆಯೂ ಒಳ್ಳೆಯವನಾಗಿದ್ದು ರಾಜನೂ ಆಗಿ ಬಿಡಬಹುದಾಗಿದ್ದ ಸುವರ್ಣಾವಕಾಶ ಕರ್ಣನಿಗಿತ್ತು. ಆದರೆ ಕರ್ಣ ಕೃಷ್ಣನಿಗೆ ಕೊಟ್ಟ ಉತ್ತರ ನಾವೆಲ್ಲ ನೆನಪಿಟ್ಟುಕೊಳ್ಳಬೇಕಾದದ್ದು. ʼಯುದ್ಧದಲ್ಲಿ ಸತ್ತರೂ ಪರವಾಗಿಲ್ಲ, ಸುಯೋಧನನ ಸ್ನೇಹಕ್ಕೆ ಎರಡು ಬಗೆಯುವುದಿಲ್ಲʼ ಎಂದೇ ಹೇಳುತ್ತಾನೆ ಕರ್ಣ. ರಾಜ್ಯ ಲಕ್ಷ್ಮಿಯನ್ನು ಕಡೆಗಣ್ಣಿನಿಂದಲೂ ನೋಡದೇ ಮೃತ್ಯುವನ್ನು ಅಪ್ಪಿಕೊಂಡ ಕರ್ಣನದು ನಿಜವಾದ ಸ್ನೇಹ. ತನ್ನ ಹೆಂಡತಿಯ ಕುತ್ತಿಗೆಯ ಸರವನ್ನು ಎಳೆದು ಹರಿದುಹಾಕಿದ ಕರ್ಣನಿಗೆ ʼಕೆಳಗೆ ಬಿದ್ದ ಮುತ್ತುಗಳನ್ನು ಆಯ್ದುಕೊಡಲೇ ಗೆಳೆಯಾ?ʼ ಎಂದ ಪ್ರಾಣ ಸ್ನೇಹಿತ ಕೌರವನೆಡೆ ಆತನ ನಿಷ್ಟೆ ಯೋಗ್ಯವೇ ಬಿಡಿ.

ಇದು ನಿಜವಾದ ಸ್ನೇಹ. ಅತ್ಯಂತ ದೊಡ್ಡ ನಟ ಯಾರು, ಜನಪ್ರಿಯ ಕ್ರಿಕೆಟಿಗ ಯಾರು ಎನ್ನುವ ಸಮೀಕ್ಷೆಗಳಂತೆ ಜಗತ್ತಿನಲ್ಲಿ ಅತ್ಯುತ್ತಮ ಸ್ನೇಹಿತರು ಯಾರು ಎಂಬ ಸಮೀಕ್ಷೆ ನಡೆದರೆ ಮೊದಲ ಸ್ಥಾನದಲ್ಲಿ ನಿಲ್ಲುವವರು ಕರ್ಣ ಮತ್ತು ದುರ್ಯೋಧನರೇ ಅನ್ನುವುದು ನನ್ನ ಅಭಿಪ್ರಾಯ. ಕಾರಣ ಜಗತ್ತಿನ ಎಲ್ಲ ಶಕ್ತಿಗಳು ಎದುರಾಗಿ ನಿಂತರೂ ನಿಮ್ಮ ಅತ್ಯುತ್ತಮ ಸ್ನೇಹಿತ ಎಂದಿಗೂ ನಿಮ್ಮ ಕೈ ಬಿಡುವುದಿಲ್ಲ.    

ಇತ್ತೀಚಿನ ದಿನಗಳಲ್ಲಿ ವ್ಯವಹಾರದಲ್ಲಿ ಮೋಸ ಹೋಗಿ ನ್ಯಾಯಾಲಯದ, ಪೋಲೀಸ್‌ ಠಾಣೆಯ ಮೆಟ್ಟಿಲು ಹತ್ತುವವರು ಹೆಚ್ಚಾಗಿದ್ದಾರೆ. ದುರ್ದೈವವಶಾತ್‌ ಯಾರನ್ನು ಸ್ನೇಹಿತರೆಂದು ನಂಬಿರುತ್ತಾರೋ ಅಂಥವರಿಂದಲೇ ವಂಚನೆಗೊಳಗಾಗುವ ಪ್ರಸಂಗಗಳನ್ನು ಹೆಚ್ಚು ಹೆಚ್ಚು ನೋಡುತ್ತಿದ್ದೇವೆ. ಐಹಿಕ ಸುಖಗಳ ಬೆನ್ನು ಹತ್ತಿದ, ತತಕ್ಷಣದ ಶ್ರೀಮಂತಿಕೆಯ ಕನಸು ಕಾಣುವ ಮೂರ್ಖ ಜನರು ತಮ್ಮನ್ನೇ ನಂಬಿದವರಿಗೆ ಮೋಸ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ವ್ಯಾವಹಾರಿಕ ದೃಷ್ಟಿಯಿಂದ ಬೆಳೆಸುವ ಸ್ನೇಹ ತನ್ನ ಉದ್ದೇಶ ಮುಗಿದ ಕೂಡಲೇ ಬಿಸಿಲು ಸೋಕಿದ ಮಂಜಿನ ಹನಿಯಂತೆ ಮಂಗಮಾಯವಾಗುವುದನ್ನು ಅನುಭವಿಸುತ್ತಿದ್ದೇವೆ. ಆದರೂ ತಮಾಷೆಯೆಂದರೆ ಸ್ನೇಹದ ಹೆಸರಿನ ಈ ಸ್ವಾರ್ಥ ಸಂಬಂಧವೇ ರಾರಾಜಿಸುತ್ತಿರುವುದಕ್ಕೆ ಸಾಕ್ಷಿಯೂ ಆಗಿದ್ದೇವೆ. 

-ದೀಪಾ ಹಿರೇಗುತ್ತಿ

Thursday, February 26, 2026

 ಕಥೆ-1048 

 ದೃಢತೆ ಮತ್ತು ವಿಶಿಷ್ಟತೆ ನಮ್ಮದಾಗಿರಲಿ

ಒಂದು ಉತ್ತಮ ರಸ್ತೆ ಒಬ್ಬ ಉತ್ತಮ ಚಾಲಕನನ್ನು ಸೃಷ್ಟಿಸಲು ಸಾಧ್ಯವಿಲ್ಲ, ಒಂದು ತಿಳಿ ಆಕಾಶ ಹೇಗೆ ಉತ್ತಮ ಪೈಲಟ್‌ನನ್ನು ನಿರೂಪಿಸಲು ಸಾಧ್ಯವಿಲ್ಲವೋ ಹಾಗೆಯೇ ಜೀವನ ದಲ್ಲಿ ಕಷ್ಟ, ಸೋಲು,ಅವಮಾನ ಇಲ್ಲದಿದ್ದರೆ ನಾವು ಅತ್ಯುತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವೇ ಇಲ್ಲ. ಬದುಕು ಅನುಭವಿಸಲೆಂದೇ ಇರುವಂಥದ್ದು. ಆದರೆ ಅರಿವು ಮತ್ತು ಇತರರ ಅನುಭವದ ಸಾರವನ್ನು ಜೊತೆಗಿಟ್ಟುಕೊಂಡಾಗಲೇ ಜೀವನದಲ್ಲಿ ಸಂತೃಪ್ತಿಯೆಡೆಗೆ ಸಾಗಬಹುದು.


ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಯಾವುದೂ ಶಾಶ್ವತವಲ್ಲ ಎನ್ನುವ ನಿತ್ಯಸತ್ಯ ವಿರಕ್ತಿಗೆ ಪೂರಕವಾಗಬಾರದು. ಬದಲಿಗೆ ಅದು ಇರುವಾಗ ಅದನ್ನು ಒಳ್ಳೆಯ ರೀತಿಯಿಂದ ಬಳಸಿ ಕೊಳ್ಳುವುದು ನಮ್ಮ ಗುರಿಯಾಗಬೇಕು. ನಮ್ಮ ಮಧ್ಯೆ ಸಾವಿರ ಜನ ತಮ್ಮ ಬದುಕಿಗಾಗಿ ಹೋರಾಟ ನಡೆಸುತ್ತಲೇ ಇರುತ್ತಾರೆ. ಆದರೆ ನಮ್ಮ ಜೀವನವನ್ನು ನಾವು ಹೇಗೆ ರೂಪಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಆತ್ಮವಿಶ್ವಾಸ ಇದ್ದಲ್ಲಿ ಎಲ್ಲವನ್ನೂ ಮೆಟ್ಟಿ ನಿಲ್ಲಬಹುದು. ಕೆಲವರು ಪ್ರಶ್ನೆ ಹಾಕಬಹುದು ಬರಿಯ ಆತ್ಮವಿಶ್ವಾಸ ಇದ್ರೆ ಸಾಕಾ? ಎಂದು. ನಿಜ ಆತ್ಮವಿಶ್ವಾಸದಿಂದ ಎಲ್ಲವೂ ಆಗುವುದಿಲ್ಲ. ಆದರೆ ಮಳೆ ಬಂದಾಗ ಕೊಡೆಯಿಂದ ಮಳೆಯನ್ನು ನಿಲ್ಲಿಸಲು ಆಗದೇ ಇರಬಹುದು ಆದರೆ ಕೊಡೆಯಿಂದ ನಮ್ಮನ್ನ ರಕ್ಷಿಸಿಕೊಳ್ಳಬಹುದು ಅಲ್ವ.


ಬಹಳ ಸಲ ನಾವು ನಮ್ಮ ಬಗ್ಗೆ ಯೋಚಿಸುವ ಬದಲು ಬೇರೆಯವರು ನಮ್ಮ ಬಗ್ಗೆ ಏನು ಅಭಿಪ್ರಾಯ ಹೊಂದಿದ್ದಾರೆ ಅವರು ನನ್ನ ಬಗ್ಗೆ ಏನು ಅಂದುಕೊಂಡು ಬಿಟ್ಟರೋ ಎನ್ನುವ ಗೊಂದಲದಲ್ಲೇ ಸಾಕಷ್ಟು ಬದುಕನ್ನು ಕಳೆದುಬಿಡುತ್ತೇವೆ. ಆದರೆ ನಮ್ಮ ಬಗ್ಗೆ ನಾವೆಷ್ಟು ತಿಳಿದುಕೊಂಡಿದ್ದೇವೆ ಎನ್ನುವುದರ ಅರಿವು ನಮಗೇ ಇರುವುದಿಲ್ಲ.! ನಮ್ಮನ್ನು ಪ್ರೀತಿಸುವವರು ದ್ವೇಷಿಸುವವರು ಸಾವಿರ ಮಂದಿ ಇರಬಹುದು. ಆದರೆ ನಮಗೆ ನಾವು ಅರ್ಥವಾದಷ್ಟು ಬೇರೆಯವರಿಗೆ ಅರ್ಥ ಆಗಿರುವುದಿಲ್ಲ. ಹಾಗಾಗಿ ನಮಗೆ ನಾವೇ ನಮ್ಮ ಬೆಸ್ಟ್ ಫ್ರೆಂಡ್! ಹುಡುಕಿ ಪಡೆಯುವ ಖುಷಿ, ನನ್ನಲ್ಲಿ ಯಾವ ಸಾಮರ್ಥ್ಯವು ಇಲ್ಲ ಎಂದುಕೊಳ್ಳುವುದಕ್ಕಿಂತ ಮೂರ್ಖತನ ಮತ್ತೊಂದಿಲ್ಲ.


ಇರುವ ಸಾಮರ್ಥ್ಯವನ್ನು ನಾನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಂಡಿದ್ದೇನೆ ಎಂದು ಅರಿತಿದ್ದೇವಾ? ಇಲ್ಲ. ನನ್ನ ಜೊತೆ ಇದ್ದವರಲ್ಲ ಏನೆಲ್ಲಾ ಸಾಧನೆ ಮಾಡಿಬಿಟ್ರು, ನಾನು ಮಾತ್ರ ಮೂಲೆ ಗುಂಪಾಗಿಬಿಟ್ಟೆ ಅನ್ನೋದಕ್ಕಿಂತ ಐ ಆ್ಯಮ್ ದಿ ಬೆಸ್ಟ್; ಐ ಕ್ಯಾನ್ ಡೂ ಇಟ್ ಅಂತ ಯಾಕೆ ಅಂದುಕೊಳ್ಳಲ್ಲ..? ಒಬ್ಬ ಹುಡುಗ ತನ್ನ ಶಾಲಾ ಜೀವನದಲ್ಲಿ ಓದುತ್ತಿರುವಾಗ ಶಿಕ್ಷಕರು ಹೀ ಹಿಸ್ ನಾಟ್ ವರ್ತಿ ಇವನಿಂದ ಏನೂ ಸಾಧ್ಯವಿಲ್ಲ ಅಂದಾಗ ಆತ ಸುಮ್ಮನಾಗಲಿಲ್ಲ. ಸೋಲು ತಾನೇ? ಅದೇನ್ ಮಹಾ ಎಂದುಕೊಂಡಾತನೇ ಇವತ್ತು ಎಲ್ಲರಿಗೂ ಬೆಳಕನ್ನ ನೀಡಿರುವ ಒಬ್ಬ ಪ್ರಸಿದ್ಧ ವಿಜ್ಞಾನಿ! ಸಾಧ್ಯವಾದ್ರೆ ಅವರು ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಹಾಗಂತ ನಾನು ಅಹಂಕಾರದಿಂದ ಹೇಳುತ್ತಿರುವುದಲ್ಲ.


ಹಾಗೆ ಹುಡುಕಿ ತಿಳಿಯುವುದರಲ್ಲಿಯೂ ಇರುವ ಖುಷಿ ಸಿಗಲಿ ಎನ್ನುವುದೇ ಕಾರಣ. ಕೊನೆಯದಾಗಿ ಒಂದು ಸಲ ಇವತ್ತಿನ ದಿನ ಸಾಧನೆಯ ಶಿಖರದಲ್ಲಿರುವವರನ್ನು ನೆನಪಿಸಿಕೊಳ್ಳಿ. ಅವರಿಗೇನು ಆ ಸ್ಥಾನ ಸುಲಭವಾಗಿ ಸಿಕ್ಕಿ ಬಿಟ್ಟಿದೆ ಎಂದರೆ ಸುಳ್ಳಾದೀತು. ಅವರು ನಿಮಗೆ ಇಷ್ಟವೋ ಇಲ್ಲವೋ ಎರಡನೆಯ ಮಾತು. ಇತರರ ಮಾತಿನಲ್ಲಿ ಅವರ ಬಗ್ಗೆ ತಿಳಿದಿರುವುದಕ್ಕಿಂತ ಹೆಚ್ಚಾಗಿ ಅವರ ಕುರಿತು ಅಧಿಕೃತ ಮಾಹಿತಿಗಳನ್ನು ಕಲೆಹಾಕಿ ಓದಿ. ಅವರು ಬದುಕಲ್ಲಿ ಪಟ್ಟ ಪಾಡು ಅಥವಾ ಅವರ ಜೀವನದ ಯಶೋಗಾಥೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅರ್ಥವಾದಾಗ ನಮ್ಮ ದಾರಿ ಸುಗಮವೆನಿಸುತ್ತದೆ.


ಕೃಪೆ:ಪಲ್ಲವಿಗೌಡ,

Wednesday, February 25, 2026

 ಕಥೆ-1047

ಅವಮಾನದಿಂದ IPS ಅಧಿಕಾರಿಯಾದ ಕಥೆ..



2013 ರಲ್ಲಿ, ಅವರು ಮರೈನ್ ಪೊಲೀಸ್ ಪಡೆಯಲ್ಲಿ ಕಾನ್ಸ್ಟೇಬಲ್ ಆಗಿ ಸೇರಿದರು ಸಾವಿರಾರು ಸಿಬ್ಬಂದಿಗಳಲ್ಲಿ ಅವರೂ ಒಬ್ಬರಾಗಿದ್ದರು.


2018 ರಲ್ಲಿ, ತಾಲೀಮಿಗೆ (drill) ತಡವಾಗಿ ಬಂದ ಕಾರಣಕ್ಕಾಗಿ ಅವರ ಮೇಲಧಿಕಾರಿ ಎಲ್ಲರ ಮುಂದೆ ಇವರನ್ನು ಹೀಗಳೆದರು.


"ಈ ಸಾಹೇಬರು ಐಪಿಎಸ್ ಅಥವಾ ಐಎಎಸ್ ಅಧಿಕಾರಿ ಆಗ್ತಾರಂತೆ!" ಎಂದು ಎಲ್ಲರ ಮುಂದೆ ಅವಮಾನ ಮಾಡಿದರು..


ಅವರನ್ನು ತಾಲೀಮಿನಿಂದ ಹೊರಹಾಕಿ, ಮುಖಕ್ಕೆ ಹೊಡೆದಂತೆ ಹೀಗೆ ಹೇಳಿದರು.


"ಕನಸು ಕಾಣಬೇಡ. ನೀನು ಕೇವಲ ಒಬ್ಬ #ಕಾನ್ಸ್ಟೇಬಲ್ ಅಷ್ಟೇ."


ಆ ಅವಮಾನ ಎಲ್ಲವನ್ನೂ ಬದಲಿಸಿತು.

ಅದೇ ದಿನ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. ಅದು ಕೋಪದಿಂದಲ್ಲ — ಬದಲಿಗೆ ಒಂದು ದೃಢ ಸಂಕಲ್ಪದೊಂದಿಗೆ. ಅವರು ನಿರ್ಧರಿಸಿದರು; ಮರಳಿ ಬಂದರೆ ಕಾನ್ಸ್ಟೇಬಲ್ ಆಗಿ ಅಲ್ಲ, ಐಪಿಎಸ್ ಅಧಿಕಾರಿಯಾಗಿಯೇ ಬರುತ್ತೇನೆ ಎಂದು.

ಯುಪಿಎಸ್‌ಸಿ ಪಯಣ ಸುಲಭವಾಗಿರಲಿಲ್ಲ. ಹಲವು ಬಾರಿ ವಿಫಲರಾದರು. ಆದರೆ ಅವರ ಗುರಿ ಮಾತ್ರ ಬದಲಾಗಲಿಲ್ಲ.


ಕೊನೆಗೆ ತಮ್ಮ ಐದನೇ ಪ್ರಯತ್ನದಲ್ಲಿ, ಅಖಿಲ ಭಾರತ ಮಟ್ಟದಲ್ಲಿ 350ನೇ ಶ್ರೇಣಿ (AIR 350) ಪಡೆದರು.

ಅವರು ಐಪಿಎಸ್ ಅಧಿಕಾರಿಯಾದರು.


"ನೀನು ಬರಿ ಕಾನ್ಸ್ಟೇಬಲ್" ಎಂಬ ಹೀಯಾಳಿಕೆಯಿಂದ ಹಿಡಿದು, ಹೆಗಲ ಮೇಲೆ ಐಪಿಎಸ್ ನಕ್ಷತ್ರಗಳನ್ನು ಗಳಿಸುವವರೆಗೆ — ಇದು ಅವರ ಅದಮ್ಯ ಛಲದ ಇದು ಉದಯ್ ಕೃಷ್ಣ ರೆಡ್ಡಿ ಅವರ ಕಥೆ.


ಯಾರಾದರೂ ನಮ್ಮ ಮೇಲೆ ಕಲ್ಲು ಎಸೆದರೆ, ಆ ಕಲ್ಲುಗಳನ್ನು ಬಳಸಿಕೊಂಡು ಒಂದು ಸಾಮ್ರಾಜ್ಯವನ್ನೇ ನಿರ್ಮಿಸಿ.

ಯಾವ ಕನಸೂ ಕೂಡ ದೊಡ್ಡದಲ್ಲ... 🙏

                                                  ✍️ :: ಸಿದ್ದೇಶ್

Tuesday, February 24, 2026

 ಕಥೆ-1046

25 ವರ್ಷಕ್ಕೆ ಸಿವಿಲ್ ನ್ಯಾಯಾಧೀಶ


ಈ ಹುಡುಗನ ಹೆಸರು... ಕ್ಷಮಿಸಿ ಇವರ ಹೆಸರು "ಸುಮಂತ್ ಮಂಜುನಾಥ್ ನಾಯ್ಕ್" ವಯಸ್ಸಿನ್ನು ಕೇವಲ 25.. ಆದರೆ ಗೌರವ ಕೊಟ್ಟು ಮಾತನಾಡುವ ಮಟ್ಟಕ್ಕೆ ಇವರು ಸಾಧಿಸಿದ್ದಾರೆ.. ಅದೂ ಸಹ ವಿದ್ಯೆಯಿಂದ.. ವಿದ್ಯೆ ಅನ್ನೋದು ಭೂಮಿ ಮೇಲಿನ ಅತೀ ಅಮೂಲ್ಯವಾದ ಆಸ್ತಿ.. ಅದಕ್ಕೆ ನೈಜ್ಯ ಉದಾಹರಣೆ ಫೋಟೋದಲ್ಲಿರುವ ವ್ಯಕ್ತಿ.. 


ಸುಮಂತ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾದವರು.. ತಂದೆ ಮಂಜುನಾಥ್ ನಾಯ್ಕ್.. ಹಾಗೂ ತಾಯಿ ಸುಜಾತ ನಾಯ್ಕ್. ಇಬ್ಬರೂ ಸಹ ವಕೀಲರು.. ಇವರ ಮಗ ಸುಮಂತ್ ಅವರು ಈಗ ಕೇವಲ 25 ವರ್ಷಕ್ಕೆ ಸಿವಿಲ್ ನ್ಯಾಯಾಧೀಶರಾಗುವ ಮೂಲಕ ವಿದ್ಯೆಯ ಮೂಲಕವೇ ಸಾಧನೆ ಮಾಡಿ ತೋರಿದ್ದಾರೆ.. 


ಸುಮಂತ್ 2025 ರ ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿಯೇ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆಯುವ ಮೂಲಕ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ..


ಸುಮಂತ್ ಅವರು ಪುಸ್ತಕದ ಹುಳು ಏನಲ್ಲಾ.. ಆದರೆ ವಿದ್ಯೆಯನ್ನು ಜ್ಞಾನ ಎಂದು ಪರಿಗಣಿಸಿದವರು.. ರಾಜ್ಯ ಮಟ್ಟದ ಚೆಸ್ ಆಟಗಾರರೂ ಆಗಿರುವ ಸುಮಂತ್ ಅವರೀಗ ನ್ಯಾಯಾಧೀಶರು.. ವಿದ್ಯೆ ಇಂದ ಏನಾಗುತ್ತದೆ.. ಎನ್ನುವವರಿಗೆ ವಿದ್ಯೆಯಿಂದಲೇ ಇಂದು ತನ್ನ ತಂದೆ ತಾಯಿಯೇ ತಮ್ಮ ಮುಂದೆ ನಿಂತು ವಾದ ಮಾಡಬಹುದಾದ ಮಟ್ಟಕ್ಕೆ ಬೆಳೆದು ನಿಲ್ಲಬಹುದೆಂದು ತೋರಿಸಿಕೊಟ್ಟಿದ್ದಾರೆ.. ಯುವಜನತೆಗೆ ಸ್ಪೂರ್ತಿಯಾಗಿರುವ ನ್ಯಾಯಾಧೀಶರಾದ ಸುಮಂತ್ ಅವರಿಗೆ ಅಭಿನಂದನೆಗಳು


-ರಮ್ಯ ಜಗತ್ ಮೈಸೂರು..

Monday, February 23, 2026

 ಕಥೆ-1045

ಪ್ರವಾಹಕ್ಕೆ ಎದುರಾಗಿ ಈಜಿದ ದಿಟ್ಟೆ


ಬೆಂಗಳೂರಿನ ರಜನಿ ಎಲ್ಲ ಮಕ್ಕಳಂತೆ ಆಡಿಕೊಂಡಿದ್ದ ಹುಡುಗಿ. ಒಂಬತ್ತು ವರ್ಷದವಳಿದ್ದಾಗ ಸಣ್ಣ ಶೀತವೊಂದಕ್ಕಾಗಿ ವೈದ್ಯರು ಕೊಟ್ಟ ಔಷಧಿ ತೀವ್ರ ಅಲರ್ಜಿಯಾಗಿ ಅವರ ಕಣ್ಣಿನ ದೃಷ್ಟಿ ನಿಧಾನವಾಗಿ ಕ್ಷೀಣಿಸಲು ಪ್ರಾರಂಭವಾಯಿತು. ಕಾಮರ್ಸ್‌ ಪದವಿ ಮುಗಿಯುವ ವೇಳೆಗೆ ಬಲಗಡೆಯ ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಹೋಯಿತು. ಎಡಗಣ್ಣಿನ ದೃಷ್ಟಿಯೂ ಕ್ಷೀಣಿಸಲು ಶುರುವಾಯಿತು. ಆದರೆ ಅದರ ಹೊರತಾಗಿಯೂ ರಜಿನಿ ಸಿಎ ಓದಬೇಕೆಂದು ಪಣ ತೊಟ್ಟರು. ದೃಷ್ಟಿ ಸರಿ ಇರುವವರಿಗೇ ಚಾರ್ಟೆಡ್‌ ಅಕೌಂಟಟ್‌ ಆಗುವುದು ಕಷ್ಟಕರವಾದದ್ದು. ಆದರೆ ರಜನಿ ತಾವು ಚಾರ್ಟೆಡ್‌ ಅಕೌಂಟಟ್‌ ಆಗಲೇಬೇಕೆಂದು ತೀರ್ಮಾನಿಸಿದ್ದರು. ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗಲೇ ಎಡಗಣ್ಣಿನ ದೃಷ್ಟಿಯೂ ಹೊರಟುಹೋಯಿತು. ಇದು ಆಗಿದ್ದು 1993ರಲ್ಲಿ. ಧೃತಿಗೆಟ್ಟ ಹುಡುಗಿಗೆ ದಿಕ್ಕೇ ತೋಚಲಿಲ್ಲ. ಕಾರಣ ಆಗ ಅವರಿಗೆ ಓದಲು ಸಹಾಯ ಮಾಡುವ ತಂತ್ರಜ್ಞಾನ ಬೆಳೆದಿರಲಿಲ್ಲ. ಹೀಗಾಗಿ ಏಳು ವರ್ಷಗಳ ಕಾಲ ಓದು ನಿಲ್ಲಿಸಿದರು. ಸಹೋದರ ಮತ್ತು ಪಾಲಕರು ಆತ್ಮ ಸ್ಥೈರ್ಯ ಮುದುಡಲು ಬಿಡಲಿಲ್ಲ. 2000ನೇ ಇಸವಿಯಲ್ಲಿ ಮತ್ತೆ ಓದಲು ಮರಳಿದರು. ಕಂಪ್ಯೂಟರ್‌ ಪರದೆಯ ಮೇಲಿನ ವಾಕ್ಯಗಳನ್ನು ಓದುವ ಸಾಫ್ಟ್‌ ವೇರ್‌ ಸಹಾಯ ಮಾಡಿತು. ಹಗಲೂ ರಾತ್ರಿ ಕಷ್ಟಪಟ್ಟರು. ಅಂತೂ 2002ರಲ್ಲಿ ಭಾರತದ ಮೊದಲ ದೃಷ್ಟಿವಿಹೀನ ಮಹಿಳಾ ಚಾರ್ಟೆಡ್‌ ಅಕೌಂಟಂಟ್‌ ಆದರು ರಜನಿ ಗೋಪಾಲಕೃಷ್ಣ.    

ಆದರೆ ರಜನಿ ಕೆಲಸದ ಹುಡುಕಾಟದಲ್ಲಿ ತೊಡಗಿದಾಗ ಅವರ ದೃಷ್ಟಿದೋಷವನ್ನೇ ಮುಖ್ಯವೆಂದು ಪರಿಗಣಿಸಲಾಯಿತು. ವಿಶೇಷ ಚೇತನರಿಗೆ ಸೌಲಭ್ಯಗಳ ಕೊರತೆಗಿಂತ ಸಮಸ್ಯೆಯನ್ನುಂಟು ಮಾಡುವ ಸಂಗತಿ ಎಂದರೆ ಸಮಾಜದ ಯೋಚನಾ ವಿಧಾನ ಎನ್ನುತ್ತಾರೆ ರಜನಿ. ವಿಶೇಷ ಚೇತನರು ಏನು ಮಾಡಬಲ್ಲರು ಎಂಬ ಪ್ರಶ್ನೆ ಕೇಳದೇ ಅವರಲ್ಲಿರುವ ಸಾಮರ್ಥ್ಯಕ್ಕೆ ಸಮಾಜ ಬೆಲೆ ಕೊಟ್ಟಾಗ ಮಾತ್ರ ಸರ್ಕಾರಗಳ, ಕಾರ್ಪೋರೇಟ್‌ ಸಂಸ್ಥೆಗಳ ಒಳಗೊಳ್ಳುವಿಕೆಯ ಘೋಷಣೆಗಳಿಗೆ ಅರ್ಥ ಬರುತ್ತದೆ ಎನ್ನುತ್ತಾರೆ ಅವರು. ಬೇರೆಯವರು ತಮ್ಮ ದೃಷ್ಟಿಹೀನತೆಯಿಂದ ಹಿಂಜರಿದರೂ ತಾವು ಹಿಂದೆ ಸರಿಯಲಿಲ್ಲ ಎನ್ನುವ ರಜನಿ ಗೋಪಾಲಕೃಷ್ಣ ಈಗ ಭಾರತದ ಪ್ರಮುಖ ಸಾಫ್ಟ್‌ವೇರ್‌ ಕಂಪನಿಗಳ ಜತೆ ಕೆಲಸ ಮಾಡುತ್ತಿದ್ದಾರೆ ಮತ್ತು ತಮ್ಮಂತಹುದೇ ಸಮಸ್ಯೆ ಇರುವವರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

ಆಘಾತ ಅಪ್ಪಳಿಸಿದಾಗ ರಜನಿ ಅದನ್ನು ಎದುರಿಸಿದ ಬಗೆ ಪ್ರತಿಯೊಬ್ಬರಿಗೂ ಮಾದರಿ. ಸಮಸ್ಯೆ ಶುರುವಾದಾಗ ಶಾಲೆಯಲ್ಲೂ ಸಮಸ್ಯೆಯಾಯಿತು. ಸಂಬಂಧಿಕರು ಪರಿಚಯದವರ ಅನುಕಂಪ ಬಹಳ ಕಿರಿಕಿರಿಯನ್ನುಂಟು ಮಾಡುತ್ತಿತ್ತು. ಅದರಿಂದ ಪಾರಾಗಲು ಹೆಚ್ಚು ಹೆಚ್ಚು ಓದಿದರು. ಕಾಲೇಜಿನಲ್ಲಿ ಸಂವೇದನಾಶೀಲ ಸ್ನೇಹಿತರು ಸಿಕ್ಕಿದರು. ಎರಡನೇ ಕಣ್ಣಿನ ದೃಷ್ಟಿ ಕೂಡ ಹೋದಾಗ ತಮ್ಮ ಮೊದಲ ಸವಾಲು ತನಗಿನ್ನು ಕಣ್ಣು ಕಾಣುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದಾಗಿತ್ತು ಎನ್ನುತ್ತಾರೆ ರಜನಿ. ಆದರೆ ಕೊರಗುತ್ತ ಕೂರುವ ಬದಲು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ಪಡೆಯುವುದೊಂದೇ ತಮ್ಮೆದುರು ಇರುವ ದಾರಿ ಎಂದು ಯೋಚಿಸಿದರು. ಅಷ್ಟೇ ಅಲ್ಲ, ಚೆಸ್‌ ಕಲಿತರು, ಅಡುಗೆ ಕಲಿತರು, ವೀಣೆ ನುಡಿಸಲು ಕಲಿತರು. ತಮ್ಮ ಸಾಧನೆಗೆ ರಾಷ್ಟ್ರಪತಿಗಳಿಂದ ಸನ್ಮಾನವನ್ನೂ ಪಡೆದರು. 

ನಮಗೆ ಮಿತಿಗಳನ್ನು ನಾವೇ ಹಾಕಿಕೊಳ್ಳುವುದೇ ಹೊರತು ಮನುಷ್ಯನಿಗೆ ಸಾಧಿಸಲು ಸಾಧ್ಯವಾಗದ್ದು ಏನೂ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ ರಜನಿಯವರ ಬದುಕು ಸಣ್ಣ ಸಣ್ಣ ವಿಷಯಗಳಿಗೂ ಭರವಸೆ ಕಳೆದುಕೊಳ್ಳುವವರಿಗೆ ಬಹುದೊಡ್ಡ ಮಾದರಿ. 

-ದೀಪಾ ಹಿರೇಗುತ್ತಿ

Sunday, February 22, 2026

ಕಥೆ-1044

ನೀನ್ ಓದಮ್ಮ.. ನಾವ್ ಚಪ್ಪಲಿ ಹೊಲಿತೀವಿ..


ಫೋಟೋದಲ್ಲಿರುವ ಹೆಣ್ಣು ಮಗಳ ಬಗ್ಗೆ ಅದಾಗಲೇ ಒಂದಷ್ಟು ಜನರಿಗೆ ಗೊತ್ತಿರುತ್ತದೆ.. ಆದರೆ ಇವರ ಬದುಕಿನ ಕತೆ ಮೈ ಜುಮ್ಮೆನ್ನುತ್ತದೆ..


ಇವರ ಹೆಸರು ಪದ್ಮಾವತಿ.. ದಾಂಡೇಲಿಯ ಬಾಂಬೂಗೇಟ್ ನಲ್ಲಿ ಇವರ ವಾಸ.. ಇವರ ತಂದೆ ನಾಗಣ್ಣ.. ಚಪ್ಪಲಿ ಹೊಲಿಯುವುದು ಇವರ ಕಾಯಕ.. ನಾಗಣ್ಣ ಹಾಗೂ ಪತ್ನಿಗೆ ಮೂರು ಹೆಣ್ಣು ಮಕ್ಕಳು ಹಾಗೂ ಐದು ಜನ ಗಂಡು ಮಕ್ಕಳು.. ನಾಗಣ್ಣ ಹಾಗೂ ಪತ್ನಿ ಇಬ್ಬರೂ ಸಹ ಚಪ್ಪಲಿ ಹೊಲಿದೇ ಎಂಟು ಮಕ್ಕಳನ್ನು ಚೆನ್ನಾಗಿ ನೋಡಿಕೊಂಡಿದ್ದರು.. ಪದ್ಮಾವತಿ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಓದಲು ಆಸಕ್ತಿ.. ಅದೇ ರೀತಿ ತಂದೆ ನಾಗಣ್ಣ ಕಷ್ಟವಾದರೂ ಮಗಳನ್ನು ಚೆನ್ನಾಗಿಯೇ ಓದಿಸುತ್ತಿದ್ದರು.. ಆದರೆ ಕೆಲ ವರ್ಷಗಳ ಹಿಂದೆ ನಾಗಣ್ಣ ಅನಾರೋಗ್ಯದಿಂದ ತೀರಿಕೊಂಡರು..


ಮಗಳ ಓದುವ ಕನಸು ಅಷ್ಟಕ್ಕೆ ನಿಲ್ಲುವಂತಾಯ್ತು.. ಆದರೆ ಆ ಸಮಯದಲ್ಲಿ ಪದ್ಮಾವತಿಯ ಬೆನ್ನಿಗೆ ನಿಂತವರು ಅವರ ಇಬ್ಬರು ಅಣ್ಣಂದಿರು.. ನಾವು ಮನೆ ನೋಡಿಕೊಳ್ತೇವೆ.. ಜೊತೆಗೆ ನಿನ್ನನ್ನೂ ಓದಿಸ್ತೇವೆ.. ನೀನು ಏನು ಬೇಕಿದ್ರೂ ಓದು ಎನ್ನುವ ಭರವಸೆ ನೀಡಿದರು.. ಅಣ್ಣಂದಿರು ಇಬ್ಬರೂ ಸಹ ಅಪ್ಪನ ಕುಲ ಕಸುಬು ಚಪ್ಪಲಿ ಹೊಲಿಯುವುದನ್ನೇ ಮುಂದುವರೆಸಿ ಮನೆ ಸಂಸಾರ ನಿಭಾಯಿಸುವುದರ ಜೊತೆಗೆ ತಂಗಿಗೆ ಆರ್ಥಿಕ ನೆರವು ಕೊಟ್ಟು ಓದನ್ನು ಮುಂದುವರೆಸುವಂತೆ ನೋಡಿಕೊಂಡರು..


ಇತ್ತ ಬಡತನ ಅರಿತಿದ್ದ ಪದ್ಮಾವತಿ ಅವರು ಓದಿದ್ದು ದಾಂಡೇಲಿಯ ಬಂಗೂರು ನಗರದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ.. ಕನ್ನಡ ಮೀಡಿಯಂ ನಲ್ಲಿಯೇ ಶಾಲಾ ಶಿಕ್ಷಣ ಮುಗಿಸಿ.. ನಂತರ ಪದವಿಯನ್ನೂ ಮುಗಿಸಿ.. ಬೈಲಹೊಂಗಲ್ ನಲ್ಲಿ ಕಾನೂನು ಪದವಿ ಮಾಡಿದರು..


ಬಡತನದಿಂದ ಬೆಂದಿದ್ದ ಕುಟುಂಬಕ್ಕೆ ಚೂರು ಆಸರೆಯಾಗಬೇಕೆಂದು ಹಳಿಯಾಲದ ಬಾರ್ ಕೌನ್ಸಿಲ್ ನಲ್ಲಿ ವಕೀಲರಾಗಿ ತಮ್ಮ ಕೆಲಸ ಆರಂಭಿಸಿದರು..


ಇಷ್ಟಕ್ಕೆ ಸುಮ್ಮನಾಗದ ಪದ್ಮಾವತಿ ಅವರು ನ್ಯಾಯಾಧೀಶೆಯಾಗಬೇಕೆಂಬ ಪಣ ತೊಟ್ಟರು.. ಅಖಿಲ ಭಾರತ ವಕೀಲರ ಒಕ್ಕೂಟ ನೀಡುವ ಉಚಿತ ಆನ್ ಲೈನ್ ತರಬೇತಿಯನ್ನೇ ಶ್ರದ್ಧೆಯಿಂದ ಪಡೆದುಕೊಂಡ ಪದ್ಮಾವತಿ ಅವರು 2025 ರ ಸಾಲಿನ ಪರೀಕ್ಷೆ ಬರೆದು ಇಂದು ಕರ್ನಾಟಕದ ಸಿವಿಲ್ ನ್ಯಾಯಾಧೀಶೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ..


ನನ್ನ ಈ ಸಾಧನೆಗೆ ನನ್ನ ಸಹೋದರರೇ ಕಾರಣ.. ಅಂದು ಅವರು ನಾವು ಚಪ್ಪಲಿ ಹೊಲೆಯುತ್ತೇವೆ ನೀನು ಓದಮ್ಮಾ ಎಂದಿದ್ದಕ್ಕೆ ನಾನಿಂದು ಈ ಸಾಧನೆ ಮಾಡಲು ಸಾಧ್ಯವಾಯಿತು.. ಶಿಕ್ಷಣ ಎನ್ನುವುದು ಬದುಕನ್ನು ಸುಭದ್ರ ಪಡಿಸುತ್ತದೆ.. ನಾನು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದಿದ್ದಾರೆ..


ಪ್ರತಿಯೊಬ್ಬ ಗಂಡಿನ ಯಶಸ್ಸಿನ ಹಿಂದೆ ಒಬ್ಬಳು ಹೆಣ್ಣು ಇರುತ್ತಾಳೆ ಎನ್ನುವ ಮಾತು ಎಷ್ಟು ಸತ್ಯವೋ.. ಅದೇ ರೀತಿ ಪ್ರತಿಯೊಬ್ಬ ಹೆಣ್ಣಿನ ಯಶಸ್ಸಿನ ಹಿಂದೆಯೂ ಈ ರೀತಿ ಸಹೋದರನೋ ತಂದೆಯೋ ಅಥವಾ ಗಂಡನೋ ಇದ್ದೇ ಇರುತ್ತಾರೆ.. ಜೊತೆಗೆ ಬಡತನ ಕಂಡ ಆ ದಿನಗಳು ಸಹ ಸಾಧನೆಗೆ ಕಾರಣವಾಗಿರುತ್ತವೆ..

ಗೌರವಯುತ ನ್ಯಾಯಾಧೀಶರಾದ ಪದ್ಮಾವತಿ ಅವರಿಗೆ ಅಭಿನಂದನೆಗಳು.. 

-ರಮ್ಯ ಜಗತ್ ಮೈಸೂರು..

Saturday, February 21, 2026

 ಕಥೆ-1043

ಹರ ಮುನಿದರೆ ಗುರು ಕಾಯುವನು..


ಗುರುಗಳಾದ ಸಮರ್ಥ ರಾಮದಾಸರಿಗೆ ಅನೇಕ ಶಿಷ್ಯರಿದ್ದರು. ಪ್ರತಿದಿನ ಒಬ್ಬ ಶಿಷ್ಯ ಮನೆ ಮನೆಗೆ ಹೋಗಿ ಭಿಕ್ಷೆ ಪಡೆದು ತರುತ್ತಿದ್ದ. ಒಂದು ದಿನ ಭಿಕ್ಷೆಗೆ ಹೋದಾಗ ಒಂದು ಮನೆಯ ಮುಂದೆ “ಸಮರ್ಥ ಗುರೂಜಿ ಕೀ ಜೈ, ಭವತಿ ಭಿಕ್ಷಾಂದೇಹಿ” ಎಂದು ಕೂಗಿದ. ಸ್ವಲ್ಪ ಹೊತ್ತಿಗೆ ದಡ್ಡ್ ಅಂತ ಬಾಗಿಲು ತೆಗೆದು ಒಬ್ಬ ವಿಚಿತ್ರ ಹಾಗೂ ಭಯಂಕರವಾದ ಮಾಂತ್ರಿಕ ವ್ಯಕ್ತಿ ಹೊರಗೆ ಬಂದ. ಏಯ್ ನನ್ನ ಮನೆ ಮುಂದೆ ನಿಂತು, ಬೇರೆಯವರ ಗುಣಗಾನ ಮಾಡುವೆಯಾ? ನಿನಗೆಷ್ಟು ಧೈರ್ಯ ಯಾರು ಆ ನಿನ್ನ ‘ಸಮರ್ಥ’ ಬೊಗಳೊ ಎಂದ. ಶಿಷ್ಯ ಹೇಳಿದ ನನ್ನ ಗುರು “ಸಮರ್ಥ ರಾಮದಾಸರು” ಅವರೇ ಸರ್ವ ಸಮರ್ಥರು ಎಂದು ಜೋರಾಗಿ ಧೈರ್ಯದಿಂದ ಹೇಳಿದ. ಇದನ್ನು ಕೇಳಿದ ಮಾಂತ್ರಿಕ ಸಿಟ್ಟಿನಿಂದ ನನ್ನ ಮನೆ ಬಾಗಿಲಿಗೆ ಬಂದು ಅನ್ಯರ ಗುಣಗಾನ ಮಾಡುವೆಯಾ? ನೋಡೀಗ ನಿನಗೆ ತಕ್ಕ ಶಾಸ್ತಿ ಮಾಡುವೆ. ನಿನ್ನ ಗುರುವಿಗೆ ಎಷ್ಟು ಸಾಮರ್ಥ್ಯವಿದೆಯೋ ನೋಡೇ ಬಿಡುವೆ. ನಾನು ಈಗ ನಿನಗೆ ಮರಣದ ಶಾಪ ಕೊಡುವೆ ನೀನು ನಾಳಿನ ಸೂರ್ಯೋದಯ ನೋಡುವುದಿಲ್ಲ ಎಂದು ಹೇಳಿ ಒಳಹೋಗಿ ದಡಾರ್ ಅಂತ ಬಾಗಿಲು ಹಾಕಿಕೊಂಡ.


ಶಿಷ್ಯನಿಗೆ ಕೈ ಕಾಲೇ ನಿಂತು ಹೋದಂತಾಯಿತು. ಅಕ್ಕಪಕ್ಕದವರು ರಸ್ತೆಯಲ್ಲಿ ಓಡಾಡುವರು ಈತನನ್ನು ನೋಡಿ, ಅಯ್ಯೋ ಪಾಪ ಚಿಕ್ಕ ವಯಸ್ಸು ,ಬಡಪಾಯಿ ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳುತ್ತಾನೆ ಎಂದು ಮರುಗಿದರು. ಶಿಷ್ಯ ಬಹಳ ದುಃಖದಿಂದ ಕಣ್ಣಲ್ಲಿ ನೀರು ಹಾಕುತ್ತಾ ಇಂದೇ ನನ್ನ ಕೊನೆಯ ದಿನ, ನಾಳಿನ ಸೂರ್ಯೋದಯ ನಾನು ನೋಡುವುದಿಲ್ಲ ಎಂದು ಇದೇ ಚಿಂತೆಯಲ್ಲಿ ಆಶ್ರಮದ ಕಡೆ ನಡೆದನು. ಆಶ್ರಮದಲ್ಲಿ ಗುರು ರಾಮದಾಸರು ಶಾಂತ ಚಿತ್ತರಾಗಿ ಕುಳಿತಿದ್ದರು. ಭಿಕ್ಷೆಯನ್ನು ತೆಗೆದುಕೊಂಡು ಬಂದೆಯಾ ಬಾ ಎಂದು ಪ್ರೀತಿಯಿಂದ ಕರೆದರು. ಶಿಷ್ಯ ಹೇಳಿದ ಹೌದು ಗುರುಗಳೇ, ಭಿಕ್ಷೆಯ ರೂಪದಲ್ಲಿ ನನ್ನ ಸಾವನ್ನೇ ತೆಗೆದುಕೊಂಡು ಬಂದಿರುವೆ. ಎಂದು ಹೇಳಿ ನಡೆದ ಸಂಗತಿಯನ್ನು ಗುರುಗಳ ಬಳಿ ಹೇಳಿ ಒಂದು ಬದಿಯಲ್ಲಿ ಬೇಸರದಿಂದ ಕುಳಿತು ಬಿಟ್ಟನು. ಗುರುಗಳು ಹೇಳಿದರು ಬಾ ಊಟ ಮಾಡು ಎಂದರು ಶಿಷ್ಯ ಹೇಳಿದ ಗುರುಗಳೆ ನನಗೆ ಮನಸ್ಸಿಲ್ಲ ನನ್ನ ಗಂಟಲಲ್ಲಿ ಒಂದು ಹನಿ ನೀರು ಇಳಿಯುವುದಿಲ್ಲ. ನನ್ನ ಚಿಂತೆ ನನಗಾಗಿದೆ ನೀವು ನೋಡಿದರೆ ಊಟ ಮಾಡಿ ಅಂತೀರಿ ಎಂದ. 


ಗುರುಗಳು ಹೇಳಿದರು ಇನ್ನೂ ಒಂದು ರಾತ್ರಿ ಇದೆಯಲ್ಲ ಈಗಲೇ ಏಕೆ ಯೋಚನೆ ಮಾಡುವೆ ಎಂದು ಅವನಿಗೆ ಊಟ ಮಾಡಲು ಒತ್ತಾಯ ಮಾಡದೆ ಅವರು ಭೋಜನ ಸ್ವೀಕರಿಸಲು ಹೋದರು. ರಾತ್ರಿ ಮಲಗುವ ಸಮಯ ಸಮರ್ಥರು ಶಿಷ್ಯನಿಗೆ ಹೇಳಿದರು ನನ್ನ ಕಾಲನ್ನು ಒತ್ತು , ಶಿಷ್ಯನ ಮನಸ್ಸು ಕದಡಿತ್ತು ಆದರೂ ಹೇಳಿದ ಆಗಲಿ ಗುರುಗಳೇ ಇನ್ನೇನು ನನ್ನ ಕೊನೆ ಸಮಯ ಬಂದಿದೆ ಕಡೆಗಾಲದಲ್ಲಿ ನಿಮ್ಮ ಸೇವೆಯನ್ನು ಮಾಡಿ ಸಾಯುವೆ ಗುರು ಸೇವೆಗಿಂತ ಮಿಗಿಲಾದರು ಯಾವುದು ಇಲ್ಲ ಎಂದು ಗುರುಗಳ ಚರಣ ಕಮಲವನ್ನು ಒತ್ತುತ್ತಾ ಕುಳಿತನು. ಗುರುಗಳು ಹೇಳಿದರು ನೀನು ಬೆಳಗಿನ ತನಕ ನನ್ನ ಚರಣವನ್ನು ಬಿಟ್ಟು ಕದಲಬಾರದು ಎಂದರು. ಆಯ್ತು ಗುರುಗಳೇ, ನಾನು ನಿಮ್ಮ ಚರಣ ಸೇವೆ ಬಿಟ್ಟು ಮೇಲೆ ಏಳುವುದಿಲ್ಲ ಎಂದ. ಮತ್ತೆ ಗುರುಗಳು, ಏನೇ ಆದರೂ ನನ್ನ ಚರಣವನ್ನು ಬಿಟ್ಟು ಏಳುವುದಿಲ್ಲ ಎಂದು ಮೂರು ಸಲ ಹೇಳು ಎಂದು ಅವನ ಬಾಯಲ್ಲಿ ಮೂರು ಸಲ ಹೇಳಿಸಿ ನಂತರ ಅವರು ಮಲಗಿ ನಿದ್ರೆ ಹೋದರು.


ಶಿಷ್ಯ, ಪೂರ್ಣ ಮನಸ್ಸಿಟ್ಟು ಗುರುಗಳ ಚರಣ ಸೇವೆ ಮಾಡುತ್ತಿದ್ದನು. ಮಧ್ಯರಾತ್ರಿ ಕಳೆಯಿತು. ಇತ್ತ ಮಾಂತ್ರಿಕನು ತನ್ನ ಶಾಪವನ್ನು ಕಾರ್ಯಕತಗೊಳಿಸಲು ಧನ- ಕನಕ- ವಜ್ರ- ವೈಡೂರ್ಯದ ಸಂಪತ್ತು ತುಂಬಿದ ಕೊಡದೊಂದಿಗೆ ತನ್ನ ಆರಾಧ್ಯ ದೇವಿಯನ್ನು ಕಳಿಸಿದ. ಆಶ್ರಮದಲ್ಲಿ ಶಿಷ್ಯ ಗುರು ಚರಣ ಸೇವೆ ಮಾಡುತ್ತಿದ್ದ. ಆಶ್ರಮದ ಬಾಗಿಲಿಗೆ ಸಂಪತ್ತು ಹಿಡಿದ ದೇವಿ ಬಂದು, ಮಗು ಬಾ ಈ ಸಂಪತ್ತು ನಿನ್ನದೆ ತೆಗೆದುಕೋ ಎಂದಳು. ಶಿಷ್ಯ ಹೇಳಿದ ಕ್ಷಮಿಸು ಮಾತೆ, ನಾನು ಗುರು ಚರಣ ಬಿಟ್ಟು ಎದ್ದು ಬರಲಾರೆ ಕೊಡಬೇಕೆಂದಿದ್ದರೆ ನೀವೇ ಬಂದು ಇಲ್ಲಿ ಕೊಡಿ ಎಂದನು. ಹಾಗೆ ಆಗಲ್ಲ ಈ ಸಂಪತ್ತು ನಿನಗೆ ಬೇಕಿದ್ದರೆ ನೀನೇ ಬರಬೇಕು ಎಂದಳು ದೇವಿ. ಶಿಷ್ಯ ನಿಮಗೆ ಕೊಡಬೇಕೆಂದಿದ್ದರೆ ಇಲ್ಲಿಗೆ ಬನ್ನಿ ನಾನು ಬರಲಾರೆ ಎಂದಾಗ. ದೇವಿ ಅದು ಸಾಧ್ಯವಿಲ್ಲ ಎಂದು ಹೊರಟು ಹೋದಳು. ಇತ್ತ ಮಾಂತ್ರಿಕನಿಗೆ ತಿಳಿಯಿತು ತನ್ನ ಮೊದಲ ಪ್ರಯತ್ನ ಸೋಲಾಯಿತು ಎಂದುಕೊಂಡ. 


ಎರಡನೆಯ ಪ್ರಯತ್ನಕ್ಕೆ ಮಾಂತ್ರಿಕ ಹೊರಟ ಮಧ್ಯರಾತ್ರಿ ಕಳೆದಿದೆ ಎರಡನೇ ಸಾರಿ

ಶಿಷ್ಯನ ತಾಯಿಯ ರೂಪದಲ್ಲಿ ದೇವಿಯನ್ನು ಕಳಿಸಿದ. ಶಿಷ್ಯ ಗುರು ಚರಣ ಸೇವೆ ಮಾಡುತ್ತಿದ್ದ. ಬಾಗಿಲ ಬಳಿ ಬಂದ ಅವಳು, ಕಂದಾ ಹೇಗಿದ್ದೀಯ ನಿನ್ನನ್ನು ನೋಡದೆ ಯಾವುದೋ ಕಾಲವಾಯಿತು ಬಾಕಂದ ನನ್ನನ್ನು ಅಪ್ಪಿಕೋ ಎಂದಳು. ಶಿಷ್ಯ ಹೇಳಿದ ಅಮ್ಮ ನನ್ನ ಕೊನೆಗಾಲದಲ್ಲಿ ನಿನ್ನ ದರ್ಶನ ಮಾಡಿದ್ದು ಒಳ್ಳೆಯ ದಾಯಿತು. ನಾನು ಗುರುಚರಣ ಬಿಟ್ಟು ಬರಲಾರೆ ನೀವೇ ಇಲ್ಲಿಗೆ ಬನ್ನಿ ಎಂದ. ಆಕೆ ತನ್ನ ಪ್ರಯತ್ನ ವಿಫಲವಾದದ್ದು ಕಂಡು ಆ ಶಿಷ್ಯನ ತಾಯಿ ರೂಪದಲ್ಲಿ ಬಂದ ಆಕೆ ಹೊರಟು ಹೋದಳು. ರಾತ್ರಿ ಮೂರನೇ ಜಾವ ಯಮದೂತ ರಾಕ್ಷಸನಂತೆ ಕಾಣುವ

ಮನುಷ್ಯನನ್ನು ಶಿಷ್ಯನಲ್ಲಿ ಕಳಿಸಿದ. ಆಶ್ರಮದ ಬಾಗಿಲ ಬಳಿ ಬಂದು, ಈ ಬಾಲಕ ಬಾ ನಿನ್ನನ್ನು ಕರೆದುಕೊಂಡು ಹೋಗಲು ಬಂದಿರುವೆ. ನಿನ್ನ ಅಂತ್ಯ ಸಮೀಪಿಸಿದೆ ಎಂದ. ಕೋಪದಿಂದ ಹೇಳಿದ ಕಾಲನೇ ಬರಲಿ ಮಹಾ ಕಾಲನೇ ಬರಲಿ ಮೃತ್ಯುವೇ ಎದುರಾಗಲಿ ನನ್ನ ಗುರು ಚರಣವನ್ನು ಬಿಟ್ಟು ನೀನಿದ್ದಲ್ಲಿಗೆ ಬರುವುದಿಲ್ಲ ನೀನೇ ಬೇಕಾದರೆ ಬಾ ಎಂದನು. ಸೋತ ಯಮಕಿಂಕರ ಮಾಯವಾದ. 


ಆಗ ಬೆಳಗಾಗುವ ಸಮಯ ಬಂದಿತು ಚಿಲಿಪಿಲಿ ಗುಟ್ಟುವ ಹಕ್ಕಿಯ ಸ್ವರ ಕೇಳಿತು.

ಮೂಡಣದಲ್ಲಿ ಸೂರ್ಯ ಉದಯಿಸಿದ. ರಾಮದಾಸರು ನಿದ್ರೆಯಿಂದ ಎದ್ದರು. 

ಶಿಷ್ಯನನ್ನು ಕಂಡು ಮಗು ಬೆಳಗಾಯಿತಾ ಎಂದಾಗ, ಹೌದು ಗುರುದೇವ ಬೆಳಗಾಗಿದೆ ಎಂದ. ಗುರುಗಳು ಹೇಳಿದರು ಮಾಂತ್ರಿಕ ನಿನಗೆ ಹೇಳಿದಂತೆ ಬೆಳಗಾಗುವುದರೊಳಗೆ ನಿನ್ನ ಮೃತ್ಯು ಆಗಬೇಕಿತ್ತು ಆದರೆ ನೀನಿನ್ನು ಬದುಕಿರುವೆಯಲ್ಲ ಎಂದರು. ಹೌದು ಗುರುಗಳೇ ನಾನು ಇನ್ನೂ ಜೀವಂತವಾಗಿದ್ದೇನೆ ಎಂದು ಶಿಷ್ಯ ಹೇಳಿ ರಾತ್ರಿ ನಡೆದ ಘಟನೆಯನ್ನು ನೆನಪು ಮಾಡಿಕೊಂಡು ಹೇಳಿದ. ರಾತ್ರಿ ಗುರುಗಳು ಹೇಳಿದ ನುಡಿ “ಏನೇ ಆದರೂ ನನ್ನ ಚರಣ ಬಿಟ್ಟು ಏಳಬೇಡ’ ಎಂದು ಹೇಳಿದ ಗುರುಗಳ ಮಾತಿನ ಅರ್ಥ ಈಗ ಅವನಿಗೆ ಆಯಿತು. ತಕ್ಷಣ ಸಮರ್ಥರಾಮ ದಾಸರ ಪಾದ ಹಿಡಿದು ಜೋರಾಗಿ ಅಳುತ್ತಾ ಹೇಳಿದ. ಗುರುಗಳೇ ಯಾವ ಶಿಷ್ಯನ ಮೇಲೆ ನಿಮ್ಮಂಥ ಗುರುಕಟಾಕ್ಷದ ಕೃಪೆ ಇರುತ್ತದೋ ಆ ಶಿಷ್ಯನನ್ನು ಯಾರು ಏನೂ ಮಾಡಲಾಗುವುದಿಲ್ಲ ಎಂದ. 


ಗುರು ವಾಕ್ಯದಂತೆ ನಡೆಯುವ ಶಿಷ್ಯರ ಹತ್ತಿರ ಮೃತ್ಯುವು ಬರಲು ಹೆದರುತ್ತದೆ ಎಂದಿಗೂ ಬರಲು ಸಾಧ್ಯವಿಲ್ಲ.  


ಯಾವ ಬಂಧನದ ನಿಯಮ ಸದ್ಗುರುವಿಗೆ ಇರುವುದಿಲ್ಲ. ಗುರು ಯಾವಾಗಲೂ ಸರ್ವತಂತ್ರ ಸ್ವತಂತ್ರರು.


ಕೆಲವೊಮ್ಮೆ ನಾವು ಮಾಡುವ ಕಾಯಕದಲ್ಲಿ ಅನೇಕ ಆಕರ್ಷಣೆಗಳು, ಅಡೆತಡೆಗಳು ಕಾಯಕ ಬಿಡುವಂತೆ ಮಾಡುತ್ತವೆ. ಅವುಗಳನ್ನು ಮೀರಿ ಮುನ್ನುಗ್ಗಿದಾಗಲೇ ಜಯ ನಮ್ಮದಾಗಿರುತ್ತದೆ..


ಹರ ಮುನಿದರೆ ಗುರು ಕಾಯುವನು..


-ಆಶಾ ನಾಗಭೂಷಣ.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು